“ಲೋಕಾಯುಕ್ತಕ್ಕೆ ಮೊದಲಿನಂತೆ ಹೆಚ್ಚಿನ ಅಧಿಕಾರ ನೀಡಿ”

Social Share

ಬೆಂಗಳೂರು,ಜ.24- ಜನರ ಹಿತದೃಷ್ಟಿಯಿಂದ ರಾಜ್ಯ ಲೋಕಾಯುಕ್ತಕ್ಕೆ ಮೊದಲಿನಂತೆ ಹೆಚ್ಚಿನ ಅಧಿಕಾರ ಬೇಕು ಎಂದು ಲೋಕಾಯುಕ್ತ ನ್ಯಾ.ವಿ.ವಿಶ್ವನಾಥ್ ಶೆಟ್ಟಿ ತಿಳಿಸಿದರು. ಜ.27ರಂದು ಲೋಕಾಯುಕ್ತ ಸ್ಥಾನದಿಂದ ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರವಿದ್ದಾಗ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುವ ನೌಕರರಿಗೆ ನೈತಿಕ ಸ್ಥೈರ್ಯ ಹೆಚ್ಚಾಗಲಿದೆ ಎಂದರು.
ಭ್ರಷ್ಟಾಚಾರ ನಿಗ್ರಹ ದಳವೂ ಸರ್ಕಾರದ ಅೀಧಿನಕ್ಕಿಂತ ಸ್ವಾಯತ್ತ ಸಂಸ್ಥೆಯಾದ ಲೋಕಾಯುಕ್ತ ಅಧಿಕಾರಕ್ಕೆ ಒಳಪಟ್ಟರೆ ಸೂಕ್ತ ಎಂದರು. ಲೋಕಾಯುಕ್ತ ನ್ಯಾಯಮೂರ್ತಿಯಾಗಿ ಪ್ರಕರಣಗಳ ತ್ವರಿತ ಇತ್ಯರ್ಥ ಮತ್ತು ದಕ್ಷತೆಯಿಂದ ಕೆಲಸ ಮಾಡಲು ಪ್ರಯತ್ನಿಸಿರುವ ಸಮಾಧಾನವಿದೆ.
ನನ್ನ ಅವಧಿಯಲ್ಲಿ ಯಾವುದೇ ಒತ್ತಡ ಬಂದಿಲ್ಲ. ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ರಚನೆಯಾದ ನಂತರ ಲೋಕಾಯುಕ್ತ ಅಧಿಕಾರ ಕುಂಠಿತವಾಗಿದೆ. ಆದಾಯಕ್ಕಿಂತ ಹೆಚ್ಚು ಸಂಪತ್ತು(ಆಸ್ತಿ) ಹೊಂದಿರುವ, ಲಂಚ ಸ್ವೀಕರಿಸುವಾಗ ದಾಳಿ ಮಾಡುವ ಅಧಿಕಾರ ಇತ್ತು. ಅದು ಸಹ ಕುಂಠಿತವಾಗಿದೆ ಎಂದು ಹೇಳಿದರು.
ಈ ಸಂಬಂಧ ರಿಟ್ ಅರ್ಜಿ ಹೈಕೋರ್ಟ್‍ನಲ್ಲಿದ್ದು ಅದಿನ್ನು ಇತ್ಯರ್ಥವಾಗಿಲ್ಲ ಎಂಬುದು ಬೇಸರದ ಸಂಗತಿ ಎಂದರು. ಪ್ರಾಸಿಕ್ಯೂಷನ್‍ಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾದ 26 ಪ್ರಕರಣಗಳು ತಿರಸ್ಕøತವಾಗಿವೆ. 10ಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಸದಸ್ಯರ ವಿರುದ್ಧ ಆರೋಪಗಳ ಕಂಡು ಬಂದಾಗ ಅವರನ್ನು ಸದಸ್ಯತ್ವ, ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದಿಂದ ಮತ್ತು ಮುಂದಿನ 6 ವರ್ಷಗಳ ಅವಧಿಗೆ ಸದಸ್ಯತ್ವ ಸ್ಥಾನಕ್ಕೆ ಸ್ರ್ಪಧಿಸದಂತೆ ಅನರ್ಹಗೊಳಿಸಲು ಕರ್ನಾಟಕ ನಗರ ಪಾಲಿಕೆಗಳ ಕಾಯ್ದೆ 1964 ಮತ್ತು ಮಹಾನಗರ ಪಾಲಿಕೆಗಳ ಕಾಯ್ದೆ 1974ಕ್ಕೆ ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ದುರಾಡಳಿತಕ್ಕೆ ಸಂಬಂಧಿಸಿದಂತೆ ವಿಚಾರಣೆಗಾಗಿ ಎಸಿಬಿಗೆ ವರ್ಗಾಯಿಸುವ ಅಧಿಕಾರ ಮತ್ತು ಸರಿಯಾಗಿ ವಿಚಾರಣೆ ಮಾಡದಿದ್ದರೆ ಕ್ರಮ ಕೈಗೊಳ್ಳುವ ಅಧಿಕಾರ ಲೋಕಾಯುಕ್ತಕ್ಕೆ ಇದೆ ಎಂದು ಹೇಳಿದರು.
ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಯಿತು. 2017ರ ಜನವರಿ 28ರಿಂದ ಲೋಕಾಯುಕ್ತರ ಮತ್ತು ಉಪಲೋಕಾಯುಕ್ತರ ವ್ಯಾಪ್ತಿಯಲ್ಲಿ ಇದ್ದ 20,199 ಪ್ರಕರಣಗಳ ಪೈಕಿ 2,677 ಪ್ರಕರಣಗಳು ಇತ್ಯರ್ಥವಾಗಿವೆ. 15 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಇದ್ದ ಪ್ರಕರಣಗಳನ್ನು ವಿಲೇವಾರಿಗೆ ವಿಚಾರಣಾಧಿಕಾರಿಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು.
ಪ್ರಸ್ತುತ 2003 ಪ್ರಕರಣಗಳು, 2430 ವಿಚಾರಣಾ ಪ್ರಕರಣಗಳು ಬಾಕಿಇದೆ. 7202 ದೂರು ಪ್ರಕರಣಗಳು 115 ವಿಚಾರಣಾ ಪ್ರಕರಣವನ್ನು ವಿಲೇವಾರಿ ಮಾಡಲಾಗಿದೆ. 304 ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿ ಸಾರ್ವಜನಿಕರ ಕುಂದುಕೊರತೆ ನಿವಾರಣೆ ಮಾಡಲಾಗಿದೆ. ಹೊರಗುತ್ತಿಗೆ ನೌಕರರ ಇಎಸ್‍ಐ, ಪಿಎಫ್ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ.
2015ನೇ ಇಸವಿಯಿಂದ ರಾಜ್ಯದಲ್ಲಿ ಕಾಣೆಯಾದ ಮಕ್ಕಳ ಪತ್ತೆ ಮತ್ತು ಪುನರ್ವಸತಿಗೆ ಮಾಡಿದ ಶಿಫಾರಸ್ಸಿನಲ್ಲಿ ಬಹಳಷ್ಟು ಪ್ರಗತಿ ಸಾಧಿಸಲಾಗಿದೆ.
ಸಂಸ್ಥೆಯ ಕಾರ್ಯ ನಿರ್ವಹಣೆಯನ್ನು ಪಾರದರ್ಶಕಗೊಳಿಸಲು ಸಮಗ್ರ ಮಾಹಿತಿ ನೀಡಲಾಗುತ್ತಿದೆ. ಕೆರೆಗಳ ಅಭಿವೃದ್ಧಿಗೆ ನಿರಂತರ ಕ್ರಮ, ಮೇಲ್ವಿಚಾರಣೆ ಮಾಡಲಾಗಿದೆ.
ಸರ್ಕಾರಿ ನೌಕರರು ಕೊನೆಯ ಕಾರ್ಯಾವಯಲ್ಲಿ ದುರ್ನಡತೆ ನಡೆಸಿ ಶಿಸ್ತು ಕ್ರಮಗಳಿಂದ ತಪ್ಪಿಸಿಕೊಂಡಿರುವ ಉದಾಹರಣೆಗಳನ್ನು ಪರಿಗಣಿಸಿ ಕರ್ನಾಟಕ ನಾಗರಿಕ ಸೇವಾ ನಿಯಮ 214ಕ್ಕೆ ತಿದ್ದುಪಡಿ ತರಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಎರಡು ವರ್ಷಗಳ ಕೋವಿಡ್ ಅವಯಲ್ಲಿ ಗೃಹ ಕಚೇರಿಯಿಂದಲೇ ಕರ್ತವ್ಯ ನಿರ್ವಹಿಸಲಾಗಿದೆ ಎಂದರು.

Articles You Might Like

Share This Article