ನಾಳೆಯೇ ಅಧಿವೇಶನ ಮುಕ್ತಾಯವಾಗುವ ಸಾಧ್ಯತೆ..?

Social Share

ಬೆಂಗಳೂರು,ಫೆ.20- ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡುವಂತೆ ಒತ್ತಾಯಿಸಿ ಕಾಂಗ್ರೆಸ್ ತನ್ನ ಹೋರಾಟವನ್ನು ತೀವ್ರಗೊಳಿಸುತ್ತಿರುವ ಹಿನ್ನೆಲೆಯಲ್ಲಿ ನಾಳೆ ವಿಧಾನಮಂಡಲದ ಉಭಯ ಸದನದ ಜಂಟಿ ಅಧಿವೇಶವನ್ನು ಅರ್ನಿಷ್ಟಾವಗೆ ಮುಂದೂಡುವ ಸಾಧ್ಯತೆ ಇದೆ.
ಮಾತುಕತೆ ಅಥವಾ ಸಂಧಾನಕ್ಕೆ ಕಾಂಗ್ರೆಸ್ ನಾಯಕರು ಬಗ್ಗದೆ ತಮ್ಮ ಪ್ರತಿಭಟನೆಯನ್ನು ಮುಂದುವರೆಸಲು ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ನಾಳೆ ಕಲಾಪವನ್ನು ಅರ್ನಿಷ್ಟಾವಗೆ ಮುಂದೂಡುವ ಸಾಧ್ಯತೆ ಇದೆ. ಒಂದು ವೇಳೆ ಕಾಂಗ್ರೆಸ್ ಸದಸ್ಯರು ತಮ್ಮ ಧರಣಿಯನ್ನು ಹಿಂತೆಗೆದುಕೊಂಡರೆ ಮಾತ್ರ ಕಲಾಪ ನಿಗದಿತ ಅವಧಿಯಂತೆ 25ರವರೆಗೆ ನಡೆಯಲಿದೆ.
ನಾಳೆಯೂ ಇದೇ ಪರಿಸ್ಥಿತಿ ಮುಂದುವರೆದರೆ ಸಭಾಧ್ಯಕ್ಷ ವಿಶೇಶ್ವರ ಹೆಗಡೆ ಕಾಗೇರಿ ಅವರು ಕಲಾಪವನ್ನು ಮುಂದೂಡುವ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ಈಗಾಗಲೇ ಅಧಿವೇಶನದ ಅರ್ಧ ಅವ ಮುಗಿದಿದ್ದು, ಗದ್ದಲ, ಗಲಾಟೆ, ಆರೋಪ, ಪ್ರತ್ಯಾರೋಪ, ಮಾತಿನ ಚಕಮಕಿ ವೇದಿಕೆಯಾಗಿ ಪರಿಣಮಿಸಿದೆ.
ರಾಜ್ಯದ ನೆಲಜಲ, ಭಾಷೆ, ಜನರ ಸಮಸ್ಯೆಗಳು, ಹಿಜಾಬ್ ವಿವಾದ ಇಂತಹ ಪ್ರಚಲಿತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿತ್ತು. ಆದರೆ ಅಧಿವೇಶನದ ಉದ್ದೇಶವೇ ಈಡೇರುತ್ತಿಲ್ಲದ ಕಾರಣ ಸರ್ಕಾರ ಅವೇಶನವನ್ನು ಮೊಟಕುಗೊಳಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ನಾಳೆಯೂ ಸದನದಲ್ಲಿ ಈಶ್ವರಪ್ಪ ಹೇಳಿಕೆ ವಿಷಯವೇ ಪ್ರತಿಧ್ವನಿಸಲಿದ್ದು, ಸದನದ ಹೊರಗೆ ಹೋರಾಟಕ್ಕೆ ಕಾಂಗ್ರೆಸ್ ನಿರ್ಧರಿಸಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದ್ದು, ಕಾಂಗ್ರೆಸ್‍ಗೆ ಸಾಕಷ್ಟು ಅವಕಾಶ ನೀಡಿದರೂ ಸದನದಲ್ಲಿ ಚರ್ಚೆಗೆ ಬಾರದೆ ಬೀದಿಗೆ ಬಂದಿದೆ ಎಂದು ಬಿಂಬಿಸಲು ಮಾಸ್ಟರ್ ಪ್ಲಾನ್ ರೂಪಿಸಿದೆ.
ಒಟ್ಟಿನಲ್ಲಿ ಈ ಬಾರಿಯ ಅಧಿವೇಶನ ಮೊಟಕುಗೊಳ್ಳುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಕಳೆದ ಬಾರಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಿ ಭಾಷಣವನ್ನೇ ಮೊಟಕುಗೊಳ್ಳುವಂತೆ ಮಾಡಿದ್ದ ಕಾಂಗ್ರೆಸ್ ಈ ಬಾರಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯದೇ ಜಂಟಿ ಅಧಿವೇಶನ ಮೊಟಕಾಗುವಂತೆ ಮಾಡುತ್ತಿದೆ.
ನಾಳೆಯೂ ಸರ್ಕಾರ ಮತ್ತು ಸಭಾಧ್ಯಕ್ಷರು ಕಾಂಗ್ರೆಸ್ ನಾಯಕರ ಮನವೊಲಿಕೆ ಪ್ರಯತ್ನ ನಡೆಸಿ ಕಲಾಪ ನಡೆಸಲು ಯತ್ನಿಸಲಿದ್ದಾರೆ. ಇದೇ ವೇಳೆ ಕೆಲವೊಂದು ವಿಧೇಯಕಗಳಿಗೆ ಅಂಗೀಕಾರ ಪಡೆದುಕೊಳ್ಳಬೇಕಿದೆ. ಹಾಗಾಗಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ರೀತಿ ನಾಳೆ ಕೈ ನಾಯಕರ ಮನವೊಲಿಕೆ ಮತ್ತು ಬಿಲ್‍ಗಳನ್ನು ಪಾಸ್ ಮಾಡಿಕೊಳ್ಳುವ ಕೆಲಸ ಎರಡನ್ನೂ ಮಾಡಲು ಬಿಜೆಪಿ ನಿರ್ಧರಿಸಿದೆ.
ಅದಕ್ಕೆ ಪೂರಕವಾಗಿ ಕಾರ್ಯಕಲಾಪ ಪಟ್ಟಿಯಲ್ಲೇ ನಾಲ್ಕು ಪ್ರಮುಖ ವಿಧೇಯಕಗಳನ್ನು ಸೇರಿಸಿದೆ. ಕರ್ನಾಟಕ ಸಿವಿಲ್ ಸೇವೆಗಳು, ಕರ್ನಾಟಕ ಸ್ಟಾಂಪು ತಿದ್ದುಪಡಿಯ ಎರಡು ವಿಧೇಯಕ, ಕ್ರಿಮಿನಲ್ ಕಾನೂನು ತಿದ್ದುಪಡಿ ವಿಧೇಯಕವನ್ನು ಅಜೆಂಡಾದಲ್ಲಿ ಸೇರಿಸಿದ್ದು, ನಾಳೆ ಇವುಗಳಿಗೆ ಅಂಗೀಕಾರ ಪಡೆದುಕೊಳ್ಳಲಿದೆ. ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ಪ್ರತಿಷ್ಟೆಗೆ ಬಿದ್ದಿದ್ದು, ಯಾರೂ ಕೂಡ ರಾಜಿಯಾಗಲು ಮುಂದಾಗುತ್ತಿಲ್ಲ.
ಯಾವ ಕಾರಣಕ್ಕೂ ಹೋರಾಟ ಕೈಬಿಡಬಾರದು ಎಂದು ಕಾಂಗ್ರೆಸ್ ನಾಯಕರು ನಿರ್ಧಾರಕ್ಕೆ ಬಂದಿದ್ದರೆ, ಈಶ್ವರಪ್ಪರಿಂದ ರಾಜೀನಾಮೆ ಪಡೆಯಬಾರದು ಎಂದು ಬಿಜೆಪಿ ನಿರ್ಧಾರಕ್ಕೆ ಬಂದಿದೆ. ಎರಡೂ ಪಕ್ಷಗಳು ರಾಜಕೀಯ ಲಾಭದ ಲೆಕ್ಕಾಚಾರದಲ್ಲಿ ತಮ್ಮ ತಮ್ಮ ನಿಲುವಿಗೆ ಅಂಟಿಕೊಂಡು ಕುಳಿತಿವೆ. ಹೀಗಾಗಿ ಸದನ ನಾಳೆಯೂ ಸಹಜ ಸ್ಥಿತಿಗೆ ಬರುವುದು ಕಷ್ಟಸಾಧ್ಯವಾಗಿದೆ.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವದ ಮೇಲಿನ ಚರ್ಚೆ ಇನ್ನೂ ಆರಂಭಗೊಂಡಿಲ್ಲ. ಈಶ್ವರಪ್ಪ ಹೇಳಿಕೆ ವಿವಾದ ಕಲಾಪವನ್ನು ಸಂಪೂರ್ಣವಾಗಿ ಬಲಿ ತೆಗೆದುಕೊಂಡಿದೆ.
ಒಂದು ವೇಳೆ ಸದನದಿಂದ ಕಾಂಗ್ರೆಸ್ ಸದಸ್ಯರನ್ನು ಹೊರಹಾಕಿದಲ್ಲಿ ಜನರ ಮುಂದೆ ಹೋಗಬಹುದು, ನಮ್ಮ ಧರಣಿಗೆ ಹೆದರಿ ನಮ್ಮನ್ನು ಕಲಾಪದಿಂದ ಹೊರಹಾಕಿದ್ದಾರೆ ಎಂದು ಅನುಕಂಪ ಗಿಟ್ಟಿಸಿಕೊಂಡು ರಾಜಕೀಯವಾಗಿ ಲಾಭ ಪಡೆದುಕೊಳ್ಳಬೇಕು ಎನ್ನುವುದು ಕಾಂಗ್ರೆಸ್ ಚಿಂತನೆಯಾಗಿತ್ತು. ಆದರೆ ಕಾಂಗ್ರೆಸ್‍ನ ಈ ತಂತ್ರಕ್ಕೆ ಬಿಜೆಪಿ ಸಿಲುಕದೆ ಪ್ರತಿತಂತ್ರ ಅನುಸರಿಸಿದೆ. ಕಲಾಪದಿಂದ ಹೊರಹಾಕಿ ಎನ್ನುವ ಕಾಂಗ್ರೆಸ್ ಸವಾಲನ್ನು ತಳ್ಳಿ ಹಾಕಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಸಿಎಂ ಬಸವರಾಜ ಬೊಮ್ಮಾಯಿ, ಕಲಾಪದಿಂದ ಸದಸ್ಯರನ್ನು ಹೊರಹಾಕುವುದು ಒಳ್ಳೆಯ ಸಂಪ್ರದಾಯವಲ್ಲ ಎಂದು ಹೇಳುತ್ತಾ ಕಾಂಗ್ರೆಸ್ ಸದಸ್ಯರ ಮನವೊಲಿಕೆಯ ಪ್ರಯತ್ನ ಮುಂದುವರೆಸಿದ್ದಾರೆ.
ಅಹೋರಾತ್ರಿ ಧರಣಿ ನಡೆಸಿದರೆ ಶುಕ್ರವಾರವೇ ಕಲಾಪವನ್ನು ಅನಿರ್ದಿಷ್ಟಾವಗೆ ಮುಂದೂಡಿಕೆ ಮಾಡಲಾಗುತ್ತದೆ ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರವಾಗಿತ್ತು.
ಹಾಗಾಗಿ ಕಲಾಪ ಮೊಟಕುಗೊಳಿಸಿದೆ ಎಂದು ಕಾಂಗ್ರೆಸ್ ಜನರ ಮುಂದೆ ಹೋಗುತ್ತಿತ್ತು. ಇದರಿಂದ ಕಾಂಗ್ರೆಸ್‍ಗೆ ರಾಜಕೀಯವಾಗಿ ಹೆಚ್ಚಿನ ಲಾಭವಾಗಲಿದೆ. ಇದನ್ನು ಅರಿತ ಬಿಜೆಪಿ ಕಲಾಪ ಮೊಟಕಿನಂತಹ ನಿರ್ಧಾರಕ್ಕೆ ಬಾರದೆ ಕಾದು ನೋಡುವ ತಂತ್ರ ಮೊರೆ ಹೋಗಿದೆ.
ಒಂದು ವೇಳೆ ಸರ್ಕಾರ ಮತ್ತು ಸಭಾಧ್ಯಕ್ಷರ ಸಂಧಾನ, ಮಾತುಕತೆ ಯಾವುದಕ್ಕೂ ಜಗ್ಗದೆ ಕಾಂಗ್ರೆಸ್ ತನ್ನ ನಿಲುವಿಗೆ ಅಂಟಿಕೊಂಡರೆ ಅನಿವಾರ್ಯವಾಗಿ ಸದನವನ್ನು ಮುಂದೂಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

Articles You Might Like

Share This Article