ಹಿಜಾಬ್‍ನಿಂದಲೇ ಕಾಂಗ್ರೆಸ್ ಸರ್ವನಾಶವಾಗುತ್ತೆ : ಈಶ್ವರಪ್ಪ ಭವಿಷ್ಯ

ಮೈಸೂರು,ಫೆ.8-ಹಿಜಾಬ್ ವಿಚಾರದಿಂದಲೇ ಕಾಂಗ್ರೆಸ್ ಸರ್ವನಾಶ ಆಗೋದು ಖಚಿತ ಎಂದು ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಡುಪಿಯಿಂದಲೇ ಕಾಂಗ್ರೆಸ್ ಸರ್ವನಾಶದ ಆರಂಭವಾಗಿದೆ.

ಈ ಹಿಂದೆ ಗೋ ಹತ್ಯೆ ನಿಷೇಧವನ್ನು ಉಡುಪಿಯಲ್ಲೇ ಮಾಡಿದ್ದರು. ಆಗ ಸಿದ್ದರಾಮಯ್ಯ ಸಿಎಂ ಅಕಾರ ಕಳೆದುಕೊಂಡರು. ಚಾಮುಂಡೇಶ್ವರಿಯಲ್ಲೂ ಸೋತರು. ಈಗ ಅಲ್ಲಿಂದಲೇ ಹಿಜಾಬ್ ವಿವಾದ ಹುಟ್ಟಿಕೊಂಡಿದೆ. ಹಿಜಾಬ್ ವಿವಾದದ ಹಿಂದೆ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷ ಇದೆ. ವಟ್ ಬ್ಯಾಂಕ್‍ಗಾಗಿ ಕಾಂಗ್ರೆಸ್ ಮುಖಂಡರಿಂದ ಈ ಕೆಲಸ ನಡೆದಿದೆ ಎಂದರು.

ಕಾಂಗ್ರೆಸ್ ಮುಖಂಡರು ಮನಸು ಮಾಡಿದ್ದರೆ ಸಮಸ್ಯೆ ಬಗೆಹರಿಸಬಹುದಿತ್ತು. ಆ ಆರು ಜನ ವಿದ್ಯಾರ್ಥಿನಿಯರಿಗೆ ತಿಳಿವಳಿಕೆ ನೀಡಬಹುದಿತ್ತು. ಆದರೆ, ಕಾಂಗ್ರೆಸ್‍ಗೆ ಮುಸ್ಲಿಂ ಮತಗಳೇ ಮುಖ್ಯವಾದವು. ಕಾಂಗ್ರೆಸ್ ಒಡೆದು ಆಳುವ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಹಿಂದೆ ವೀರಶೈವ, ಲಿಂಗಾಯತ ಧರ್ಮ, ನಂತರ ಮತಾಂತರದ ವಿಷಯ, ಗೋಹತ್ಯೆ. ಈಗ ಹಿಜಾಬ್ ಅವರ ರಾಜಕೀಯ ವಿಚಾರವಾಗಿದೆ. ಹಿಂದೂ-ಮುಸ್ಲಿಂ ಒಡೆದಿದ್ದು ಕಾಂಗ್ರೆಸ್. ಅಪವಾದ ನಮ್ಮ ಮೇಲೆ ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಇನ್ನೂ ಮೂರು ತಿಂಗಳು ಈ ವಿಚಾರ ಪ್ರಸ್ತಾಪ ಇಲ್ಲ. ಪಂಚರಾಜ್ಯ ಚುನಾವಣೆ ಮುಗಿಯುವವರೆಗೂ ಸಂಪುಟ ವಿಸ್ತರಣೆ ಇಲ್ಲ. ಈ ಬಗ್ಗೆ ಖುದ್ದು ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದಾರೆ.

ಇದನ್ನು ನಾನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಈ ಬಗ್ಗೆ ನನಗೆ ಯಾರೂ ಪಕ್ಷದ ವರಿಷ್ಠರು ಹೇಳಿಲ್ಲ. ಮಾಧ್ಯಮಗಳಲ್ಲಿ ಬಂದಿರುವುದನ್ನು ಓದಿದ್ದೇನೆ. ಈ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ನಾನು ಬದ್ದ. ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಇದನ್ನು ಪಕ್ಷದ ವರಿಷ್ಠ ನಾಯಕರು ನಿರ್ಧರಿಸುತ್ತಾರೆ ಎಂದು ತಿಳಿಸಿದರು.