ಎಲ್ಲೆಡೆ ಕಟ್ಟೆಚ್ಚರ, ಪ್ರತಿಭಟಿಸಿದರೆ ಕಠಿಣ ಕ್ರಮ : ಪ್ರವೀಣ್ ಸೂದ್ ವಾರ್ನಿಂಗ್

Social Share

ಬೆಂಗಳೂರು, ಸೆ.28- ಪಿಎಫ್‍ಐ ಸಂಘಟನೆ ನಿಷೇಧಿಸಿರುವುದನ್ನು ವಿರೋಧಿಸಿ ಯಾರಾದರೂ ರಾಜ್ಯದಲ್ಲಿ ಪ್ರತಿಭಟನೆ ನಡೆಸುವುದು ಹರತಾಳಕ್ಕೆ ಮುಂದಾದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಎಚ್ಚರಿಸಿದ್ದಾರೆ.

ಪಿಎಫ್‍ಐ ಸಂಘಟನೆಯ ಹಲವಾರು ಮುಖಂಡರ ಮನೆಗಳ ಮೇಲೆ ದಾಳಿ ನಡೆದಿದ್ದ ಹಿನ್ನಲೆಯಲ್ಲಿ ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರು. ಸಧ್ಯ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಕಳೆದ 22ರಂದು ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ರಾಜ್ಯಕ್ಕೆ ಆಗಮಿಸಿ ಪಿಎಫ್‍ಐ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ ಹಲವರನ್ನು ಬಂಧಿಸಿತ್ತು. ಇದುವರೆಗೂ ಎನ್‍ಐಎ 7 ಮಂದಿ ಹಾಗೂ ನಾವು 15 ಮಂದಿಯನ್ನು ಬಂಧಿಸಿದ್ದೇವೆ ಎಂದು ಅವರು ವಿವರಣೆ ನೀಡಿದರು.

ಬಂಧಿತರು ನೀಡಿದ ಖಚಿತ ಮಾಹಿತಿ ಮೇರೆಗೆ ಕೆಲವರನ್ನು ಮುಂಜಾಗೃತಾ ಕ್ರಮವಾಗಿ ವಶಕ್ಕೆ ಪಡೆದಿದ್ದೇವೆ. ಬಂಧಿತರ ಬಳಿ ಇದ್ದ ಕೆಲ ವಸ್ತುಗಳನ್ನು ವಶಪಡಿಸಿಕೊಂಡು ವಿಚಾರಣೆಯನ್ನು ತೀವ್ರಗೊಳಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು. ಪಿಎಫ್‍ಐ ಸಂಘಟನೆಯ ಕಾರ್ಯ ವೈಖರಿಯನ್ನು ಪರಿಗಣಿಸಿ ನಿನ್ನೆ ರಾತ್ರಿ ಕೇಂದ್ರ ಸರ್ಕಾರ ಸಂಘಟನೆಯನ್ನು ಐದು ವರ್ಷಗಳ ಕಾಲ ನಿಷೇಧಿಸಿ ಆದೇಶ ಹೊರಡಿಸಿದೆ. ಹೀಗಾಗಿ ನಾವು ಕೇಂದ್ರ ಸರ್ಕಾರದ ಆದೇಶವನ್ನು ಪಾಲಿಸುತ್ತೇವೆ ಎಂದರು.

ನಿಷೇಧಕ್ಕೆ ಒಳಗಾಗಿರುವ ಪಿಎಫ್‍ಐ ಸಂಘಟನೆಯನ್ನು ಬ್ಯಾನ್ ಮಾಡುವ ಕುರಿತಂತೆ ಡಿಜಿಸ್ಟ್ರಿಕ್ ಮ್ಯಾಜಿಸ್ಟ್ರೇಟ್ ಕಮಿಷನರ್ ವ್ಯಾಪ್ತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕರು ವಿವರಿಸಿದರು.

ನಿಷೇಧಕ್ಕೆ ಒಳಗಾಗಿರುವ ಸಂಘಟನೆ ವಿರುದ್ಧ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಯಾರಾದರೂ ಸಂಘಟನೆ ಪರ ಪ್ರತಿಭಟನೆ ನಡೆಸುವುದು ಹರತಾಳ ನಡೆಸಲು ಮುಂದಾದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

Articles You Might Like

Share This Article