ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಇಲ್ಲ : ಸಚಿವ ಡಾ.ಸುಧಾಕರ್ ಸ್ಪಷ್ಟನೆ

ಬೆಂಗಳೂರು,ಸೆ.24-ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಭಾಗದಲ್ಲಿ ಮತ್ತೆ ಲಾಕ್‍ಡೌನ್ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಈ ಹಿಂದೆ ಲಾಕ್‍ಡೌನ್ ಮಾಡಿದಾಗ ಜನಜೀವನ ಸಾಕಷ್ಟು ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಿತ್ತು. ಆರ್ಥಿಕ ಪರಿಸ್ಥಿತಿ ಅಧಃಪತನಕ್ಕೆ ಹೋಗಿತ್ತು. ಹೀಗಾಗಿ ಮತ್ತೆ ಲಾಕ್‍ಡೌನ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರು 9 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಮೈಕ್ರೋ ಕಂಟೈನ್ಮೆಂಟ್ ವಲಯಗಳ ಮೇಲೆ ನಿಗಾ ವಹಿಸುವಂತೆ ಸೂಚನೆ ನೀಡಿದ್ದಾರೆ. ಅವರ ಸಲಹೆಯಂತೆ ಪರಿಣಾಮಕಾರಿಯಾಗಿ ಕೊರೋನಾ ನಿಯಂತ್ರಿಸುವ ಕೆಲಸವನ್ನು ಮಾಡುತ್ತೇವೆ. ಯಾವುದೇ ರೀತಿಯಲ್ಲಿ ಲಾಕ್‍ಡೌನ್ ಮಾಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಅಷ್ಟೇ ಪ್ರಮಾಣದಲ್ಲಿ ಗುಣಮುಖರಾಗುತ್ತಿರುವ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮೈಕ್ರೋ ಕಂಟೈನ್ಮೆಂಟ್ ವಲಯಗಳಲ್ಲಿ ಅಂದರೆ ಸೋಂಕಿತರ ಮನೆಯ ಸುತ್ತಮುತ್ತ ಪ್ರದೇಶದಲ್ಲಿ ಹೆಚ್ಚು ಟೆಸ್ಟ್‍ಗಳನ್ನು ಮಾಡಲಾಗುವುದು ಮತ್ತು ಆ ಪ್ರದೇಶಗಳ ಬಗ್ಗೆ ಹೆಚ್ಚು ನಿಗಾ ವಹಿಸಲಾಗುವುದು.

ಅದನ್ನು ಹೊರತು ಪಡಿಸಿದರೆ ಯಾವುದೇ ಕಾರಣಕ್ಕೂ ಬೆಂಗಳೂರಿನಲ್ಲಾಗಲಿ ಅಥವಾ ರಾಜ್ಯದ ಯಾವುದೇ ಭಾಗದಲ್ಲಾಗಲಿ ಲಾಕ್‍ಡೌನ್ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಹೇಳಿದರು.

ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಮಾತನಾಡಿ, ರಾಜ್ಯದ ಜನರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗುವುದು ಬೇಡ. ಕೊರೋನಾ ಹೆಚ್ಚಾಗುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ ಎಂಬ ಹಿನ್ನೆಲೆಯಲ್ಲಿ ನಿನ್ನೆ ಪ್ರಧಾನಿಯವರು ಮುಖ್ಯಮಂತ್ರಿಗಳ ಸಭೆ ನಡೆಸಿದ್ದಾರೆ. ಪರಿಣಾಮಕಾರಿಯಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಯಾವುದೇ ಕಾರಣಕ್ಕೂ ಲಾಕ್‍ಡೌನ್‍ನಂತಹ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ತಿಳಿಸಿದರು.

ಪ್ರಧಾನಿಯವರು ಲಾಕ್‍ಡೌನ್ ಮಾಡುವಂತೆ ಯಾವುದೇ ಸೂಚನೆ ನೀಡಿಲ್ಲ. ಮೈಕ್ರೋ ಕಂಟೈನ್ಮೆಂಟ್ ವಲಯದಲ್ಲಿ ನಿಗಾ ವಹಿಸುವಂತೆ ಸಲಹೆ ಮಾಡಿದ್ದಾರೆ. ಹಾಗಾಗಿ ಸರ್ಕಾರವಾಗಲಿ, ಬಿಬಿಎಂಪಿ ಆಗಲಿ ಲಾಕ್‍ಡೌನ್ ಕುರಿತು ಯಾವುದೇ ಚಿಂತನೆ ನಡೆಸಿಲ್ಲ ಎಂದರು.

ಮುಂದಿನ ಆರು ತಿಂಗಳ ಅವಧಿಯಲ್ಲಿ ಸಮರೋಪಾದಿಯಲ್ಲಿ ಕೋವಿಡ್ ನಿಯಂತ್ರಣ ಸಾಧಿಸುವುದು, ರ್ಯಾಪಿಡ್ ಆಂಟಿಜನ್ ಪರೀಕ್ಷೆಯಲ್ಲಿ ನೆಗಟಿವ್ ಬಂದಲ್ಲಿ, ಕೋವಿಡ್ ಲಕ್ಷಣವಿರುವವರಿಗೆ ಪುನಃ ಆರ್‍ಟಿಪಿಸಿಆರ್ ಪರೀಕ್ಷೆ ಮಾಡುವುದು, ಕೋವಿಡ್‍ನಿಂದ ರಕ್ಷಿಸಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಮಾಡುವುದು, ಕೋವಿಡ್ ಬಗ್ಗೆ ಜನಾಂದೋಲನ ರೂಪಿಸುವುದು,

ಕೋವಿಡ್ ಸೋಂಕಿತರಿಗೆ ಸಕಾಲದಲ್ಲಿ ಚಿಕಿತ್ಸೆ ನೀಡುವುದು, ನಿರ್ಬಂದಿತ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸುವುದು, ಜೀವ ಹಾಗೂ ಜೀವನ ಉಳಿಸುವ ನಿಟ್ಟಿನಲ್ಲಿ ಆರ್ಥಿಕ ಚಟುವಟಿಕೆಗಳನ್ನು ಸೂಕ್ತ ಪರೀಕ್ಷಾ ಮತ್ತು ಆಸ್ಪತ್ರೆ ಸೌಕರ್ಯಗಳನ್ನು ಖಾತ್ರಿ ಪಡಿಸಿಕೊಂಡು ಹಂತ ಹಂತವಾಗಿ ಆರಂಭಿಸುವುದು, ಮನೆ ಆರೈಕೆಯಲ್ಲಿರುವ ಸೋಂಕಿತರ ನಿರಂತರ ಮೇಲ್ವಿಚಾರಣೆಯನ್ನು ಕಡ್ಡಾಯಗೊಳಿಸುವುದು ಸೇರಿದಂತೆ ಇನ್ನಿತರ ಸಲಹೆಗಳನ್ನು ಸಭೆಯಲ್ಲಿ ಮೋದಿ ನೀಡಲಾಗಿದ್ದು, ಇವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ಕೋವಿಡ್ ವಿರುದ್ಧ ಸಮರ್ಥ ಹೋರಾಟಕ್ಕೆ ಮುಂದಾಗುತ್ತೇವೆಯೇ ಹೊರತು ಲಾಕ್‍ಡೌನ್ ಮಾಡುವುದಿಲ್ಲ ಎಂದರು ಸಚಿವರು ಸ್ಪಷ್ಟಪಡಿಸಿದರು.