ಹಿಜಾಬ್ ಹಿಂದಿವೆ ಮತಾಂಧ ಶಕ್ತಿಗಳು : ಸಚಿವ ಕೋಟಾ ಶ್ರೀನಿವಾಸ ಪೂಜಾರಿ

Social Share

ಬೆಂಗಳೂರು,ಫೆ.5- ಸಮಾಜ ಒಡೆಯುವ ಕುತಂತ್ರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ನಿಗದಿಪಡಿಸಿರುವ ಸಮವಸ್ತ್ರವೇ ಕಡ್ಡಾಯ ಹೊರತು ಬೇರೆಯಲ್ಲ. ಕರಾವಳಿ ಭಾಗದಲ್ಲಿ ಹಿಜಾಬ್‍ಗೆ ಪ್ರತಿಯಾಗಿ ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ. ಇದು ಕ್ರಿಯೆಗೆ ಪ್ರತಿಕ್ರಿಯೆ ನಡೆದಿದೆ. ಹಾಗಂತ ಕೇಸರಿ ಶಾಲನ್ನು ಸಮರ್ಥಿಸಿಕೊಳ್ಳುತ್ತೇವೆಎಂದು ಅರ್ಥವಲ್ಲ ಎಂದರು.
ನಮ್ಮ ಜಿಲ್ಲೆಯಲ್ಲಿ ಮತಾಂಧ ಗುಂಪನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಬೇಕು. ಕೆಲ ವಿದ್ಯಾರ್ಥಿನಿಯರು ಹಿಜಾಬ್‍ನ್ನೇ ಮುಂದಿಟ್ಟುಕೊಂಡು ವಿವಾದ ಸೃಷ್ಟಿಸುವುದು ಸರಿಯಲ್ಲ. ಅದು ಸರಿಯಾ, ಇದು ಸರಿಯಾ ಎಂಬುದು ಮುಖ್ಯವಲ್ಲ. ಒಂದು ತಪ್ಪಾದರೆ ಇನ್ನೊಂದು ತಪ್ಪು ಮಾಡುವುದಲ್ಲ.
ಇಂಥ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯನಂತವರು ತಿಳಿಗೊಳಿಸಬೇಕು. ಆದರೆ ಮತಗಳ ಮೇಲೆ ಕಣ್ಣಿಟ್ಟು ರಾಜಕೀಯ ಹೇಳಿಕೆ ನೀಡುವುದು ಸರಿಯಲ್ಲ. ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿ ಹಿಜಾಬ್ ಧರಿಸಿ ಶಾಲೆಗೆ ಬರುವುದು ತಪ್ಪು ಎಂಬ ಭಾವನೆ ಇರಬಹುದು. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕಾರಣಕ್ಕಾಗಿ ಈ ರೀತಿಯ ಬೆಳವಣಿಗೆಗಳು ನಡೆದಿವೆ. ಇದನ್ನು ಹೊರಗಿನ ಮತಾಂಧ
ಶಕ್ತಿಗಳು ಮಾಡುತ್ತಿವೆ ಎಂಬ ಅನುಮಾನವಿದೆ.
ಇದರಲ್ಲಿ ದೇಶದ ಭದ್ರತೆಗೆ ತೊಂದರೆಯಾಗಬೇಕು ಎನ್ನುವ ಷಡ್ಯಂತರ ಅಡಗಿದಂತಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆಹಚ್ಚಿ ಅಂಥ ಗುಂಪುಗಳನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಹೇಳಿದರು. ನಮ್ಮಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ಧರ್ಮಾಂಧತೆ ಸೃಷ್ಟಿಗೆ ಸರ್ಕಾರ ಅವಕಾಶ ಕೊಡುವುದಿಲ್ಲ. ಹೊರಗಿನ ಮತಾಂಧರ ಮೂಲಕ ಸಮಾಜ ಒಡೆಯುವ ಷಡ್ಯಂತರ, ಕುತಂತ್ರ ನಡೆಯುತ್ತಿದೆ ಎಂದರು.

Articles You Might Like

Share This Article