ಕಂಪ್ಲೀಟ್ ಲಾಕ್‍ಡೌನ್ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ : ಸಚಿವ ಕೆ.ಸುಧಾಕರ್

Social Share

ಬೆಂಗಳೂರು,ಜ.7- ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ಜನ ಸಾಮಾನ್ಯರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸದ್ಯಕ್ಕೆ ಲಾಕ್‍ಡೌನ್ ಮಾಡುವ ಚಿಂತನೆಯಲ್ಲಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಒಂದು ಕಡೆ ಇಂದಿನಿಂದ ರಾಜ್ಯಾದ್ಯಂತ ವೀಕೆಂಡ್ ಕಫ್ರ್ಯೂ ಜಾರಿಯಾಗುತ್ತಿರುವ ಸಂದರ್ಭದಲ್ಲೇ ಲಾಕ್‍ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಹೇಳಿರುವುದು ಮಹತ್ವ ಪಡೆದುಕೊಂಡಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುವುದನ್ನು ಯಾರೂ ತಡೆಗಟ್ಟಲು ಸಾಧ್ಯವಿಲ್ಲ. ನಾವು ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದೇ ಹೊರತು ಎಲ್ಲದಕ್ಕೂ ಲಾಕ್‍ಡೌನ್ ಪರಿಹಾರವಲ್ಲ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಒಂದು ಮತ್ತು 2ನೇ ಅಲೆಯ ಸಂದರ್ಭದಲ್ಲಿ ಲಾಕ್‍ಡೌನ್ ಜಾರಿ ಮಾಡಿದ ಪರಿಣಾಮ ಜನಸಾಮಾನ್ಯರು ಎಷ್ಟು ಕಷ್ಟಪಟ್ಟರು ಎಂಬ ಅರಿವು ನಮಗಿದೆ. ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಲಾಕ್‍ಡೌನ್ ಮಾಡುವ ಚಿಂತನೆಯನ್ನೇ ಮಾಡಿಲ್ಲ ಎಂದು ಹೇಳಿದರು.
ಲಾಕ್‍ಡೌನ್ ಕಳೆದು ಹೋಗಿರುವ ನೀತಿ. ಹಾಗಾಗಿ ಇನ್ನುಮುಂದೆ ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ಇರುವುದಿಲ್ಲ. ಆದರೆ 3ನೇ ಅಲೆಯಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತದೆ. ನಾವು ಒಂದಿಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಸಾರ್ವಜನಿಕರ ಸಹಕಾರವು ಅಗತ್ಯ ಎಂದು ಮನವಿ ಮಾಡಿದರು.
ನಮಗೆ ಮೊದಲ ಮತ್ತು 2ನೇ ಅಲೆ ಬಂದಾಗ ಯಾವ ರೀತಿ ಕೋವಿಡ್‍ಗೆ ಚಿಕಿತ್ಸೆ ಕೊಡಬೇಕು ಎಂಬ ಅರಿವು ಇರಲಿಲ್ಲ. ಈಗ ನಮಗೆ ಸಾಕಷ್ಟು ಅನುಭವವಾಗಿದೆ. ಒಂದು ಕಡೆ ಕೋವಿಡ್ ಲಸಿಕೆ, ಮತ್ತೊಂದು ಕಡೆ ಮಾತ್ರೆಗಳು ಸಹ ಬರುತ್ತಿದೆ. ಇದನ್ನು ನಾವು ಈಗ ಧೈರ್ಯವಾಗಿ ಎದುರಿಸಲು ಸಿದ್ದರಾಗಿದ್ದೇವೆ ಎಂದರು.
ಮೂರನೇ ಅಲೆ ಬಂದಿರುವುದರಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತದೆ. ನಾವು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ. ಇದು ವಿಶ್ವವ್ಯಾಪಿಯಾಗಿ ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಯಾರೊಬ್ಬರೂ ತಲೆಕೆಡಿಸಿಕೊಳ್ಳಬಾರದು ಎಂದು ಸುಧಾಕರ್ ಸಾರ್ವಜನಿಕರಿಗೆ ಧೈರ್ಯ ಹೇಳಿದರು.
ಕರ್ನಾಟಕ ದೇಶದಲ್ಲೇ ಜನತೆಗೆ ಅತ್ಯುತ್ತಮವಾಗಿ ಲಸಿಕೆ ನೀಡಿರುವ ರಾಜ್ಯಗಳ ಪೈಕಿ ಒಂದಾಗಿದೆ. ಪಾಸಿವಿಟಿ ದರ ಮತ್ತು ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಹೆದರಬೇಕಾದ ಅಗತ್ಯವಿಲ್ಲ ಎಂದರು. ಎರಡು ವರ್ಷದ ಅನುಭವ ನಮಗೆ ಸಾಕಷ್ಟು ಅನುಭವ ನೀಡಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಅದರ ತೀವ್ರತೆ ಕಡಿಮೆ. ನಮ್ಮಲ್ಲಿ ಈಗ ಮುಂದುವರೆದ ವೈದ್ಯಕೀಯ ಚಿಕಿತ್ಸೆ ಇರುವುದರಿಂದ ಇದರ ಬಗ್ಗೆ ಹೆಚ್ಚು ಚಿಂತೆಗೀಡಾಗಬೇಕಾದ ಅಗತ್ಯವೂ ಇಲ್ಲ. ಕೆಲವು ಸಂದರ್ಭಗಳಲ್ಲಿ ಒಂದಿಷ್ಟು ನಿಯಮವನ್ನು ಜಾರಿ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರು ಲಸಿಕೆಯನ್ನು ಪಡೆಯದಿದ್ದರೆ ತಕ್ಷಣವೇ ನಿಮಗೆ ನಿಗದಿಪಡಿಸಿರುವ ಕೇಂದ್ರಗಳಲ್ಲಿ ಬಂದು ಲಸಿಕೆ ಪಡೆಯಿರಿ. ಇದರ ಬಗ್ಗೆ ಹಿಂಜರಿಕೆ ಇಟ್ಟುಕೊಳ್ಳುವುದು ಬೇಡ. ಲಸಿಕೆ ಪಡೆದರೆ ನೀವು ಸುರಕ್ಷಿತವಾಗಿರುತ್ತೀರಿ. ನಿಮ್ಮ ಕುಟುಂಬವೂ ಸುರಕ್ಷಿತವಾಗಿರುತ್ತದೆ.  ಅನಗತ್ಯ ಗೊಂದಲಗಳಿಗೆ ಒಳಗಾಗದೆ ಆದಷ್ಟು ಬೇಗ ಲಸಿಕೆ ಪಡೆದುಕೊಳ್ಳುವುದೊಂದೆ ನಮಗಿರುವ ಏಕೈಕ ಮಾರ್ಗ ಎಂದು ಹೇಳಿದರು.

Articles You Might Like

Share This Article