ರಾಜ್ಯದಲ್ಲಿ 80ಕ್ಕೂ ಹೆಚ್ಚು PFI ಪದಾಧಿಕಾರಿಗಳು, ಕಾರ್ಯಕರ್ತರು ವಶಕ್ಕೆ

Social Share

ಬೆಂಗಳೂರು,ಸೆ.27- ರಾಜ್ಯದಲ್ಲಿ ಇಂದು ಪೊಲೀಸರು ಪಿಎಫ್‍ಐನ ಮುಖಂಡರು ಹಾಗೂ ಕಾರ್ಯಕರ್ತರ ಮನೆ ಹಾಗೂ ಕಚೇರಿಗಳ ಮೇಲೆ ಮಿಂಚಿನ ದಾಳಿ ನಡೆಸಿದ್ದಾರೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಹಣ ಸಂಗ್ರಹ, ಶಾಂತಿಭಂಗ ಹಾಗೂ ಸಂಚು ರೂಪಿಸಿದ ಆರೋಪದ ಮೇಲೆ ಈ ದಾಳಿ ನಡೆದಿದೆ.

ದಾಳಿಯ ಸಂದರ್ಭದಲ್ಲಿ ಸುಮಾರು 80ಕ್ಕೂ ಹೆಚ್ಚು ಪಿಎಫ್‍ಐನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಂಜೆಗೆ ತಿಳಿಸಿದ್ದಾರೆ. ಕಳೆದ ವಾರ ರಾಷ್ಟ್ರೀಯ ತನಿಖಾ ದಳ ಕರ್ನಾಟಕ ಸೇರಿದಂತೆ ದೇಶಾದ್ಯಂತ ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿತ್ತು. ಇದರ ನಂತರ ಈಗ ರಾಜ್ಯ ಪೊಲೀಸರು ಕಾರ್ಯಾಚರಣೆಗಿಳಿದಿದ್ದು, ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ದೇಶ, ವಿದೇಶಗಳಿಂದ ದೇಣಿಗೆ ಸಂಗ್ರಹಿಸುತ್ತಿರುವುದನ್ನು ಪತ್ತೆ ಮಾಡಿ, ಇತ್ತೀಚೆಗೆ ನಡೆದಂತಹ ಹಲವು ಅಪರಾಧ ಚಟುವಟಿಕೆಗಳ ಬಗ್ಗೆ ಗಮನದಲ್ಲಿರಿಸಿಕೊಂಡು ಪೊಲೀಸರು ಈ ದಾಳಿ ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಳಗಾವಿ, ಹುಬ್ಬಳ್ಳಿ, ಮಂಗಳೂರು, ಕೋಲಾರ ಸೇರಿದಂತೆ ರಾಜ್ಯದ ಉದ್ದಗಲಕ್ಕೂ ನಡೆದಿರುವ ಈ ಕಾರ್ಯಾಚರಣೆ ಭಾರೀ ಕುತೂಹಲ ಕೆರಳಿಸಿದ್ದು, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಇದರ ನೇತೃತ್ವ ವಹಿಸಿದ್ದಾರೆ.

ಆಯಾ ಜಿಲ್ಲಾ ಎಸ್ಪಿಗಳು ಹಾಗೂ ನಗರಗಳ ಪೊಲೀಸ್ ಆಯುಕ್ತರುಗಳು ತಂಡಗಳನ್ನು ರಚಿಸಿ ಯಾವುದೇ ಮುನ್ಸೂಚನೆ ನೀಡದೆ ಗೌಪ್ಯವಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಹಲವು ದಾಖಲೆಗಳನ್ನು ಕೂಡ ವಶಕ್ಕೆ ಪಡೆಯಲಾಗಿದ್ದು, ಕೆಲವೆಡೆ ಸಶಸ್ತ್ರ ಪಡೆಗಳನ್ನು ಕೂಡ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ.

ಪಿಎಫ್‍ಐ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡಿಸುವ ಮತ್ತು ಗಲಭೆಯನ್ನು ಸೃಷ್ಟಿಸಲು ಸಂಚು ರೂಪಿಸುತ್ತಿದೆ ಎಂಬ ಶಂಕೆ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಎನ್‍ಐಎನ ಅಕಾರಿಗಳಿಂದ ಮಾಹಿತಿ ಪಡೆದು ರಾಜ್ಯ ಪೊಲೀಸರು ಈಗ ದಾಳಿ ನಡೆಸುತ್ತಿದ್ದಾರೆ.

Articles You Might Like

Share This Article