ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮಠಗಳಿಗೆ ಫುಲ್ ಡಿಮ್ಯಾಂಡ್

Social Share

ಬೆಂಗಳೂರು,ಆ.5- ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಧಾರ್ಮಿಕ ಶಕ್ತಿ ಕೇಂದ್ರಗಳಾದ ಮಠಮಾನ್ಯಗಳಿಗೆ ಎಲ್ಲಿಲ್ಲದ ಬೇಡಿಕೆ ಬರುತ್ತಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಪ್ರತಿಯೊಂದು ರಾಜಕೀಯ ಪಕ್ಷಗಳು ಈಗ ಮಠಗಳಿಗೆ ಎಡತಾಗುತ್ತಿದ್ದು, ಈ ನಿಟ್ಟಿನಲ್ಲಿ ಈಗ ರಾಜ್ಯದ ಪ್ರಮುಖ ಲಿಂಗಾಯತ ಮಠಾೀಧಿಶರನ್ನ ನೇರವಾಗಿ ಭೇಟಿ ಮಾಡಿ ವಿಶ್ವಾಸಗಳಿಸುವ ಮತ್ತೊಂದು ಹೊಸದಾದ ಚುನಾವಣೆ ಕಸರತ್ತು ಆರಂಭಿಸಿವೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಅಸಮಾಧಾನಗೊಂಡಿರುವ ಲಿಂಗಾಯತ ಸಮುದಾಯದ ಬೆಂಬಲ ಪಡೆಯಲು ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿನ ಸುತ್ತೂರು, ಸಿದ್ಧಗಂಗಾ, ಚಿತ್ರದುರ್ಗ, ಸಿರಿಗೆರೆ, ರಂಭಾಪುರಿ ಸೇರಿದಂತೆ ಇತರೆ ಪ್ರಮುಖ ವೀರಶೈವ ಲಿಂಗಾಯತ ಮಠಗಳ ಪ್ರಮುಖ ಮಠಾೀಧಿಶರನ್ನು ಸಂಪರ್ಕಿಸಿ ಬೆಂಬಲಕ್ಕೆ ಮನವಿ ಮಾಡುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಲಿಂಗಾಯತ ಸಮುದಾಯದ ನಾಯಕರೆಂದು ಪ್ರತಿಬಿಂಬಿತವಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹೊರತುಪಡಿಸಿ ನೇರವಾಗಿಯೇ ಲಿಂಗಾಯತ ಮಠಗಳ ಸ್ವಾಮೀಜಿಯವರನ್ನು ಸಂಪರ್ಕಿಸಿ, ಅವರ ಆಶೀರ್ವಾದ ಪಡೆಯಲು ಬಿಜೆಪಿ ಹೈಕಮಾಂಡ್ ಮತ್ತು ಸಂಘ ಪರಿವಾರ ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸಿದೆ.

ರಾಜ್ಯಕ್ಕೆ ಪ್ರವಾಸದಲ್ಲಿದ್ದಾಗ ಪ್ರಮುಖ ಮಠಗಳಿಗೆ ಭೇಟಿ ನೀಡುವುದು, ಮಠಾೀಧಿಶರ ಸಭೆ ನಡೆಸುವುದು, ಮಠದ ಸಭೆ-ಸಮಾರಂಭಗಳಲ್ಲಿ ಭಾಗವಹಿಸಿ ಸ್ವಾಮೀಜಿಗಳ ಕೃಪೆಗೆ ಪಾತ್ರವಾಗುವುದು. ಆ ಮೂಲಕ ನಮಗೆ ಮಠದ ಸ್ವಾಮೀಜಿಗಳ ಬೆಂಬಲವಿದೆ ಎಂಬ ಸಂದೇಶ ಸಮುದಾಯದ ಮತದಾರರಿಗೆ ನೀಡುವುದು ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್‍ಗಳ ಉದ್ದೇಶವಾಗಿದೆ.

ಬಿಜೆಪಿಯ ಹೈಕಮಾಂಡ್ ಆದ ಪ್ರಧಾನಿ ನರೇಂದ್ರ ಮೋದಿ ಹಾಗು ಅಮಿತ್ ಷಾ ಅವರು ಸುತ್ತೂರು ಮತ್ತು ಸಿದ್ಧಗಂಗಾಮಠದ ಶ್ರೀಗಳ ಜತೆ ನೇರ ಸಂಪರ್ಕದಲ್ಲಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುತ್ತೂರು ಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀಗಳ ಆಶೀರ್ವಾದ ಪಡೆದಿದ್ದರು.

ಹಾಗೆಯೇ ಕಳೆದ ಏಪ್ರಿಲ್ ತಿಂಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ತುಮಕೂರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಡಾ. ಶಿವಕುಮಾರ ಶ್ರೀಗಳ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿದ್ದಗಂಗಾ ಮಠಕ್ಕೆ ತಾವು ಬಹಳ ಹತ್ತಿರ ಎಂಬ ಸಂದೇಶ ನೀಡಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಪದಚ್ಯುತಿ ನಂತರ ಬಿಜೆಪಿ ನಡೆ ಬಗ್ಗೆ ಬೇಸರಗೊಂಡಿರುವ ಲಿಂಗಾಯತ ಸಮುದಾಯದ ಮತಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಪಕ್ಷ ಸಹ ಕಾರ್ಯತಂತ್ರ ರೂಪಿಸತೊಡಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಲಿಂಗಾಯತ ಸಮುದಾಯದ ಬೆಂಬಲವೇ ಪ್ರಮುಖ ಕಾರಣ ಎನ್ನುವ ಸತ್ಯವನ್ನು ಅರಿತಿರುವ ಕಾಂಗ್ರೆಸ್ ಹೈಕಮಾಂಡ್ ತನ್ನ ಪಕ್ಷದ ಕಡೆ ಲಿಂಗಾಯತ ಸಮುದಾಯದ ಮತಗಳನ್ನು ಆಕರ್ಷಿಸಲು ಈಗ ಮಠಾೀಧಿಶರ ಮೊರೆ ಹೋಗುತ್ತಿದೆ.

ರಾಹುಲ್ ಗಾಂಧಿ ಪ್ರಮುಖ ಲಿಂಗಾಯತ ಮಠಗಳಲ್ಲಿ ಒಂದಾದ ಚಿತ್ರದುರ್ಗ ಬೃಹನ್ಮಠಕ್ಕೆ ಬೇಟಿ ನೀಡಿ ಅಲ್ಲಿ ಸ್ವಾಮೀಜಿಗಳ ಸಭೆ ನಡೆಸಿ ಆಶೀರ್ವಾದ ಪಡೆದಿದ್ದಾರೆ. ಕಳೆದ ಏಪ್ರಿಲ್‍ನಲ್ಲಿ ರಾಹುಲ್ ಗಾಂಧಿ ತುಮಕೂರಿನ ಸಿದ್ದಗಂಗಾ ಮಠಕ್ಕೂ ಭೇಟಿ ನೀಡಿದ್ದರು.

ಸುತ್ತೂರು ಶ್ರೀಗಳ ಜತೆಗೂ ಕಾಂಗ್ರೆಸ್ ಹೈಕಮಾಂಡ್ ಉತ್ತಮ ಬಾಂಧವ್ಯ ಹೊಂದಿದೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆದ್ದು ಅಧಿಕಾರಕ್ಕೆ ಬರಲು ಮಠಗಳ ಬೆಂಬಲ ಅತ್ಯಗತ್ಯವಾಗಿದೆ.

ಅಪಾರ ಪ್ರಮಾಣದ ಭಕ್ತರನ್ನು ಹೊಂದಿರುವ ಲಿಂಗಾಯತ ಮಠದ ಶ್ರೀಗಳು ಸಂದೇಶ ನೀಡಿದರೆ ಪಕ್ಷದ ಅಭ್ಯರ್ಥಿಗಳ ಗೆಲವು ಸುಲಭವಾಗಲಿದೆ ಎಂಬ ಲೆಕ್ಕಾಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಈಗ ಮಠಗಳ ಓಲೈಕೆ ರಾಜಕಾರಣದಲ್ಲಿ ತೊಡಗಿವೆ.

ವೀರಶೈವ ಲಿಂಗಾಯತ ಸಮುದಾಯ ರಾಜ್ಯದ 224 ವಿಧಾನಸಭೆ ಕ್ಷೇತ್ರಗಳ ಪೈಕಿ ಅಂದಾಜು 150 ವಿಧಾನಸಭೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಲಿಂಗಾಯತರ ಬೆಂಬಲ ದೊರೆತರೆ ಅಧಿಕಾರಕ್ಕೆ ಬರುವ ದಾರಿ ಸುಗಮವಾಗುತ್ತದೆ.

ಲಿಂಗಾಯತ ಸಮುದಾಯದ ಜತೆಗೆ ಸ್ವಾಮೀಜಿಗಳು ಇತರೆ ಸಮುದಾಯದ ಭಕ್ತರನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದ್ದರಿಂದ ಚುನಾವಣೆಯಲ್ಲಿ ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರವನ್ನೂ ಕಾಂಗ್ರೆಸ್ ಮತ್ತು ಬಿಜೆಪಿ ಹೈಕಮಾಂಡ್ ಇಟ್ಟುಕೊಂಡಿವೆ.
ರಾಜ್ಯ ವಿಧಾನಸಭೆಯಲ್ಲಿ ಬಿಜೆಪಿ ಪಕ್ಷ 43, ಕಾಂಗ್ರೆಸ್ 14 ಹಾಗು ಜೆಡಿಎಸ್ 3 ವೀರಶೈವ ಲಿಂಗಾಯತ ಶಾಸಕರನ್ನು ಹೊಂದಿವೆ.

ಲಿಂಗಾಯತ ಶಾಸಕರ ಗೆಲುವಿನ ಜೊತೆಗೆ ಉಳಿದ ಜನಾಂಗದ ಶಾಸಕರ ಗೆಲುವಿನಲ್ಲೂ ಲಿಂಗಾಯತ ಸಮುದಾಯದ ನಿರ್ಣಾಯಕ ಪಾತ್ರ ಇರುವುದರಿಂದ ಮಠಾೀಶರ ಕೃಪಾಕಟಾಕ್ಷಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಹಾತೊರೆಯುತ್ತಿವೆ.

Articles You Might Like

Share This Article