ಬೆಂಗಳೂರು, ಫೆ.16- ವಿಧಾನ ಪರಿಷತ್ ನಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಬಿ,ಕೆ,ಹರಿಪ್ರಸಾದ್ ಅವರು ಆರ್.ಎಸ್.ಎಸ್ ಕಚೇರಿ ಇರುವ ನಾಗಪುರದ ಹೆಸರನ್ನು ಕನ್ನಡೀಕರಣ ಮಾಡಿ ಎಂದು ಹೇಳಿದ್ದು ಬಿಜೆಪಿಗರನ್ನು ಕೆರಳಿಸಿದ್ದು ಒಂದಷ್ಟು ಕಾಲ ಮಾತಿನ ಸಮರಕ್ಕೆ ನಾಂದಿಯಾಡಿತ್ತು.
ಸಚಿವ ಕೆ.ಎಸ್.ಈಶ್ವರಪ್ಪ ಅವರು ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಕುರಿತು ನೀಡಿರುವ ಹೇಳಿಕೆಯ ವಿರುದ್ಧ ನಿಲುವಳಿ ಸೂಚನೆ ಮಂಡಿಸಿ ಪೂರ್ವ ಪ್ರಸ್ತಾವನೆ ಮಂಡಿಸಿದ ಹರಿಪ್ರಸಾದ್ ಅವರು, ನಾಗ್ಪುರದಲ್ಲಿರುವ ಆರ್ ಎಸ್ ಎಸ್ ಕಚೇರಿಯಲ್ಲಿ 52 ವರ್ಷ ರಾಷ್ಟ್ರಧ್ವಜವಾದ ತ್ರಿವರ್ಣಧ್ವಜವನ್ನೇ ಹಾರಿಸಲಿಲ್ಲ. ಸ್ವತಂತ್ರದ ಬಳಿಕ ತ್ರಿವರ್ಣ ಧ್ವಜವನ್ನು ಆರ್ ಎಸ್ ಎಸ್ ನ ಮುಖವಾಣಿ ಆರ್ಗನೈಜರ್ ನಲ್ಲಿ ಟೀಕಿಸಲಾಗಿತ್ತು.
ಮೂರು ಬಣ್ಣಗಳು ದೇಶಕ್ಕೆ ಕೆಟ್ಟದು ಎಂದು ಸಂಪಾದಕೀಯ ಬರೆಯಲಾಗಿತ್ತು ಎಂದು ವಿವರಣೆ ನೀಡಿದರು. ಈ ಹಂತದಲ್ಲಿ ಅವರು ನಾಗ್ಪುರವನ್ನು ಕನ್ನಡೀಕರಣ ಮಾಡಿ ಹೇಳಿದ್ದಕ್ಕೆ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸೇರಿ ಬಿಜೆಪಿಯ ಎಲ್ಲಾ ಸದಸ್ಯರು ವಿರೋಧಿಸಿದರು. ಅನುಭವಿ ಹಿರಿಯ ನಾಯಕರು ಈ ರೀತಿ ಸಲ್ಲದ ವ್ಯಂಗ್ಯ ಮಾಡಬಾರದು ಎಂದು ತರಾಟೆಗೆ ತೆಗೆದುಕೊಂಡರು. ಆರ್ ಎಸ್ ಎಸ್ ಕಚೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ ಎಂಬುದಕ್ಕೆ ಸಾಕ್ಷ್ಯ ಕೊಡಿ ಎಂದು ಸವಾಲು ಹಾಕಿದರು.
ಅದಕ್ಕೆ ಹರಿಪ್ರಸಾದ್ ಅವರು ಮತ್ತಷ್ಟು ವಿವರಣೆ ನೀಡಲಾರಂಭಿಸಿದಾಗ ಆಡಳಿತ ಪಕ್ಷದ ಸದಸ್ಯರು ಮಾತು ಮಾತಿಗೂ ಅಡ್ಡಿ ಪಡಿಸಿದರು. ಬಿಜೆಪಿ ಸದಸ್ಯರ ನಡವಳಿಕೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತ ಪಡಿಸಿದಾಗ ಮತ್ತೆ ಕೋಲಾಹಲವಾಯಿತು.
ತಾಯಿ ಎದೆಹಾಲು ಕುಡಿದಿದ್ದರೆ ಕಾಶ್ಮೀರಕ್ಕೆ ಬಂದು ಲಾಲ್ ಚೌಕ್ ನಲ್ಲಿ ರಾಷ್ಟ್ರಧ್ವಜ ಹಾರಿಸಿ ಎಂದು ಉಗ್ರರು ಸವಾಲು ಹಾಕಿದ್ದರು. ಕಾಶ್ಮೀರಕ್ಕೆ ನೀಡಿದ್ದ 370 ಸ್ಥಾನಮಾನವನ್ನು ರದ್ದು ಮಾಡಿ, ಅಲ್ಲಿ ಪ್ರತಿ ಸರ್ಕಾರಿ ಕಚೇರಿಯ ಮೇಲೂ ತ್ರಿವರ್ಣ ಧ್ವಜ ಹಾರಿಸಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಂದು ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸಿದ್ದ ಸಂಘ ಪರಿವಾರ, ನಮಗೆ ರಾಷ್ಟ್ರಧ್ವಜ ಗೌರವದ ಬಗ್ಗೆ ಪಾಠ ಹೇಳಬೇಡಿ, ನೀವು ಪಾಕಿಸ್ತಾನದ ಧ್ವಜ ಹಾರಿಸಿದಾಗ ಎಲ್ಲಿದ್ರಿ ಎಂದು ಕಾಂಗ್ರೆಸಿಗರನ್ನು ಆಡಳಿತ ಪಕ್ಷದ ಶಾಸಕರು ಛೇಡಿಸಿದರು. ಈದ್ಗಾ ಮೈದಾನದಲ್ಲಿ ಹಿಂದು ಮುಸ್ಲಿಂರು ಜೊತೆಯಾಗಿ ರಾಷ್ಟ್ರಧ್ವಜ ಹಾರಿಸಿದ್ಧಾರೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಕ್ಕೆ ಬಿಜೆಪಿ ಸದದಸ್ಯರು ಓಹೋ ಎಂದು ಕೂಗಿದರು.
ನರೇಂದ್ರ ಮೋದಿಗೂ ಮೊದಲು ಕಾಂಗ್ರೆಸ್ ಸರ್ಕಾರ ಕಾಶ್ಮಿರದಲ್ಲಿ ರಾಷ್ಟ್ರಧ್ವಜ ಹಾರಿಸಿತ್ತು ಎಂದು ಬಿ.ಕೆ.ಹರಿಪ್ರಸಾದ್ ಹೇಳಿದಾಗಲೂ ಬಿಜೆಪಿ ಸದಸ್ಯರು ವಿರೋಧ ವ್ಯಕ್ತ ಪಡಿಸಿದರು. 52 ವರ್ಷ ಆರ್ ಎಸ್ ಎಸ್ ಕಚೇರಿಯ ಮೇಲೆ ರಾಷ್ಟ್ರಧ್ವಜ ಹಾರಿಸಿರಲಿಲ್ಲವಲ್ಲಾ ಆಗ ನೀವು ಎಲ್ಲಿದ್ರಿ, ತಾಯಿ ಹಾಲು ಕುಡಿದಿರಲಿಲ್ಲವೇ, ಇನ್ಯಾವ ಹಾಲು ಕುಡಿದಿದ್ರಿ ಎಂದು ಹರಿಪ್ರಸಾದ್ ಬಿಜೆಪಿಗರಿಗೆ ತಿರುಗೇಟು ನೀಡಿದರು.
ನಾನು ಕನ್ನಡಾಭಿಮಾನಿ ನಾಗ್ಪುರ ಎಂಬ ಸಂಸ್ಕøತ ಪದ ಬಳಸುವ ಬದಲು ನನಗೆ ಇಷ್ಟವಿಲ್ಲ, ಹಾಗಾಗಿ ಕನ್ನಡ ಪದ ಬಳಕೆ ಮಾಡುತ್ತೇನೆ, ಇಂಗ್ಲಿಷ್ ನಲ್ಲಿ ಹೇಳಿದರೆ ಸ್ನೇಕ್ ಪುರ ಎಂದಾಗುತ್ತದೆ. ನಾನು ಬಳಸಿದ್ದರಲ್ಲಿ ಅಸಂಸದೀಯ ಪದವಾಗಿದ್ದರೆ ಸಾಬೀತು ಮಾಡಿ ರಾಜೀನಾಮೆ ನೀಡಿ ಹೊರ ಹೋಗುತ್ತೇನೆ. ಸಂಸದೀಯ ಮತ್ತು ಅಸಂಸದೀಯ ಪದಗಳು ಗೊತ್ತಿಲ್ಲದಿದ್ದವರೆಲ್ಲಾ ಸಚಿವರಾಗಿದ್ದಾರೆ ಎಂದು ಹರಿಪ್ರಸಾದ್ ಹೇಳಿದಾಗ, ಬಿಜೆಪಿ ಸದಸ್ಯರು ಪ್ರಬಲ ಆಕ್ಷೇಪ ವ್ಯಕ್ತ ಪಡಿಸಿದರು. ಕೊನೆಗೆ ಸಭಾಪತಿ ಅವರು ಹರಿಪ್ರಸಾದ್ ಅವರು ಬಳಸಿದ ಕನ್ನಡ ಪದವನ್ನು ಕಟತದಿಂದ ತೆಗೆದು ಹಾಕಿರುವುದಾಗಿ ರೂಲಿಂಗ್ ನೀಡಿ ವಿವಾದಕ್ಕೆ ತೆರೆ ಎಳೆದರು.
