ಪರಿಷತ್‍ನಲ್ಲಿ ಕಾಂಗ್ರೆಸ್‍ನ ಧರಣಿ, ಗದ್ದಲದ ನಡುವೆಯೇ ಮಹತ್ವದ 4 ಮಸೂದೆಗಳು ಅಂಗೀಕಾರ

Social Share

ಬೆಂಗಳೂರು,ಫೆ.22- ಕಳೆದ 2011ರಲ್ಲಿ ಕೆಪಿಎಸ್‍ಸಿಯಿಂದ ನೇಮಕಗೊಂಡು ಅಧಿಸೂಚನೆ ರದ್ದುಗೊಂಡಿದ್ದರಿಂದ ಅತಂತ್ರಕ್ಕೆ ಸಿಲುಕಿದ 362 ಮಂದಿ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲು ಅನುಕೂಲವಾಗುವಂತಹ ವಿದೇಯಕವನ್ನು ವಿಧಾನಪರಿಷತ್‍ನಲ್ಲಿಂದು ಅಂಗೀಕರಿಸಲಾಯಿತು. ಕಾಂಗ್ರೆಸ್‍ನ ಧರಣಿ, ಗದ್ದಲ, ಗಲಾಟೆಯ ನಡುವೆಯೂ ಸಚಿವರು ವಿಧಾನಸಭೆಯಿಂದ ಅಂಗೀಕಾರಗೊಂಡಿದ್ದ ನಾಲ್ಕು ಮಹತ್ವದ ಮಸೂದೆಗಳನ್ನು ಪರಿಷತ್‍ನಲ್ಲಿ ಮಂಡಿಸಿದರು.
ಮುಖ್ಯಮಂತ್ರಿಗಳ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ, ಕರ್ನಾಟಕ ಸಿವಿಲ್ ಸೇವೆಗಳ 2011ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಆಯ್ಕೆ ಮತ್ತು ನೇಮಕಾತಿಯ ಸಿಂಧುಗೊಳಿಸುವಿಕೆ ವಿಧೇಯಕ 2022ಅನ್ನು ಮಂಡಿಸಿದರು.
ಮಹಿಳೆಯೊಬ್ಬರು ನೀಡಿದ ದೂರು ಆಧರಿಸಿ ಆಗಿನ ಸರ್ಕಾರ ಕೆಪಿಎಸ್‍ಸಿ ನೇಮಕಾತಿಯ ಅಧಿಸೂಚನೆಯನ್ನೇ ಅಸಿಂಧು ಮಾಡಿತ್ತು. ಕೆಎಟಿಯಿಂದ ತೀರ್ಪು ಪ್ರಕಟವಾದ ಮೇಲೆ ಮತ್ತೆ ಪರುಪರಿಶೀಲನೆ ಆರಂಭವಾಯಿತು. ನಿಯಮ 23/2ರ ಪ್ರಕಾರ ಅಧಿಸೂಚನೆಯನ್ನು ರದ್ದುಗೊಳಿಸಲು ವಿಧಾನಮಂಡಲಕ್ಕೆ ಮಾತ್ರ ಅಧಿಕಾರವಿದೆ. ಈ ಬಗ್ಗೆ ಹೈಕೋರ್ಟ್‍ಗೂ ತಪ್ಪು ಮಾಹಿತಿ ನೀಡಿ ಕಾನೂನು ಉಲ್ಲಂಘನೆ ಮಾಡಲಾಗಿತ್ತು.
ಈ ವಿಷಯ ಉಭಯ ಸದನಗಳಲ್ಲಿ ಎರಡು-ಮೂರು ಬಾರಿ ಚರ್ಚೆಯಾಗಿದೆ. ಎಲ್ಲರ ಸಲಹೆ ಮೇರೆಗೆ ಅಂದು ಜಾರಿಗೊಳಿಸಿದ ಅಧಿಸೂಚನೆಯನ್ನು ಸಿಂಧುಗೊಳಿಸಿ 362 ಮಂದಿಯ ನೇಮಕಾತಿಯನ್ನು ಕ್ರಮಬದ್ಧಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು. ಜೆಡಿಎಸ್‍ನ ಕೆ.ಟಿ.ಶ್ರೀಕಂಠೇಗೌಡ ಸೇರಿದಂತೆ ಅನೇಕ ಸದಸ್ಯರು ಇದನ್ನು ಸ್ವಾಗತಿಸುವುದಾಗಿ ಹೇಳಿದರು.
ನಂತರ ಕಂದಾಯ ಸಚಿವ ಆರ್.ಅಶೋಕ್ ಕರ್ನಾಟಕ ಸ್ಟ್ಯಾಂಪ್ ತಿದ್ದುಪಡಿ ವಿಧೇಯಕವನ್ನು ಮಂಡಿಸಿ, ಸಹಕಾರ ಸಂಘಗಳ ಗೃಹ ನಿರ್ಮಾಣ ಸಂಘಗಳ ಮೂಲಕ ಖರೀದಿಸಿದ ನಿವೇಶನದ ನೋಂದಣಿಗೆ ಮುದ್ರಾಂಕದ ಶುಲ್ಕ ಹೆಚ್ಚಿದೆ. ಅದನ್ನು ಕಡಿಮೆ ಮಾಡಲಾಗುತ್ತಿದೆ. ಮತ್ತು ಇ-ಸ್ಟ್ಯಾಂಪ್‍ಅನ್ನು ಕ್ರಮಬದ್ಧಗೊಳಿಸಲಾಗಿದೆ. ಇದರಿಂದ ಬಹಳಷ್ಟು ಜನರಿಗೆ ಸಹಾಯವಾಗಲಿದೆ ಎಂದರು.
ಎರಡನೇ ತಿದ್ದುಪಡಿಯಲ್ಲಿ ಕಂಪೆನಿಗಳ ಸ್ಥಿರಾಸ್ತಿ ಮೇಲೆ ಸಂಗ್ರಹಿಸಲಾಗುತ್ತಿದ್ದ ಶೇ.3ರಷ್ಟು ಮುದ್ರಾಂಕ ಶುಲ್ಕ ಕೆಲವೊಮ್ಮೆ ದುಬಾರಿಯಾಗುತ್ತಿತ್ತು. ಇದರಿಂದ ಖಾಸಗಿ ಕಂಪೆನಿಗಳು ನೆರೆಯ ಮಹಾರಾಷ್ಟ್ರಕ್ಕೆ ವಲಸೆ ಹೋಗುತ್ತಿದ್ದವು, ಇನ್ನು ಮುಂದೆ ಕಂಪೆನಿಗಳ ಸ್ಥಿರಾಸ್ತಿ ಹಾಗೂ ಷೇರು ಮೌಲ್ಯಗಳನ್ನು ಸಂಗ್ರಹಿಸುವ ಶುಲ್ಕವನ್ನು ಗರಿಷ್ಠ 25ಕೋಟಿಗೆ ಸೀಮಿತಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಗೃಹ ಸಚಿವರ ಪರವಾಗಿ ಸಚಿವ ಜೆ.ಸಿ.ಮಾಧುಸ್ವಾಮಿ ಕ್ರಿಮಿನಲ್ ಕಾನೂನು ತಿದ್ದುಪಡಿ ಅಧ್ಯಾದೇಶ ತಿದ್ದುಪಡಿ ವಿಧೇಯಕ ಮಂಡನೆ ಮಾಡಿ, ಹಣಕಾಸು ಅಕ್ರಮ ನಡೆದಾಗ ಮನಿಲ್ಯಾಂಡರಿಂಗ್ ಕೇಸ್‍ನಲ್ಲಿ ವಿಚಾರಣೆ ನಡೆಸುವ ಅಧಿಕಾರ ಜಿಲ್ಲಾ ನ್ಯಾಯಾೀಧಿಶರಿಗೆ ಸೀಮಿತವಾಗಿತ್ತು. ಅದನ್ನು ಪ್ರಿನ್ಸಿಪಲ್ ಜಡ್ಸ್‍ವರೆಗೂ ವಿಸ್ತರಣೆ ಮಾಡಿದ್ದೇವೆ. ಜತೆಗೆ ಆಯಾ ಪ್ರದೇಶದ ನ್ಯಾಯಾೀಧಿಶರೂ ವಿಚಾರಣೆ ನಡೆಸಬಹುದಾಗಿದೆ. ಹಣಕಾಸು ಹಗರಣ ಮಾಡಿದವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ಮತ್ತು ರಚಿತ ಅಧಿಸೂಚಿತ ಪ್ರಾಧಿಕಾರಗಳಿಗೆ ಮಾತ್ರ ಅವಕಾಶ ಇತ್ತು.
ಅದನ್ನು ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ನ್ಯಾಯಾಲಯಗಳ ಮೂಲಕ ಆಸ್ತಿ ಮುಟ್ಟುಗೋಲು ಮತ್ತು ಹಂಚಿಕೆ ಉಪಕ್ರಮಗಳನ್ನು ನಡೆಸಲು ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು. ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಕೇಳಿದ ಕೆಲವು ಸ್ಪಷ್ಟನೆಗಳಿಗೆ ಒಪ್ಪಿಗೆ ದೊರೆಯಿತು. ನಂತರ ನಾಲ್ಕೂ ವಿಧೇಯಕಗಳು ಪರ್ಯಾವಲೋಚನೆಗೆ ಒಳಪಟ್ಟು ಗಂಭೀರವಾದ ಯಾವುದೇ ಚರ್ಚೆಯಿಲ್ಲದೆ ಧ್ವನಿ ಮತದ ಮೂಲಕ ಅಂಗೀಕಾರಗೊಂಡವು.
ಈ ವೇಳೆ ಕಾಂಗ್ರೆಸ್ ಸದಸ್ಯರು ತಮ್ಮ ಧರಣಿ, ಸತ್ಯಾಗ್ರಹ ಮುಂದುವರೆಸಿದರು. ಬಳಿಕ ಸಭಾಪತಿಯವರು ವಿಧಾನಸಭೆಯಲ್ಲಿ ಅಂಗೀಕಾರಗೊಂಡ, ರಾಜ್ಯ ಸರ್ಕಾರಗಳ ಮಂತ್ರಿಗಳ ಭತ್ಯೆ, ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಸಂಬಂಧಿಸಿದ ವಿಧೇಯಕವನ್ನು ಮಂಡಿಸುವಂತೆ ಸಚಿವರುಗೆ ಸೂಚನೆ ನೀಡಿದರು.

Articles You Might Like

Share This Article