ಅಧಿವೇಶನಕ್ಕೆ ರಾಜ್ಯಪಾಲರಿಗೆ ರತ್ನಗಂಬಳಿ ಸ್ವಾಗತ

Social Share

ಬೆಂಗಳೂರು,ಫೆ.13- ನಾಳೆಯಿಂದ ಆರಂಭವಾಗಲಿರುವ ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ರಾಜ್ಯಪಾಲ ತಾವರ್ ಚಂದ್ ಗೆಲ್ಹೋಟ್ ಅವರಿಗೆ ವಿಧಾನಸೌಧದ ಮೆಟ್ಟಿಲುಗಳ (ಗ್ರಾಂಡ್ ಸ್ಟೆಪ್ಸ್) ಮೂಲಕ ರತ್ನಗಂಬಳಿ ಸ್ವಾಗತವನ್ನು ಕೋರಲಾಗುತ್ತದೆ. ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಆಗಮಿಸುವ ರಾಜ್ಯಪಾಲರನ್ನು ಗ್ರ್ಯಾಂಡ್ ಸ್ಟೆಪ್ಸ್ ಮೂಲಕವೇ ಸ್ವಾಗತಕೋರುವ ಸಂಪ್ರದಾಯ ಇತ್ತು.
ಭದ್ರತೆ ಮತ್ತಿತರ ಕಾರಣಗಳಿಂದಾಗಿ ಮೆಟ್ಟಿಲುಗಳ ಮೇಲೆ ರಾಜ್ಯಪಾಲರಿಗೆ ಸ್ವಾಗತ ಕೋರುವುದನ್ನು ಬದಲಿಸಲಾಗಿತ್ತು. ಆದರೆ ಅಧಿವೇಶನಕ್ಕೆ ಆಗಮಿಸುವ ರಾಜ್ಯಪಾಲರನ್ನು ಗ್ರ್ಯಾಂಡ್ ಸ್ಟೆಪ್ಸ್ ಮೂಲಕವೇ ಸ್ವಾಗತಕೋರಲು ವಿಧಾನಸಭೆ ಸಚಿವಾಲಯ ಸಿದ್ದತೆ ನಡೆಸಿದೆ.
ವಿಧಾನಸೌಧದ ಆವರಣಕ್ಕೆ ಆಗಮಿಸುವ ರಾಜ್ಯಪಾಲರನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹಾಗೂ ಉಭಯ ಸದನಗಳ ಕಾರ್ಯದರ್ಶಿಗಳು ರಾಜ್ಯಪಾಲರನ್ನು ಬರಮಾಡಿಕೊಳ್ಳಲಿದ್ದಾರೆ.
ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳು ಹಾಗೂ ವಿಧಾನಸೌಧದ ಮಹದ್ವಾರದ ರಾಜ್ಯಪಾಲರನ್ನು ಮೆರವಣಿಗೆ ಮೂಲಕ ವಿಧಾನಸಭಾ ಸಭಾಂಗಣಕ್ಕೆ ಬರ ಮಾಡಿಕೊಳ್ಳಲಿದ್ದಾರೆ. ಉಭಯ ಸದನಗಳ ಸದಸ್ಯರನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ ನಂತರ ಅವರನ್ನು ಅದೇ ರೀತಿ ಬೀಳ್ಕೊಡಲಾಗುತ್ತದೆ.

Articles You Might Like

Share This Article