ಕೆಂಪುಕೋಟೆಯ ಮೇಲೂ ಕೇಸರಿ ಧ್ವಜ ಹಾರಿಸುವ ಹೇಳಿಕೆ ವಿಚಾರ , ಪರಿಷತ್‌ನಲ್ಲೂ ಕೋಲಾಹಲ

Social Share

ಬೆಂಗಳೂರು, ಫೆ.16- ಕೆಂಪುಕೋಟೆಯ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ ಎಂದಯ ಸಚಿವ ಕೆ.ಎಸ್.ಈಶ್ವರಪ್ಪ ಅವರು ನೀಡಿರುವ ಹೇಳಿಕೆ ವಿಧಾನ ಪರಿಷತ್ ನಲ್ಲಿ ಕೋಲಾಹಲಕ್ಕೆ ಕಾರಣವಾಗಿ ಕೆಲ ಕಾಲ ಅಧಿವೇಶನವನ್ನು ಮುಂದೂಡಬೇಕಾದ ಪ್ರಸಂಗ ನಡೆಯಿತು.
ಹೊಸ ವರ್ಷದ ಮೂರನೇ ದಿನವಾದ ಇಂದು ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶ್ನೋತ್ತರವನ್ನು ಕೈಗೆತ್ತಿಕೊಳ್ಳಲು ಮುಂದಾದರು. ಈ ಹಂತದಲ್ಲಿ ಎದ್ದು ನಿಂತ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್. ನಿಯಮ-59ನ್ನು ಆಧರಿಸಿ ನಿಲುವಳಿ ಸೂಚನೆ ನೀಡಿದ್ದೇವೆ. ಮೊದಲು ಅದರ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಪ್ರಶ್ನೋತ್ತರದ ಬಳಿಕ ಅವಕಾಶ ಮಾಡಿಕೊಡುವುದಾಗಿ ಸಭಾಪತಿ ಭರವಸೆ ನೀಡಿದರು. ಆದರೆ ಅದಕ್ಕೆ ಒಪ್ಪದ ಕಾಂಗ್ರೆಸ್‍ನ ಕೆ.ಗೋವಿಂದರಾಜು, ಪ್ರಕಾಶ್ ರಾಥೋಡ್, ಸಲಿಂ ಅಹಮ್ಮದ್ ಮತ್ತಿತರರು ವಿರೋಧ ಪಕ್ಷದ ನಾಯಕರಿಗೆ ಧ್ವನಿಗೂಡಿಸಿದರು.
ಸಚಿವರ ಹೇಳಿಕೆಯಿಂದ ಸಂವಿಧಾನದ ಉಲ್ಲಂಘನೆಯಾಗಿದೆ. ರಾಷ್ಟ್ರಧ್ವಜವನ್ನು ಅಗೌರವಿಸಿದ ಸಚಿವರು ಈ ಸದನದಲ್ಲಿ ಉತ್ತರ ನೀಡಲು ಸಾಧ್ಯವೆ ಎಂದು ಪ್ರಶ್ನಿಸಿದರು. ಸಂವಿಧಾನಕ್ಕೆ ಅಗೌರವ ತರುವ ಅಂಶ ಅಡಗಿರುವುದರಿಂದ ಪ್ರಶ್ನೋತ್ತರ ಕಲಾಪವನ್ನು ಬದಿಗಿರಿಸಿ, ನಿಲುವಳಿ ಸೂಚನೆಯ ಪ್ರಸ್ತಾಪಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟುಹಿಡಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ನಿಯಮಾವಳಿಯ ಪ್ರಕಾರ ಕಲಾಪ ನಡೆಸುವುದು ಈವರೆಗೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಮೊದಲು ಪ್ರಶ್ನೋತ್ತರ ನಡೆಯಲಿ. ಬಳಿಕ ಯಾವುದೇ ಸೂಚನೆಯನ್ನಾದರೂ ಪ್ರಸ್ತಾಪಿಸಲು ಅವಕಾಶ ಇದೆ ಎಂದು ಹೇಳಿದರು. ಆಡಳಿತ ಪಕ್ಷದ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಎಂ.ಕೆ.ಪ್ರಾಣೇಶ್, ಅರುಣ್ ಶಹಾಪೂರ್, ಶಶಿಲ್ ನಮೋಶಿ ಮತ್ತಿತರರು ಕಾಂಗ್ರೆಸ್ ಸದಸ್ಯರ ಹಠಕ್ಕೆ ಅಸಮದಾನ ವ್ಯಕ್ತಪಡಿಸಿದರು.
ಸಭಾಪತಿ ಅವರ ನಿರ್ಣಯವನ್ನು ವಿರೋಧಿಸುವ ಕಾಂಗ್ರೆಸ್ ಸದಸ್ಯರು ಸಂವಿಧಾನದ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದರು. ಹಿಜಾಬ್ ಧರಿಸಿದರೆ ಅತ್ಯಾಚಾರ ಕಡಿಮೆಯಾಗುತ್ತದೆ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ನೀಡಿರುವ ಹೇಳಿಕೆಯ ಬಗ್ಗೆಯೂ ಮೊದಲು ಚರ್ಚೆಯಾಗಲಿ ಎಂದು ನಾರಾಯಣಸ್ವಾಮಿ ಆಗ್ರಹಿಸಿದರು.
ವಾದ ಪ್ರತಿವಾದಗಳಿಂದ ಕಲಾಪದಲ್ಲಿ ಗದ್ದಲ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಸಂವಿಧಾನದ ಉಲ್ಲಂಘನೆಯಾಗುತ್ತಿದ್ದರು ನಾವು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ. ಸಂವಿಧಾನವನ್ನು ಗಾಳಿಗೆ ತೂರಿದ ಕುರಿತು ನಿಮ್ಮ ನಿಲುವೇನು ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ಸಚಿವರು ರಾಷ್ಟ್ರದ್ರೋಹ ಮಾಡಿದ್ದಾರೆ, ಚರ್ಚೆಗೆ ಅವಕಾಶ ಕೊಡಿ ಎಂದು ಸಲಿಂ ಅಹಮ್ಮದ್ ಪಟ್ಟು ಹಿಡಿದರು. ಪ್ರತಿಪಕ್ಷದ ಸದಸ್ಯರ ಆಕ್ರೋಶ, ಆಡಳಿತ ಪಕ್ಷದ ಸದಸ್ಯರ ನಡುವೆ ವಾಕ್ಸಮರ ಹೆಚ್ಚಾಯಿತು. ಪ್ರಶ್ನೋತ್ತರದ ಬಳಿಕ ನಿಲುವಳಿ ವಿಷಯದ ಪೂರ್ವ ಭಾವಿ ಪ್ರಸ್ತಾಪಕ್ಕೆ ಅವಕಾಶ ನೀಡುತ್ತೇನೆ ಎಂದು ಸಭಾಪತಿ ಮಾಡಿದ ಮನವಿಗೆ ಪ್ರತಿಪಕ್ಷದ ಸದಸ್ಯರು ಮಣಿಯದಿದ್ದರಿಂದ ಕೆಲ ಕಾಲ ಕಲಾಪವನ್ನು ಮುಂದೂಡಲಾಯಿತು. ಬಳಿಕವೂ ಕಾಂಗ್ರೆಸ್ ಸದಸ್ಯರು ತಮ್ಮ ಪಟ್ಟು ಮುಂದುವರೆಸಿದರು.

Articles You Might Like

Share This Article