ರಾಜ್ಯದಲ್ಲಿ ಇನ್ನೂ 3 ದಿನ ಮುಂದುವರೆಯಲಿದೆ ಮಳೆ

Spread the love

ಬೆಂಗಳೂರು, ಜೂ.27- ನಿನ್ನೆ ಸಂಜೆ ಯಿಂದ ರಾಜ್ಯದ ಒಳನಾಡಿನಲ್ಲಿ ಸಾಧಾರಣ ಮಳೆಯಾಗಿದ್ದು, ಇನ್ನೂ ಮೂರು ದಿನಗಳ ಕಾಲ ಮುಂದುವರೆಯುವ ಮುನ್ಸೂಚನೆಗಳಿವೆ.ರಾಜ್ಯದಲ್ಲಿ ನಿನ್ನೆಯಿಂದ ನೈರುತ್ಯ ಮುಂಗಾರು ಚುರುಕಾಗಿದ್ದು ಚದುರಿದಂತೆ ಮಳೆಯಾಗಿದೆ. ಇದರಿಂದ ರೈತ ಸಮುದಾಯ ನಿಟ್ಟುಸಿರು ಬಿಡುವಂತಾಗಿದೆ‌. ಕರಾವಳಿ ಹಾಗೂ ಮಲೆನಾಡು ಹೊರತುಪಡಿಸಿದರೆ, ಒಳನಾಡಿನಲ್ಲಿ ಇದುವರೆಗೆ ನಿರೀಕ್ಷಿತ ಪ್ರಮಾಣದ ಮಳೆಯಾಗದೇ ರೈತರು ಆತಂಕದಲ್ಲಿದ್ದರು.

ನಿನ್ನೆ ಸಂಜೆಯಿಂದ ರಾಜ್ಯದಲ್ಲಿ ಚದುರಿದಂತೆ ಮಳೆ ಆರಂಭವಾಗಿದ್ದು, ಮಂಗಳವಾರದವರೆಗೂ ಮಳೆ ಮುಂದುವರೆಯುವ ಲಕ್ಷಣಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ಈ ಸಂಜೆಗೆ ತಿಳಿಸಿದರು‌.

ಹವಾ ಮುನ್ಸೂಚನೆ ಪ್ರಕಾರ ಮುಂದಿನ ಎರಡು ದಿನಗಳಲ್ಲಿ ರಾಜ್ಯದ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. ಆದರೆ, ದಕ್ಷಿಣ ಒಳ ನಾಡಿನಲ್ಲಿ ಚದುರಿದಂತೆ ಸಾಧಾರಣ ಮಳೆಯಾಗುವ ಲಕ್ಷಣಗಳಿವೆ ಎಂದು ಅವರು ಹೇಳಿದರು.

ರಾಜಧಾನಿ ಬೆಂಗಳೂರು, ರಾಮನಗರ ಸೇರಿದಂತೆ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ‌. ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಬಲವಾದ ಮೇಲ್ಮೈ ಗಾಳಿ ಬೀಸುತ್ತಿದೆ‌. ಕೆಲವೆಡೆ ಆಗಾಗ್ಗೆ ತುಂತುರು ಇಲ್ಲವೆ ಸಾಧಾರಣ ಮಳೆಯಾಗಬಹುದು ಎಂದರು.

ರಾಯಚೂರು, ಯಾದಗಿರಿ ಜಿಲ್ಲೆಗಳು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿತ್ತನೆ ಮಾಡಿದ್ದ ರೈತರು ಹಾಗೂ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದ ರೈತರಿಗೆ ಮಳೆ ಬಹಳ ಅವಶ್ಯವಿತ್ತು. ಈಗ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗೆ ಅನುಕೂಲವಾಗಿದೆ ಎಂದು ಅವರು ಹೇಳಿದರು.

ರಾಜ್ಯಕ್ಕೆ ಮುಂಗಾರು ಪ್ರವೇಶವಾಗಿದೆ ಎಂದು ಪ್ರಕಟಿಸಿದ ನಂತರ ಮೊದಲನೇ ವಾರದಲ್ಲಿ ಶೇ.88 ರಷ್ಟು ಹೋಬಳಿಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಎರಡನೇ ವಾರದಲ್ಲೂ ಶೇ. 59 ರಷ್ಟು ಹೋಬಳಿಗಳಲ್ಲಿ ಮಳೆ ಕೊರತೆ ಉಂಟಾಗಿತ್ತು. ಮೂರನೇ ವಾರದಲ್ಲೂ ಶೇ.60 ರಷ್ಟು ಹೋಬಳಿಗಳಲ್ಲಿ ಮಳೆ ಕೊರತೆ ಮುಂದುರೆದಿದೆ. ಇದುವರೆಗಿನ ಮೂರು ವಾರಗಳ ಮಳೆ ಪ್ರಮಾಣ ತೃಪ್ತಿದಾಯಕವಾಗಿಲ್ಲ ಎಂದು ಅವರು ತಿಳಿಸಿದರು.

ಜೂ.4 ರಂದು ಮುಂಗಾರು ಮಳೆ ಆರಂಭವಾದರೂ ನಂತರ ರಾಜ್ಯದಲ್ಲಿ ಮುಂಗಾರು ಮಳೆ ದರ್ಬಲವಾಗಿಯೇ ಮುಂದುವರೆದಿದೆ. ಜುಲೈ 10 ರವರೆಗೂ ಮುಂಗಾರು ಪ್ರಬಲಗೊಳ್ಳುವ ಆಶಾದಾಯಕ ಲಕ್ಷಣಗಳು ಕಂಡುಬರುತ್ತಿಲ್ಲ. ಆದರೆ, ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆ ಮುಂದುವರೆಯಲಿದೆ ಎಂದು ಅವರು ಹೇಳಿದರು.

ಮೋಡ ಕವಿದ ವಾತಾವರಣ ಹೆಚ್ಚಾಗಿರುವುದರಿಂದ ಬೆಳೆಗಳಿಗೆ ಕೀಟಗಳ ಬಾಧೆಯೂ ಅಧಿಕವಾಗಿದೆ. ಒಳನಾಡು ಅಷ್ಟೇ ಅಲ್ಲ, ಕರಾವಳಿ, ಕೊಡಗು, ಮಲೆ ನಾಡಿನ ಭಾಗದಗಲ್ಲೂ ಈ ಬಾರಿ ಮುಂಗಾರು ವಾಡಿಕೆ ಪ್ರಮಾಣದಲ್ಲಿ ಆಗಿಲ್ಲ ಎಂದು ಅವರು ತಿಳಿಸಿದರು.

Sri Raghav

Admin