ದಕ್ಷಿಣ ಭಾರತೀಯರನ್ನು ಮದ್ರಾಸಿ ಎಂದು ಕರೆಯುವ ಮೂಲಕ ಕಾಲೆಳೆಯುವ ಪ್ರಯತ್ನ ನಡೆಯುತ್ತಲೇ ಇದೆ. ಈ ನಡುವೆ ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಹುದ್ದೆಗಳನ್ನು ಕನ್ನಡಿಗರು ಅಲಂಕರಿಸಿ ತಮ್ಮ ಪ್ರೌಢಿಮೆ ಮೆರೆದಿರುವುದು ಇದೆ.
ಈಗ ಐತಿಹಾಸಿಕ ಹಿನ್ನೆಲೆಯುಳ್ಳ ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷರು ಚುನಾಯಿತರಾಗುವ ಸನ್ನಿಹದಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಯಾಗುತ್ತಿದೆ.
ಚಲನಚಿತ್ರ ರಂಗದಲ್ಲಿ ಪ್ಯಾನ್ ಇಂಡಿಯಾ ದಾಟಿ, ಜಾಗತಿಕವಾಗಿ ಸದ್ದು ಮಾಡಿದ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿ ಹಾಟ್ ಹಿಂದಿ ಪ್ರದೇಶವನ್ನು ಕಣ್ಣರಳಿಸುವಂತೆ ಮಾಡಿದ ದಕ್ಷಿಣ ಭಾರತೀಯರು, ಈಗ ರಾಜಕಾರಣದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ.
ಈ ಮೊದಲು ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಅವರು ಎಐಸಿಸಿ ಅಧ್ಯಕ್ಷರಾಗಿದ್ದರು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಕಾಂಗ್ರೆಸ್‍ನಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದರು. ಕರ್ನಾಟಕದಿಂದ ಪ್ರಧಾನಿ ಹುದ್ದೆಗೇರಿದ ಏಕೈಕ ಮುತ್ಸದ್ದಿ ಎಚ್.ಡಿ.ದೇವೇಗೌಡರು ಕೂಡ ರಾಷ್ಟ್ರ ರಾಜಕಾರಣದಲ್ಲಿ ಭೀಷ್ಮ ಪಿತಾಮಹರಂತೆ ಗುರುತಿಸಿಕೊಂಡಿದ್ದಾರೆ.
ಬಿಜೆಪಿಯಲ್ಲಿ ಅನಂತಕುಮಾರ್ ಸರ್ವವ್ಯಾಪ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನೆರೆ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಜಯಲಲಿತಾ, ಕರುಣಾನಿ, ಚಂದ್ರಬಾಬು ನಾಯ್ಡು ಮತ್ತಿತರರು ಪ್ರಭಾವಶಾಲಿಯಾಗಿದ್ದರು. ಈ ನಡುವೆ ಕೆಲ ಕಾಲ ದಕ್ಷಿಣ ಭಾರತೀಯರ ಪ್ರಭಾವ ತಗ್ಗಿದಂತೆ ಕಂಡು ಬಂದಿತ್ತು.
ಈಗ ಮತ್ತೆ ರಾಷ್ಟ್ರ ರಾಜಕಾರಣದಲ್ಲಿ ಕನ್ನಡಿಗರ ದರ್ಬಾರ್ ಶುರುವಾಗಿದ್ದು, ಅದಕ್ಕೆ ಮತ್ತಷ್ಟು ಶಕ್ತಿ ತುಂಬುವಂತೆ 134 ವರ್ಷಗಳ ಸುದೀರ್ಘ ಇತಿಹಾಸವುಳ್ಳ ರಾಷ್ಟೀಯ ಪಕ್ಷಕ್ಕೆ ಕನ್ನಡಿಗರೊಬ್ಬರು ಅಧ್ಯಕ್ಷರಾಗುವುದು ಬಹುತೇಕ ಖಚಿತವಾದಂತಾಗಿದೆ.
1888ರಲ್ಲಿ ಭಾರತದ ಸ್ವತಂತ್ರ ಹೋರಾಟಕ್ಕಾಗಿ ಸ್ಥಾಪನೆಗೊಂಡ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು, ಭಾರತದ ಉಕ್ಕಿನ ಮನುಷ್ಯ ವಲ್ಲಭಾಯಿ ಪಟೇಲ್ ಅವರಂತಹ ಗಣ್ಯ ವ್ಯಕ್ತಿಗಳು ಅಲಂಕರಿಸಿದ ಹುದ್ದೆಗೆ ಈಗ ಕನ್ನಡಿಗರೊಬ್ಬರು ಆಯ್ಕೆ ಆಗುತ್ತಿರುವುದು ಹೆಮ್ಮೆಯ ವಿಷಯ.
ಬರೋಬ್ಬರಿ 22 ವರ್ಷಗಳ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯುತ್ತಿದ್ದು, ಇದಕ್ಕೆ ಕರ್ನಾಟಕದ ಬೀದರ್ ಜಿಲ್ಲೆಯ ವರಹಟ್ಟಿ ಗ್ರಾಮದಲ್ಲಿ ಜನಿಸಿದ ಮಲ್ಲಿಕಾರ್ಜುನ್ ಖರ್ಗೆ ನಾಮಪತ್ರ ಸಲ್ಲಿಸಿದ್ದು, ಇವರ ಆಯ್ಕೆ ಈಗಾಗಲೇ ಖಚಿತವಾದಂತಾಗಿದೆ.
ಈಗಾಗಲೇ ರಾಷ್ಟ್ರೀಯ ಯುವ ಕಾಂಗ್ರೆಸ್‍ನ ಅಧ್ಯಕ್ಷರಾಗಿ ಶ್ರೀನಿವಾಸ್ ಮತ್ತು ಕಾರ್ಯದರ್ಶಿಯಾಗಿ ರಕ್ಷಾ ರಾಮಯ್ಯ ನೇಮಕವಾಗಿದ್ದು ಕಾಂಗ್ರೆಸ್ ಪಕ್ಷದ ಪ್ರಮುಖ ಹುದ್ದೆಗಳನ್ನು ಕನ್ನಡಿಗರೇ ಅಲಂಕರಿಸಿರುವುದು ವಿಶೇಷ. ಇತ್ತ ಆಡಳಿತರೂಢ ಬಿಜೆಪಿಯಲ್ಲೂ ಕನ್ನಡಿಗರ ದಂಡೇ ಇದೆ. ಇತ್ತೀಚಿಗಷ್ಟೇ ಬಿಡುಗಡೆಯಾದ ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿಯಲ್ಲಿ ರಾಜ್ಯದ ಪ್ರಭಾವಿ ನಾಯಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರ್ಪಡೆ ಜೊತೆಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಹ ಸ್ಥಾನ ಪಡೆದುಕೊಂಡಿದ್ದಾರೆ.
ಇದರ ಜೊತೆಗೆ ಬಿಜೆಪಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾಗಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿ ತೇಜಸ್ವಿ ಸೂರ್ಯ ನಿರ್ವಹಿಸುತ್ತಿದ್ದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಟಿ.ರವಿ ಮಹಾರಾಷ್ಟ್ರ, ಗೋವಾ, ತಮಿಳುನಾಡು ರಾಜ್ಯಗಳ ಉಸ್ತುವಾರಿಯಾದ್ದಾರೆ.
ಕೇಂದ್ರ ಸರ್ಕಾರದ ಪ್ರಮುಖ ಸಂಸದೀಯ ವ್ಯವಹಾರಗಳ ಖಾತೆಯನ್ನು ಪ್ರಹ್ಲಾದ್ ಜೋಶಿ ನಿಭಾಯಿಸುತ್ತಿದ್ದು, ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರಾಗಿ ಶೋಭಾ ಕರಂದ್ಲಾಜೆ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವರಾಗಿ ರಾಜೀವ್ ಚಂದ್ರಶೇಖರ್ ನಿಭಾಯಿಸುತ್ತಿದ್ದಾರೆ.ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕನ್ನಡಿಗರು ಪ್ರಮುಖ ಹುದ್ದೆಗಳನ್ನು ಪಡೆಯುವ ಮೂಲಕ ಭಾರತ ರಾಜಕೀಯದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಿದ್ದು ದೆಹಲಿಯಲ್ಲಿ ಕನ್ನಡಿಗರ ದರ್ಬಾರ್ ಎಂದರೆ ತಪ್ಪಾಗುವುದಿಲ್ಲ.
ಖರ್ಗೆ ಪಕ್ಷ ನಿಷ್ಠೆಗೆ ಒಲಿದ ಅದೃಷ್ಟ: 1972ರಲ್ಲಿ ಗುರುಮಿಟ್ಕಲ್ ಕ್ಷೇತ್ರದಿಂದ ಶಾಸಕರಾದ ಖರ್ಗೆ 9 ಬಾರಿ ವಿಧಾನಸಭೆ ಪ್ರವೇಶಿಸಿದ್ದರು. 2009ರ ಲೋಕಸಭೆ ಚುನಾವಣೆಯಲ್ಲಿ ಕಲಬುರ್ಗಿ ಕ್ಷೇತ್ರದಿಂದ ಗೆದ್ದು ದೆಹಲಿ ಮುಟ್ಟಿದ ಮಲ್ಲಿಕಾರ್ಜುನ ಖರ್ಗೆ ತಮ್ಮ ಪಕ್ಷನಿಷ್ಠೆ, ಹೋರಾಟ, ಸಾಮಾಜಿಕ ಕಳಕಳಿಗಳಿಂದ ಎಐಸಿಸಿ ಅಧ್ಯಕ್ಷ ಗಾದಿಯ ಬಾಗಿಲಿನಲ್ಲಿ ನಿಂತಿದ್ದಾರೆ.
50 ವರ್ಷಕ್ಕೂ ಹೆಚ್ಚು ರಾಜಕೀಯ ಜೀವನದಲ್ಲಿ ಯಾವತ್ತು ಪಕ್ಷದ ಬಗ್ಗೆ ಅಶಿಸ್ತು ತೋರದೆ, ವರಿಷ್ಠರ ಮುಂದೆ ಬಂಡಾಯ, ಬೆದರಿಕೆ ಹಾಕದ ಪಕ್ಷನಿಷ್ಠ ನಾಯಕರಾಗಿದ್ದಾರೆ. ಈ ಕಾರಣಕ್ಕಾಗಿಯೇ 2019ರ ಲೋಕಸಭಾ ಚುನಾವಣೆಯಲ್ಲಿ ಸೋತರೂ ಇವರಿಗೆ ರಾಜ್ಯಸಭೆಗೆ ಆಯ್ಕೆಯಾಗಲು ಅವಕಾಶ ಮಾಡಿಕೊಡಲಾಯಿತು.
ಸವಾಲುಗಳು: ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷದ ಗದ್ದುಗೆ ಏರುತ್ತಿರುವ 80ರ ವಯೋಮಾನದ ಹಿರಿಯ ನಾಯಕ ಖರ್ಗೆ ಅವರ ಮುಂದೆ ಬಹುದೊಡ್ಡ ಸವಾಲುಗಳಿವೆ. ಕಾಂಗ್ರೆಸ್ ನಾಯಕರಲ್ಲಿನ ಜಿ-23 ನಾಯಕರ ಬಂಡಾಯ ಶಮನ ಮಾಡುವುದು. ಕಾಂಗ್ರೆಸ್‍ನ ಕೆಳಮಟ್ಟದ ಕಾರ್ಯಕರ್ತರಲ್ಲಿ ಮತ್ತೆ ಹುಮ್ಮಸ್ಸು ತುಂಬುವುದು. ಹೊಸ ಚುನಾವಣಾ ರಣತಂತ್ರಗಳನ್ನು ರೂಪಿಸುವುದು ಪ್ರಮುಖ ಸವಾಲುಗಳಾಗಿವೆ.
ದೆಹಲಿಯಲ್ಲಿ ಕುಳಿತು ಕಾರ್ಯತಂತ್ರ ರೂಪಿಸಿ ಸಂಘಟನೆ ಮಾಡುವುದು ತುಂಬಾ ಕಷ್ಟ. ನಿರಂತರ ಪ್ರವಾಸ ಮಾಡುತ್ತಾ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ನಾಯಕರಲ್ಲಿ ಒಗ್ಗಟ್ಟು ಮತ್ತು ಕಾರ್ಯಕರ್ತರಿಗೆ ಧೈರ್ಯ ತುಂಬಬೇಕಾಗಿದೆ.
ಪಕ್ಷದಲ್ಲಿ ಭವಿಷ್ಯವಿಲ್ಲ ಎಂದು ಹತಾಶರಾಗಿ ಅನ್ಯ ದಿಕ್ಕುಗಳತ್ತ ಮುಖ ಮಾಡಿರುವವರಿಗೆ ವಿಶ್ವಾಸ ಹೆಚ್ಚಿಸುವುದು ಮತ್ತೊಂದು ಸವಾಲಾಗಿದ್ದರೆ, ಪಕ್ಷದ ಸಿದ್ಧಾಂತವನ್ನು ಗಟ್ಟಿಯಾಗಿ ನೆಲೆಯೂರಿಸುವುದು ಪ್ರಮುಖ ಆದ್ಯತೆಯಾಗಿಬೇಕಿದೆ. ಕಾಂಗ್ರೆಸ್ ಪಕ್ಷ ಸೋಲು ಕಾಣುತ್ತಿದ್ದರೂ ಮತ ಗಳಿಕೆಯಲ್ಲಿ ಕುಸಿತವಾಗಿಲ್ಲ. ಅಂದರೆ ತಳಮಟ್ಟದಲ್ಲಿ ಕಾರ್ಯಕರ್ತರು ಮತದಾರರು ಪಕ್ಷದ ಕೈ ಬಿಟ್ಟಿಲ್ಲ ಎಂಬುದು ಸ್ಪಷ್ಟವಾಗಿದೆ.
ಚುನಾಯಿತ ನಾಯಕರು ಕಾಂಗ್ರೆಸ್ ಸಿದ್ಧಾಂತಕ್ಕೆ ಎಳ್ಳು ನೀರು ಬಿಟ್ಟು ಭಯ ಅಥವಾ ಆಮಿಷಗಳಿಗೆ ಬಲಿಯಾಗಿ ಅನ್ಯ ಪಕ್ಷಗಳಿಗೆ ವಲಸೆ ಹೋಗುತ್ತಿರುವುದು, ಆ ಮೂಲಕ ಪಕ್ಷ ದುರ್ಬಲಗೊಳ್ಳುವುದು, ಸರ್ಕಾರಗಳು ಅಸ್ಥಿರವಾಗುವುದು ಇಂದಿನ ಸವಾಲಾಗಿದೆ.
ಬಿಜೆಪಿಯಂತೆ ಮೈಗಂಟಿದ ಸಿದ್ಧಾಂತವನ್ನು ಕಾಂಗ್ರೆಸ್ ನಾಯಕರಲ್ಲಿ ತುಂಬಿಸಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವರ್ಚಸ್ಸಿನ ಮುಂದೆ ಕುಗ್ಗಿರುವ ಕಾಂಗ್ರೆಸ್‍ಗೆ ತನ್ನ ಗತವೈಭವವನ್ನು ಮರಳಿ ತಂದುಕೊಡಲು ಸಮರೋಪಾದಿಯ ರಣತಂತ್ರಗಳನ್ನು ರೂಪಿಸುವ ಜರೂರತ್ತು ಖರ್ಗೆ ಅವರ ಮುಂದಿದೆ.
@sunilkumarsinghಸುನೀಲ್ ರಾಜೇನಹಳ್ಳಿ