ಬೆಂಗಳೂರು,ಫೆ.7-ಶಾಲಾಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದ್ದರೂ ಹಿಜಾಬ್/ ಕೇಸರಿ ಶಾಲು ವಿವಾದ ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ. ಕಳೆದ ಶುಕ್ರವಾರ ಸರ್ಕಾರ ಶಾಲಾಕಾಲೇಜು ಗಳಲ್ಲಿ ಆಡಳಿತ ಮಂಡಳಿಯವರು ನಿಗದಿಪಡಿಸಿದ ಸಮವಸ್ತ್ರವನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಕಡ್ಡಾಯವಾಗಿ ಧರಿಸಬೇಕೆಂದು ಅಧಿಸೂಚನೆ ಹೊರಡಿಸಿತ್ತು.
ಇದರ ಬೆನ್ನಲ್ಲೇ ಉಡುಪಿಯ ಜಿಲ್ಲೆಯ ಕುಂದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತ್ತೊಂದು ಸಮುದಾಯದ ವಿದ್ಯಾರ್ಥಿಗಳು ಸರ್ಕಾರದ ಆದೇಶಕ್ಕೂ ಕ್ಯಾರೆ ಎನ್ನದೆ ಹಿಜಾಬ್ ಧರಿಸಿಕೊಂಡೇ ಕಾಲೇಜಿಗೆ ಬಂದಿರುವುದು ವಿವಾದದ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಮತ್ತೊಂದು ಕಡೆ ಕುಂದಾಪುರ ತಾಲ್ಲೂಕಿನ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಜೈ ಶ್ರೀರಾಮ್ ಎಂಬ ಘೋಷಣೆಯನ್ನು ಕೂಗುತ್ತಾ ಕಾಲೇಜಿಗೆ ಆಗಮಿಸಿದ್ದರು.
ಇದೀಗ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಂಘಟನೆಗಳ ನಡುವೆ ಮಾತಿನ ಚಕಮಕಿ ನಡೆಯಬಹುದೆಂಬ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಶಾಲಾ-ಕಾಲೇಜಿಗೆ ರಜೆ ಘೋಷಿಸಿದೆ.
ವಿಜಯಪುರಕ್ಕೆ ಆಗಮಿಸಿದ ಕೇಸರಿ ಶಾಲು:
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿಕ್ಕಬಳ್ಳಾಪುರ ಮತ್ತಿತರ ಕಡೆ ಕಾಣಿಸಿಕೊಂಡಿದ್ದ ಕೇಸರಿ ಶಾಲು ಈ ವಿಜಯಪುರಕ್ಕೂ ಕಾಲಿಟ್ಟಿರುವುದು ಹೊಸ ಬೆಳವಣಿಗೆಯಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಶಾಂತೇಶ್ವರ ಪದವಿಪೂರ್ವ ಕಾಲೇಜು ಹಾಗೂ ಜಿಆರ್‍ಬಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕೇಸರಿ ಶಾಲು ಹಾಕಿಕೊಂಡು ತರಗತಿಗೆ ಆಗಮಿಸಿದ್ದರು.
ಸಮುದಾಯದ ವಿದ್ಯಾರ್ಥಿಗಳು ಹಿಜಾಬ್ ಧರಿಸಿಕೊಂಡು ಬಂದರೆ ನಾವು ಕೂಡ ಕೇಸರಿ ಶಾಲು ಹಾಕಿಕೊಂಡೇ ಬರುತ್ತೇವೆ. ಸಮಾನತೆ ಎಂಬುದು ಪ್ರತಿಯೊಬ್ಬರಿಗೂ ಅನ್ವಯವಾಗಬೇಕು. ಕೊಠಡಿಯೊಳಗೆ ಯಾವುದೇ ವಿದ್ಯಾರ್ಥಿಗಳು ಸಮವಸ್ತ್ರ ಹೊರತುಪಡಿಸಿ ಬೇರೆ ಉಡುಪು ಧರಿಸಬಾರದು. ಅವರು ಹಿಜಾಬ್ ಧರಿಸಿ ಬರುವುದಾದರೆ ನಾವು ಕೇಸರಿ ಶಾಲು ಹಾಕಿಕೊಂಡು ಬರುವುದರಲ್ಲಿ ತಪ್ಪೇನು ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ.
ದಿಢೀರನೇ ನಡೆದ ಈ ಬೆಳವಣಿಗೆಯಿಂದ ಕಾಲೇಜಿನ ಆವರಣದ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ತಕ್ಷಣವೇ ಎರಡು ಕಾಲೇಜಿನ ಆಡಳಿತ ಮಂಡಳಿಯವರು ತುರ್ತು ಸಭೆ ನಡೆಸಿ ಇಂದು ಶಾಲಾಕಾಲೇಜುಗಳಿಗೆ ರಜೆ ನೀಡಿದ್ದಾರೆ. ಸಮವಸ್ತ್ರ ಹೊರತುಪಡಿಸಿ ಹಿಜಾಬ್ ಇಲ್ಲವೇ ಕೇಸರಿ ಧರಿಸಿಕೊಂಡು ಬಂದ ಯಾವುದೇ ವಿದ್ಯಾರ್ಥಿಗಳನ್ನು ಕಾಲೇಜಿನೊಳಗೆ ಬಿಡುವುದಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
# ಸರ್ಕಾರದ ಆದೇಶಕ್ಕೆ ಸೆಡ್ಡು ಹೊಡೆದ ವಿದ್ಯಾರ್ಥಿಗಳು:
ಶಾಲಾಕಾಲೇಜುಗಳಲ್ಲಿ ಸರ್ಕಾರ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದರೂ ಇಂದು ಕೆಲವು ವಿದ್ಯಾರ್ಥಿಗಳು ಪುನಃ ಹಿಜಾಬ್ ಧರಿಸಿಯೇ ಕಾಲೇಜಿಗೆ ಆಗಮಿಸಿದ್ದರು. ಕುಂದಾಪುರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 22ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದರು. ಇದಕ್ಕೆ ಪ್ರತಿಯಾಗಿ ಮತ್ತೊಂದು ವಿದ್ಯಾರ್ಥಿ ಗುಂಪು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಕೇಸರಿ ಶಾಲು ಹಾಕಿಕೊಂಡು ಬಂದರು.
ತಕ್ಷಣವೇ ಪ್ರಾಂಶುಪಾಲರು ಗೇಟ್ ಬಳಿಯೇ ಎಲ್ಲ ವಿದ್ಯಾರ್ಥಿಗಳನ್ನು ತಡೆದರು. ಅದರ ಮುಂಭಾಗದಲ್ಲಿ ಸರ್ಕಾರದ ಆದೇಶದಂತೆ ಸಮವಸ್ತ್ರ ಹೊರತುಪಡಿಸಿ ಬೇರೆ ಬಟ್ಟೆಗಳನ್ನು ಧರಿಸಿದವರಿಗೆ ಪ್ರವೇಶಾತಿ ಇಲ್ಲ ಎಂಬ ನಾಮಫಲಕವನ್ನು ಹಾಕಲಾಗಿತ್ತು. ಇದನ್ನು ಒಪ್ಪದ ವಿದ್ಯಾರ್ಥಿನಿಯರು ನ್ಯಾಯಾಲಯದ ಆದೇಶ ಬರುವವರೆಗೂ ನಮಗೆ ಹಿಜಾಬ್ ಧರಿಸುವ ಅವಕಾಶ ಕೊಡಿ. ಸರ್ಕಾರ ಏಕಾಏಕಿ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ನಾಳೆ ನ್ಯಾಯಾಲಯ ಇದರ ಬಗ್ಗೆ ತೀರ್ಪು ಕೊಡಲಿದೆ. ಅಲ್ಲಿಯವರೆಗೂ ನಮಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಇದಕ್ಕೆ ಕೇಸರಿ ಶಾಲು ಧರಿಸಿದ್ದ ವಿದ್ಯಾರ್ಥಿಗಳು ಆಕ್ಷೇಪಿಸಿ ಹಿಜಾಬ್ ಧರಿಸಿದ್ದ ವಿದ್ಯಾರ್ಥಿಗಳನ್ನು ತರಗತಿಯೊಳಗೆ ಬಿಟ್ಟರೆ ನಾವು ಕೂಡ ಕೇಸರಿ ಶಾಲು ಹಾಕಿಕೊಂಡೇ ಹೋಗುತ್ತೇವೆ. ನಮ್ಮಗೊಂದು ನ್ಯಾಯ, ಅವರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದರು.
ಒಂದು ಹಂತದಲ್ಲಿ ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಕೇಸರಿ ಶಾಲು ಹಾಕಿದವರನ್ನು ತಡೆದರೆ ಸುಮ್ಮನಿರುವುದಿಲ್ಲ ಎಂದು ಅಬ್ಬರಿಸಿದರು. ಇದರ ನಡುವೆಯೇ ಕುಂದಾಪುರ ತಾಲ್ಲೂಕಿನ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲಿ ಕೇಸರಿ ಶಾಲು ಹೊದ್ದು ಆಗಮಿಸಿದರು.
# ಕಾಲೇಜುಗಳಿಗೆ ರಜಾ:
ಯಾವಾಗ ಹಿಜಾಬ್‍ಗೆ ಪರ್ಯಾಯವಾಗಿ ಕೇಸರಿ ಶಾಲು ವಿವಾದ ಆರಂಭವಾಯಿತೋ ತಕ್ಷಣವೇ ಕಾಲೇಜು ಆಡಳಿತ ಮಂಡಳಿಯವರು ಇಂದು ಕಾಲೇಜಿಗೆ ರಜಾ ಘೋಷಣೆ ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಾವು ಸರ್ಕಾರದ ಆದೇಶವನ್ನು ಪಾಲಿಸುತ್ತೇವೆ. ಯಾವುದೇ ಕಾರಣಕ್ಕೂ ಹಿಜಾಬ್ ಇಲ್ಲವೇ ಕೇಸರಿ ಧರಿಸಿದ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ ಎಂದು ಪ್ರಾಂಶುಪಾಲರು ಹೇಳಿದ್ದಾರೆ.
ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲೂ ಹಿಜಾಬ್ ಮತ್ತು ಕೇಸರಿಶಾಲು ಕಾಣಿಸಿಕೊಂಡಿದೆ. ಹಿಜಾಬ್‍ಗೆ ಪರ್ಯಾಯವಾಗಿ ಕೆಲವು ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ. ಚಿಕ್ಕಮಗಳೂರಿನ ಐಡಿಎಸ್‍ಜಿ ಕಾಲೇಜಿನಲ್ಲಿ ಹಿಜಾಬ್ ಬೆಂಬಲಿಸಿ ಕೆಲವು ವಿದ್ಯಾರ್ಥಿಗಳು ನೀಲಿ ಶಾಲು ಹಾಕಿಕೊಂಡು ಬಂದಿದ್ದರು. ವಿದ್ಯಾರ್ಥಿಗಳು ಹಿಜಾಬ್ ತೆಗೆಸಬಾರದೆಂದು ಬೆಂಬಲಿಸಿ ಪ್ರತಿಭಟನೆ ನಡೆಸಿದರು.
ಆಡಳಿತ ಮಂಡಳಿಯವರು ಸಮವಸ್ತ್ರ ಧರಿಸದ ವಿದ್ಯಾರ್ಥಿಗಳಿಗೆ ಒಳಪ್ರವೇಶಿಸಲು ಅವಕಾಶವನ್ನು ಕೊಡಲಿಲ್ಲ. ಉಡುಪಿಯ ಗಂಗೊಳ್ಳಿ ಕಾಲೇಜಿನಲ್ಲೂ ಸಮವಸ್ತ್ರ ಧರಿಸದ ವಿದ್ಯಾರ್ಥಿಗಳಿಗೆ ಗೇಟ್‍ನಲ್ಲೇ ತಡೆ ಹಿಡಿಯಲಾಯಿತು.
ಬಸನಬಾಗೇವಾಡಿಯ ಬಸವೇಶ್ವರ ಕಾಲೇಜಿನಲ್ಲೂ ಕೂಡ ಕೇಸರಿ ಮತ್ತು ಹಿಜಾಬ್ ಸಂಘರ್ಷ ಕಂಡುಬಂದಿದೆ. ಹಾಸನದಲ್ಲೂ ಸರ್ಕಾರಿ ಆದೇಶಕ್ಕೆ ತಲೆಕೆಡಿಸಿಕೊಳ್ಳದೆ ವಿದ್ಯಾರ್ಥಿನಿಯರು ಎಂದಿನಂತೆ ಹಿಜಾಬ್ ಧರಿಸಿದ್ದರು. ಇಲ್ಲಿನ ಗೃಹ ವಿಜ್ಞಾನ ಸರ್ಕಾರಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ಬಂದಿದ್ದರು.
