ಬೆಂಗಳೂರು,ಆ.9- ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಲು ವಿಶ್ವದ ಮುಂಚೂಣಿಯಲ್ಲಿರುವ ಜಪಾನಿನ ವಿವಿಧ ಕಂಪನಿಗಳ ಮುಖ್ಯಸ್ಥರು ಹಾಗೂ ಉದ್ಯಮಿಗಳನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಭೇಟಿ ಯಾಗಿ ಮಾತುಕತೆ ನಡೆಸಿದ್ದಾರೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಅಂತಾರಾಷ್ಟ್ರೀಯ ರೋಡ್ ಶೋ ಭಾಗವಾಗಿ ರಾಜ್ಯ ನಿಯೋಗವು ಜಪಾನ್‍ಗೆ ಮೂರು ದಿನಗಳ ಭೇಟಿ ಕೈಗೊಂಡಿದೆ.
ಕಳೆದ ಮೂರು ದಿನಗಳಿಂದ ಜಪಾನ್ ರಾಜಧಾನಿ ಟೋಕಿಯೋ ಸೇರಿದಂತೆ ವಿವಿಧ ಕಡೆ ಭೇಟಿ ನೀಡಿರುವ ಅವರು, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಇರುವ ವಿಫುಲ ಅವಕಾಶಗಳನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ನಿರಂತರವಾಗಿ ವಿವಿಧ ಕಂಪನಿಗಳು ಹಾಗೂ ಅದರ ಮುಖ್ಯಸ್ಥರ ಜೊತೆ ನಿರಂತರವಾಗಿ ಮಾತುಕತೆ ನಡೆಸುತ್ತಿರುವ ನಿರಾಣಿಯವರು ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯ ಚಿತ್ರಣವನ್ನು ತೆರೆದಿಟ್ಟಿದ್ದಾರೆ. ಮೂರನೇ ದಿನವಾದ ಮಂಗಳವಾರವು ಜಪಾನ್ ಮೂಲದ ಫುಜಿತ್ಸು ಲಿಮಿಟೆಡ್‍ನ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ನವೆಂಬರ್ 2ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಔಪಚಾರಿಕ ಆಹ್ವಾನ ನೀಡಲಾಯಿತು. ಕರ್ನಾಟಕ ಸರ್ಕಾರ ಕೈಗಾರಿಕೆಗಳ ಬೆಳವಣಿಗೆ ಮತ್ತು ಉತ್ತೇಜನಕ್ಕೆ ಜಾರಿ ಮಾಡಿರುವ 2020-25ರ ಕೈಗಾರಿಕಾ ನೀತಿ ಇಡೀ ದೇಶಕ್ಕೆ ಮಾದರಿ ಯಾಗಿದ್ದು, ವಿಶ್ವದ ಮುಂಚೂಣಿ ಯಲ್ಲಿರುವ ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಲು ಮುಂದೆ ಬಂದಿವೆ ಎಂದು ಮನವರಿಕೆ ಮಾಡಿಕೊಟ್ಟರು.
ರಕ್ಷಣೆ, ಆಹಾರ ಸಂಸ್ಕರಣೆ, ಬಾಹ್ಯಾಕಾಶ, ಐಟಿಬಿಟಿ, ವಾಣಿಜ್ಯ ಮತ್ತು ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿವೆ. ಬಂಡವಾಳ ಹೂಡುವ ಉದ್ಯಮಿ ಗಳಿಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸಿಕೊಡಲಿದೆ ಎಂದು ಉದ್ದಿಮೆದಾರರಿಗೆ ಅಭಯ ನೀಡಿದರು.
ಉದ್ಯಮ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಜಪಾನ್ ನಡುವಿನ ಔದ್ಯಮಿಕ ಸಂಬಂಧ ಉತ್ತಮ ವಾಗಿದೆ. ವಿಶೇಷವಾಗಿ, ಜಪಾನ್‍ಗೆ ಸಂಬಂಧಿಸಿದಂತೆ, ತುಮಕೂರಿನ ವಸಂತನರಸಪುರದಲ್ಲಿ ಜಪಾನೀಸ್ ಕೈಗಾರಿಕಾ ಟೌನ್‍ಶಿಪ್ ಸ್ಥಾಪಿಸ ಲಾಗಿದೆ. ಅದಕ್ಕಾಗಿ 519.55 ಎಕರೆ ಭೂಮಿ ಮೀಸಲಿಡಲಾಗಿದ್ದು, ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಜಪಾನಿನ ಕಂಪನಿಗಳಿಂದ ನೇರ ಹೂಡಿಕೆಗೆ ಎಲ್ಲಾ ರೀತಿಯ ಸಹಕಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಹೆಚ್ಚಿನ ಆರ್ಥಿಕ ಪ್ರಗತಿ ಸಾಧಿಸುವ ಉದ್ದೇಶದಿಂದ ಎಲ್ಲ ಕ್ಷೇತ್ರಗಳಲ್ಲಿ ವಿದೇಶಿ ಕಂಪನಿಗಳ ನೇರ ಹೂಡಿಕೆಯನ್ನು ರಾಜ್ಯ ಸರಕಾರ ಉತ್ತೇಜಿಸುತ್ತದೆ. ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಆಕರ್ಷಿಸಿರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ದೇಶದ ಒಟ್ಟಾರೆ ವಿದೇಶಿ ನೇರ ಹೂಡಿಕೆಯಲ್ಲಿ ನಮ್ಮ ರಾಜ್ಯದ ಪಾಲು ಶೇ.38 ಎಂದು ಅವರು ವಿವರಿಸಿದರು.
ಬೆಂಗಳೂರು ಮಾತ್ರವಲ್ಲದೆ 2ನೇ ಹಂತದ ನಗರಗಳಾದ ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿಘಿ, ಧಾರವಾಡ, ಕಲಬುರಗಿ ಅದೇ ರೀತಿ 3ನೇ ಹಂತದ ನಗರಗಳಾದ ಶಿವಮೊಗ್ಗ, ತುಮಕೂರು, ಬಳ್ಳಾರಿ, ಬೀದರ್, ಬಾಗಲಕೋಟೆ ಸೇರಿದಂತೆ ಎಲ್ಲಾ ಕಡೆ ಬಂಡವಾಳ ಹೂಡಿಕೆಗೆ ಉದ್ಯಮಿಗಳು ಮುಂದೆ ಬರುತ್ತಿದ್ದಾರೆ. ಉದ್ಯಮಿಗಳಿಗೆ ನಮ್ಮ ಸರ್ಕಾರ ಸದಾ ಬೆಂಗಾವಲಿಗೆ ಇರುತ್ತದೆ ಎಂದು ಉದ್ಯಮಿಗಳಿಗೆ ಆಶ್ವಾಸನೆ ನೀಡಿದರು.
ವಿಶ್ವದ ಸುಪ್ರಸಿದ್ದ ಕೈಗಾರಿಕೆಗಳು ಇಲ್ಲಿ ಸ್ಥಾಪಿತವಾಗಿದೆ. ಕೈಗಾರಿಕಾ ಸ್ನೇಹಿ ಸರ್ಕಾರ ನಮ್ಮದಾಗಿದ್ದು, ಹೂಡಿಕೆದಾರರಿಗೆ ಕೆಂಪು ರತ್ನಗಂಬಳಿ ಹಾಕುತ್ತೇವೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಜಾರಿಗೆ ತಂದಿರುವ 2020-25ರ ಕೈಗಾರಿಕಾ ನೀತಿ ಉದ್ಯಮಿಗಳಿಗೆ ವರದಾನವಾಗಿ ಪರಿಣಮಿಸಿದೆ. ಇದರಿಂದಾಗಿ ನಾನಾ ರಾಷ್ಟ್ರಗಳಿಂದ ಕರ್ನಾಟಕಕ್ಕೆ ಬಂಡವಾಳ ಹೂಡಲು ಉದ್ಯಮಿಗಳು ಮುಂದೆ ಬರುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಫಲವಾಗಿ ಭಾರತ ಇಂದು ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಒಡ್ಡುವ ಮಟ್ಟಕ್ಕೇರಿದೆ. ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆ ಫಲಪ್ರದವಾಗಿದ್ದು, ಬಂಡವಾಳ ಹೂಡಿಕೆ ಆಕರ್ಷಿಸುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತ ಗುಂಜನ್ ಕೃಷ್ಣ, ಫುಜಿತ್ಸು ಲಿ.ಕಾಪೆರ್ರೇಟ್ ಕಾರ್ಯ ನಿರ್ವಾಹಕ ಅಧಿಕಾರಿ ವಿವೇಕ್ ಮಹಾಜನ್, ಕಾಪೆರ್ರೇಟ್ ಕಾರ್ಯನಿರ್ವಾಹಕ ಅಧಿಕಾರಿ (ಸಂಶೋಧನಾ ನಿರ್ವಹಣಾ ಕೇಂದ್ರ) ಕೆನ್ ಟೊಯೋಡಾ ಮತ್ತು ಸಿಬ್ಬಂದಿ ಮುಖ್ಯಸ್ಥ ಜಂಗೊ ಒಕೈ ಉಪಸ್ಥಿತರಿದ್ದರು.