ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ ಹಿಜಾಬ್ ವಿವಾದ

Social Share

ಬೆಂಗಳೂರು, ಫೆ.5- ಕರಾವಳಿಯಲ್ಲಿ ಕಾಣಿಸಿಕೊಂಡ ಹಿಜಾಬ್ ಕಿಡಿ ತಣ್ಣಗಾಗುವಂತೆ ಕಾಣುತ್ತಿಲ್ಲ. ಸಂಸತ್ ನಲ್ಲೂ ನಿನ್ನೆ ಹಿಜಾಬ್ ವಿಚಾರ ಪ್ರಸ್ತಾಪವಾಗಿ, ಗಲಾಟೆ-ಗದ್ದಲವಾಗಿದೆ. ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಹಿಜಾಬ್ ಧರಿಸುವವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಹಿಜಾಬ್ ವಿವಾದ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ ದಂತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.
ಕರಾವಳಿ ಭಾಗದಲ್ಲಿ ಕಿಡಿಯಾಗಿ ಕಾಣಿಸಿಕೊಂಡ ಹಿಜಾಬ್ ವಿವಾದ ಹಂತ ಹಂತವಾಗಿ ರಾಜ್ಯ ವ್ಯಾಪಿಸಿದ್ದು, ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗುತ್ತಿದೆ. ಕೋಮು ಮತ್ತು ಮತೀಯವಾದಕ್ಕೆ ಸಂಬಂಧಿಸಿದ ಈ ವಿವಾದ ಬೇರೆಲ್ಲಾ ಸಮಸ್ಯೆಗಳಿಗಿಂತಲೂ ಹೆಚ್ಚು ಚರ್ಚೆಗೆ ಒಳಗಾಗುತ್ತಿದ್ದು, ಅಶಾಂತಿಯ ದಳ್ಳುರಿಗೆ ಕಾರಣವಾಗಿದೆ.
ಬೆಜೆಪಿ ಬೆಂಬಲಿಸುವ ಬಲಪಂಥಿಯ ಸಂಘಟನೆಗಳು ಮತ್ತು ಮುಖಂಡರು ಹಿಜಾಬ್ ನಿಷೇಧವಾಗಬೇಕು ಎಂಬ ಒತ್ತಾಯ ಮಾಡುತ್ತಿದ್ದರೆ, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮತ್ತು ಎಡ ಪಂಥೀಯ ನಾಯಕರು ಹಿಜಾಬ್‍ಗೆ ಅವಕಾಶ ಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ನಡುವೆ ಹಿಂದು ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಾತ್ರ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ಈಗ ರಾಷ್ಟ್ರೀಯ ಸಮಸ್ಯೆಯಾಗಿ ಪರಿಣಮಿಸಿದೆ. ಸಂಸತ್‍ನಲ್ಲೂ ನಿನ್ನೆ ಈ ವಿಷಯವಾಗಿ ಗಲಾಟೆ, ಗದ್ದಲವಾಗಿದೆ. ಹಿಜಾಬ್‍ಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಇಂದು ಕಲುಬರಗಿ, ಕುಂದಾಪುರ, ಮಂಗಳೂರು ಸೇರಿ ಹಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಪರ ವಿರೋಧ ವಾದ ಪ್ರತಿವಾದಗಳ ಕಾವೇರಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
ಕಾಲೇಜು ಹಂತದಲ್ಲಿ ವಿವಾದ ಸೃಷ್ಟಿಯಾಗಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಕೊರೊನಾದಿಂದಾಗಿ ಮೂರು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಗಳು ಸ್ಥಬ್ಧಗೊಂಡಿದ್ದವು. ಈಗಷ್ಟೇ ಶಾಲಾ ಕಾಲೇಜುಗಳು ಆರಂಭವಾಗಿದ್ದು, ಅದರ ಮಧ್ಯೆ ಹಿಜಾಬ್ ವಿವಾದ ಶಿಕ್ಷಣಕ್ಕೆ ಕಂಠಕವಾಗಿ ಪರಿಣಮಿಸಿದೆ.
ಹಿಜಾಬ್ ಧರಿಸುವುದು ತಮ್ಮ ಧಾರ್ಮಿಕ ಹಕ್ಕು ಅದನ್ನು ಪಾಲಿಸಲು ಅವಕಾಶ ನೀಡಬೇಕು ಎಂದು ಮುಸ್ಲಿಂ ವಿದ್ಯಾರ್ಥಿನಿಯರ ಒತ್ತಾಯವಾಗಿದೆ. ಇದೇ ಉದ್ದೇಶಕ್ಕಾಗಿ ವಿದ್ಯಾರ್ಥಿನಿಯರು ಹೈಕೋರ್ಟ್ ಮೊರೆ ಹೋಗಿದ್ದಾರೆ. ವಿಚಾರಣೆ ಫೆಬ್ರವರಿ 8ರಂದು ನ್ಯಾಯಾಲಯ ಎರಡು ಅರ್ಜಿಗಳ ವಿಚಾರಣೆ ನಡೆಸಲಿದೆ. ಆದರೆ ಈ ನಡುವೆ ಉಂಟಾಗಿರುವ ಗೋಜು ಗದ್ದಲಗಳು ಪರಿಸ್ಥಿತಿಯನ್ನು ಹದಗೆಡಿಸಿವೆ.
ರಾಜಕೀಯ ನಾಯಕರು ತಮ್ಮ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡಲಾರಂಭಿಸಿದ್ದಾರೆ. ನಿನ್ನೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನೆಯಲ್ಲಿ ಮುಸ್ಲಿಂ ನಾಯಕರು ಸಭೆ ನಡೆಸಿದ್ದರು. ಬಳಿಕ ಸಿದ್ದರಾಮಯ್ಯ ಅವರ ಹಿಜಾಬ್ ಧರಿಸುವುದು ಧಾರ್ಮಿಕ ಸ್ವಾತಂತ್ರ್ಯ ಅದನ್ನು ಆಚರಣೆ ಮಾಡಲು ಸಂವಿಧಾನ ಅವಕಾಶ ನೀಡಿದೆ. ಬಿಜೆಪಿ ಇದರಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳಿಕೆ ನೀಡುತ್ತಿದ್ದಂತೆ ಎಲ್ಲೆಡೆ ಚರ್ಚೆಗಳು ಬಿರುಸು ಪಡೆದುಕೊಂಡಿವೆ.
ಇಂದು ಬೆಳಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ್ ಸಿಂಹ ಹಿಜಾಬ್‍ಗೆ ಅವಕಾಶ ನೀಡಬಾರದು ಎಂದು ಸರ್ಕಾರವನ್ನು ಆಗ್ರಹಿಸಿದ್ದು, ಸಿದ್ದರಾಮಯ್ಯ ಅವರು ಅಕಾರಕ್ಕಾಗಿ ಸಿದ್ದರಹಿಮಯ್ಯ ಬೇಕಾದರೂ ಆಗುತ್ತಾರೆ ಎಂದಿದ್ದಾರೆ.
ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು, ಒಂದುವರೆ ವರ್ಷದಿಂದ ಈ ಸಮಸ್ಯೆ ಇರಲಿಲ್ಲ. ಈಗ ಹೊಸದಾಗಿ ಸೃಷ್ಟಿಯಾಗಿದೆ. ಹಿಜಾಬ್ ಹೆಸರಿನಲ್ಲಿ ಧಮಾಂಧ ಶಕ್ತಿಗಳು ವಿವಾದ ಹುಟ್ಟು ಹಾಕಿದ್ದಾರೆ. ರಾಜಕೀಯ ಮುಖಂಡರು ಪರಿಸ್ಥಿತಿಯನ್ನು ತಿಳಿಗೊಳಿಸಬೇಕಿತ್ತು.
ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರಂತಹ ನಾಯಕರು ರಾಜಕೀಯಕ್ಕಾಗಿ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಇದರ ಹಿಂದೆ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ಇದೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಸಂಚಿದೆ. ಹಿಜಾಬ್ ವಿಚಾರ ಕಾಶ್ಮೀರದಲ್ಲಿ ಚರ್ಚೆಯಾಗಬೇಕಿತ್ತು. ಆದರೆ ನಮ್ಮಲ್ಲಿ ಚರ್ಚೆಗೆ ಗ್ರಾಸವಾಗಿರುವುದು ವಿಷಾದನೀಯ ಎಂದಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಹಿಜಾಬ್ ಧರಿಸುವುದಾದರೆ ಪಾಕಿಸ್ತಾನಕ್ಕೆ ಹೋಗಿ. ಪಾಕಿಸ್ತಾನ ಇರುವುದೇ ನಿಮ್ಮ ಆಚರಣೆಗಳಿಗಾಗಿ, ಅಲ್ಲಿಗೆ ಹೋಗಿ ನೆಲೆಸಿ ಎಂದು ಸವಾಲು ಹಾಕಿದ್ದಾರೆ. ಮಾಜಿ ಸಚಿವ ಸೊಗಡು ಶಿವಣ್ಣ ಅವರು ಮಾತನಾಡಿ, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ಮತ್ತು ಕೇಸರಿ ಶಾಲು ಎರಡಕ್ಕೂ ಅವಕಾಶ ನೀಡಬಾರದು. ಏಕರೂಪವಸ್ತ್ರ ಸಂಹಿತೆ ಜಾರಿಗೆ ತರಬೇಕು. ಸದ್ಯಕ್ಕೆ ತುಮಕೂರು ಜಿಲ್ಲೆಗಳಲ್ಲಿ ಹಿಜಾಬ್ ಸಮಸ್ಯೆ ಇಲ್ಲ, ಕರಾವಳಿ ಭಾಗದಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಆತಂಕವಾಗುತ್ತಿದೆ ಎಂದಿದ್ದಾರೆ.
ಇನ್ನೂ ಕಾಂಗ್ರೆಸ್ ನಾಯಕರು ಹಿಜಾಬ್‍ಗೆ ಒತ್ತಾಸೆಯಾಗಿ ನಿಂತಿದು, ಕಲುಬರಗಿಯ ಶಾಸಕಿ ಖನೀಜ್ ಫಾತೀಮಾ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಈ ವೇಳೆ ಮಾತನಾಡಿರುವ ಅವರು, ಸಾಧ್ಯವಾದರೆ ತಾವು ಉಡುಪಿಗೆ ಹೋಗಿ ವಿದ್ಯಾರ್ಥಿನಿಯರ ಪ್ರತಿಭಟನೆಗೆ ಬೆಂಬಲ ವ್ಯಕ್ತ ಪಡಿಸುವುದಾಗಿ ತಿಳಿಸಿದ್ದಾರೆ. ನಾನು ವಿಧಾನಸೌಧದಲ್ಲಿ ಹಿಜಾಬ್ ಧರಿಸಿಯೇ ಕೂರುತ್ತೇನೆ.
ಧೈರ್ಯವಿದ್ದರೆ ಯಾರಾದರೂ ತಡೆಯಲಿ ಎಂದು ಸವಾಲು ಹಾಕಿದ್ದು, ರಾಜ್ಯದಲ್ಲಿ ಅಭಿವೃದ್ಧಿಯಾಗಿಲ್ಲ, ಅದನ್ನು ಮರೆ ಮಾಚಲು ಹಿಜಾಬ್ ವಿಚಾರ ಮುಂದಿಟ್ಟುಕೊಂಡು ಗಲಾಟೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಿಜಾಬ್ ವಿವಾದದ ಹಿಂದೆ ಎಸ್‍ಡಿಪಿಐ ಮುಖಂಡರ ಕೈವಾಡ ಇದೆ ಎಂದು ಕರಾವಳಿಯ ಕಾಂಗ್ರೆಸ್ ನಾಯಕರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ವರದಿ ನೀಡಿದ್ದಾರೆ.
ಮಾಜಿ ಶಿಕ್ಷಣ ಸಚಿವ ತನ್ವೀರ್ ಸೆಠ್ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದು, ಹೆಣ್ಣು ಮಕ್ಕಳು ವಯೋ ಸಹಜ ದೈಹಿಕ ಕ್ರಿಯೆಯನ್ನು ಮರೆ ಮಾಚಲು ಹಿಜಾಬ್ ಅನುಕೂಲಕರವಾಗಿದೆ. ಪ್ರತಿಯೊಂದ ಧರ್ಮದಲ್ಲೂ ವಯಸ್ಸಿಗೆ ಅನುಗುಣವಾಗಿ ವಸ್ತ್ರಗಳನ್ನು ಧರಿಸುವುದು ಸರ್ವೇ ಸಾಮಾನ್ಯ.
ತಾವು ಶಿಕ್ಷಣ ಸಚಿವರಾಗಿದ್ದಾಗ ಸ್ಕರ್ಟ್ ಮತ್ತು ಶರ್ಟ್ ಸಮವಸ್ತ್ರವನ್ನು ನಿಷೇಸಿ ಚೂಡಿದಾರ್ ಅನ್ನು ಧರಿಸಲು ಆದೇಶಿಸಲಾಗಿತ್ತು. ಪ್ರಸ್ತುತ ವಿವಾದದಲ್ಲಿ ಕೆಲ ಸಂಘಟನೆಗಳು ಸಾರ್ವಜನಿಕರನ್ನು ದಾರಿ ತಪ್ಪಿಸಿ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವ ಪ್ರಯತ್ನ ನಡೆಸುತ್ತಿವೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಶಾಸಕಿ ಕೇಂದ್ರ ಸರ್ಕಾರ ಗಣರಾಜ್ಯೋತ್ಸವದ ಫೆರಡ್‍ನಲ್ಲಿ ಕೇಂದ್ರ ಸರ್ಕಾರ ನಾರಾಯಣಗುರುಗಳ ಸ್ಥಬ್ಧ ಚಿತ್ರವನ್ನು ಹೊರಗಿಟ್ಟಿತ್ತು. ಅದನ್ನು ವಿರೋಸಿ ಬಜರಂಗದಳವರೆ ಪ್ರತಿಭಟನೆ ನಡೆಸಿದ್ದರು. ಆ ವಿವಾದವನ್ನು ಮರೆ ಮಾಚಲು ಹಿಜಾಬ್ ಗಲಾಟೆ ಮುನ್ನೆಲೆಗೆ ಬಂದಿದೆ. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ತಡೆ ಕಾಲೇಜು ಪ್ರಾಂಶುಪಾಲರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

Articles You Might Like

Share This Article