ಬೆಂಗಳೂರು,ಆ.20-ಭ್ರಷ್ಟಾಚಾರದ ವಿರುದ್ಧ ರಾಜ್ಯದಲ್ಲಿ ಲೋಕಾಯುಕ್ತ ಮತ್ತೊಂದು ಸುತ್ತಿನ ಸಮರಕ್ಕೆ ಅಣಿಯಾಗುತ್ತಿದ್ದು, ಜನಸಾಮಾನ್ಯರು ನಿಟ್ಟುಸಿರುವ ಬಿಡುವ ಪರಿಸ್ಥಿತಿ ನಿರ್ಮಾಣವಾಗುವ ನಿರೀಕ್ಷೆಗಳಿವೆ. ಹೈಕೋರ್ಟ್ ವಿಭಾಗೀಯ ಪೀಠ ಇತ್ತೀಚೆಗೆ ಆದೇಶವೊಂದನ್ನು ನೀಡಿ ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿದ್ದು, ಅಲ್ಲಿನ ಎಲ್ಲ ಪ್ರಕರಣಗಳನ್ನು ಈ ಮೊದಲಿನಂತೆ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲು ಆದೇಶಿಸಿದೆ.
ಇದರ ಜೊತೆಯಲ್ಲಿ ಲೋಕಾಯುಕ್ತ ಕಾಯ್ದೆ 12/4ರಡಿ ದೋಷಪೂರಿತ ಅಧಿಕಾರಿಗಳು ಮತ್ತು ಪ್ರಕರಣಗಳಲ್ಲಿ ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರು ನೀಡುವ ಶಿಫಾರಸ್ಸುಗಳನ್ನು ಆದೇಶವೆಂದು ಪರಿಗಣಿಸಿ ಕಡ್ಡಾಯವಾಗಿ ಜಾರಿಗೊಳಿಸುವಂತೆ ಹೈಕೋರ್ಟ್ ಸಲಹೆ ನೀಡಿದೆ.
ಇದು ಅನ್ವಯವಾಗಿದ್ದೇ ಆದರೆ ರಾಜ್ಯದಲ್ಲಿ ಭ್ರಷ್ಟ ವ್ಯವಸ್ಥೆಗೆ ಬಿಸಿನೀರು ಕಾಯಿಸಿದಂತಾಗುತ್ತದೆ. ಹೈಕೋರ್ಟ್ ಆ.11ರಂದು ತೀರ್ಪು ನೀಡಿದ್ದು, ತಕ್ಷಣದಿಂದಲೇ ಎಸಿಬಿಯ ಎಲ್ಲ ಪ್ರಕರಣಗಳನ್ನು ವರ್ಗಾವಣೆ ಮಾಡಲು ಸೂಚಿಸಿತ್ತು.
ಈಗಾಗಲೇ ಹೈಕೋರ್ಟ್‍ನಲ್ಲಿ ವಿಚಾರಣೆ ನಡೆಯುತ್ತಿರುವ ಭ್ರಷ್ಟಾಚಾರದ ಪ್ರಕರಣಗಳಲ್ಲಿ ನ್ಯಾಯಪೀಠಗಳು ಎಸಿಬಿಯನ್ನು ವಿವರಣೆ ಕೇಳುವ ಬದಲು ಲೋಕಾಯುಕ್ತವನ್ನೇ ವಾದಿ ಅಥವಾ ಪ್ರತಿ ವಾದಿಯನ್ನಾಗಿ ಪರಿಗಣಿಸುತ್ತಿದೆ. ನೋಟಿಸ್ ಜಾರಿ ಮಾಡುತ್ತಿದೆ.
ಸರ್ಕಾರದ ಮಟ್ಟದಲ್ಲಿ ಹೈಕೋರ್ಟ್ ಆದೇಶವನ್ನು ಒಪ್ಪಿಕೊಳ್ಳುವುದು ಮತ್ತು ಯಾವುದೇ ಮೇಲ್ಮನವಿ ಸಲ್ಲಿಸದೆ ಜಾರಿಗೊಳಿಸುವ ಚರ್ಚೆಯಾಗಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿಯವರು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ, ಪೊಲೀಸ್ ಮಹಾನಿರ್ದೇಶಕರಾದ ಪ್ರವೀಣ್ ಸೂದ್ ಸೇರಿದಂತೆ ಕಾನೂನು ತಜ್ಞರ ಜೊತೆ ಚರ್ಚಿಸಿದ್ದು, ಕಾನೂನಾತ್ಮಕ ವರದಿ ನೀಡಲು ಸೂಚಿಸಿದ್ದಾರೆ ಎನ್ನಲಾಗಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನು ಜಾರಿಗೊಳಿಸಲು 2015ರಲ್ಲಿ ಕಾಯ್ದೆ ರೂಪಿಸಿ ಎಸಿಬಿಯನ್ನು ರಚಿಸಲಾಗಿತ್ತು. ಹೈಕೋರ್ಟ್ ಆದೇಶದಿಂದ ಎಸಿಬಿ ರದ್ದುಗೊಂಡಿದ್ದು, ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸಲು ಮತ್ತೆ ಕಾನೂನು ತಿದ್ದುಪಡಿ ಮತ್ತು ಸುಗ್ರೀವಾಜ್ಞೆಯ ಅವಶ್ಯವಿದೆ.
ಸೆಪ್ಟೆಂಬರ್‍ನಲ್ಲಿ ವಿಧಾನಸಭೆ ಅವೇಶನ ನಡೆಯಲಿದ್ದು, ಅಲ್ಲಿ ಮಸೂದೆ ಮಂಡಿಸುವುದು ಅಥವಾ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಸುಗ್ರೀವಾಜ್ಞೆ ಮೂಲಕ ಹೈಕೋರ್ಟ್ ಆದೇಶ ಜಾರಿಗೊಳಿಸುವ ಸಾಧ್ಯತೆಗಳ ಕುರಿತು ಚರ್ಚೆ ನಡೆದಿದೆ.
ಹೈಕೋರ್ಟ್ ಆದೇಶದ ಪ್ರಕಾರ ಎಸಿಬಿಯಲ್ಲಿರುವ ಪೊಲೀಸ್ ಸಿಬ್ಬಂದಿ ಮತ್ತು ವ್ಯವಸ್ಥೆಯನ್ನು ಲೋಕಾಯುಕ್ತಕ್ಕೆ ವಿಲೀನಗೊಳಿಸಲಿದೆ. ಲೋಕಾಯುಕ್ತದಲ್ಲಿ ಈಗಾಗಲೇ ಎಡಿಜಿಪಿ ಸೇರಿದಂತೆ 16 ಎಸ್ಪಿಗಳು , ಬಹಳಷ್ಟು ಡಿವೈಎಸ್ಪಿಗಳು ಕೆಲಸ ನಿರ್ವಹಿಸುತ್ತಿದ್ದಾರೆ.
ಮೂರು ಎಸ್ಪಿಗಳು, ಇಬ್ಬರು ಡಿವೈಎಸ್ಪಿಗಳು, 10 ಮಂದಿ ಇನ್‍ಸ್ಪೆಕ್ಟರ್‍ಗಳ ಹುದ್ದೆಗಳು ಮಾತ್ರ ಖಾಲಿ ಉಳಿದಿವೆ. ಉಳಿದಂತೆ ಸಂಪೂರ್ಣ ಪೊಲೀಸ್ ಬಲ ಎಸಿಬಿಯಲ್ಲಿದೆ. ಬಿ.ಎಸ್.ಪಾಟೀಲ್ ಲೋಕಾಯುಕ್ತರಾದ ಬಳಿಕ 26 ಅಂಶಗಳ ಸುತ್ತೋಲೆಯೊಂದನ್ನು ತಮ್ಮ ಸಿಬ್ಬಂದಿಗಳಿಗೆ ನೀಡಿದ್ದು, ಅದರ ಪ್ರಕಾರ ಲೋಕಾಯುಕ್ತದ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕರಿಂದ ದೂರು ಮತ್ತು ಅಹವಾಲುಗಳನ್ನು ಸ್ವೀಕರಿಸಬೇಕು.
ತಾಲ್ಲಕು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಮೋಜಣಿದಾರರ ಕಚೇರಿ, ನಗರ ಮತ್ತು ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳು, ತೋಟಗಾರಿಕೆ, ರೈತ ಸಂಪರ್ಕ, ಕೃಷಿ ಮಾರುಕಟ್ಟೆ , ತಾಲೂಕು ಜಿಲ್ಲಾ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು, ವಿದ್ಯಾರ್ಥಿ ನಿಲಯಗಳು, ಶಾಲೆಗಳು ಸೇರಿದಂತೆ ಹಲವಾರು ಸ್ಥಳಗಳಿಗೆ ಭೇಟಿ ನೀಡಬೇಕು, ಪರಿಶೀಲನೆ ನಡೆಸಬೇಕು, ಕಾಲಾನುಕ್ರಮವಾಗಿ ವರದಿ ನೀಡಬೇಕೆಂದು ಆದೇಶಿಸಲಾಗಿದೆ.
ಅಕ್ರಮ ಗಣಿಗಾರಿಕೆ, ಭೂ ಒತ್ತುವರಿ, ಅನಧಿಕೃತ ಕಸ ವಿಲೇವಾರಿ ಸೇರಿದಂತೆ ಹಲವಾರು ಸಾರ್ವಜನಿಕ ಸಮಸ್ಯೆಗಳ ಮೇಲೂ ಲೋಕಾಯುಕ್ತ ಕಾಯ್ದೆಯನ್ನು ಬಳಸಿ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಅಕ್ರಮಗಳನ್ನು ಗಮನಿಸಬೇಕು. ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಪೂರ್ಣಗೊಳಿಸಬೇಕು ಎಂಬ ಅಂಶಗಳ ಮೂಲಕ ಲೋಕಾಯುಕ್ತವನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಚುರುಕುಗೊಳಿಸಿದ್ದಾರೆ.
ಈಗ ಭ್ರಷ್ಟಾಚರ ನಿಗ್ರಹ ಕಾಯ್ದೆಯೂ ಲೋಕಾಯುಕ್ತರ ಬತ್ತಳಿಕೆಗೆ ಸೇರಿದ್ದೇ ಆದರೆ ಸಂಸ್ಥೆಯ ಗತವೈಭವ ಮರಳುವ ಜೊತೆಗೆ ಜನ ಸಾಮಾನ್ಯರಿಗೆ ಲಂಚಾವತಾರದಿಂದ ಒಂದಿಷ್ಟು ಬಿಡುಗಡೆ ಸಿಗುವ ನಿರೀಕ್ಷೆಗಳು ವ್ಯಕ್ತವಾಗಿದೆ.
ಸರ್ಕಾರ ಕೂಡ ಹೈಕೋರ್ಟ್ ಆದೇಶಕ್ಕೆ ಪೂರಕವಾಗಿಯೇ ನಡೆದುಕೊಳ್ಳುತ್ತಿರುವುದರಿಂದ ಲೋಕಾಯುಕ್ತಕ್ಕೆ ಮತ್ತೆ ಹಾದಿ ಸುಗಮವೆಂದು ಭಾವಿಸಲಾಗುತ್ತಿದೆ.