ವೈಮನಸ್ಸು ಮರೆತು ಒಂದಾದ ಕನ್ನಡದ ಸೇನಾನಿಗಳು

Kannada-Karave--1

ಬೆಂಗಳೂರು, ಜೂ.11- ಒಡೆದ ಕನ್ನಡದ ಮನಸ್ಸುಗಳು ಒಂದಾಗಿವೆ. ಕನ್ನಡದ ಏಕತೆಗಾಗಿ ನಾಡಿನ ನೆಲ, ಜಲ, ಸಂಸ್ಕøತಿಗೆ ಧಕ್ಕೆ ಬಂದಾಗ ನಿರಂತರ ಹೋರಾಟ ಮಾಡುತ್ತಾ ಬಂದಿರುವುದು ಕರ್ನಾಟಕ ರಕ್ಷಣಾ ವೇದಿಕೆ. ಅದೇಕೋ ಏನೋ ವೇದಿಕೆಯ ಸೇನಾನಿಗಳಾದ ಟಿ.ಎ.ನಾರಾಯಣಗೌಡ, ಪ್ರವೀಣ್‍ಕುಮಾರ್ ಶೆಟ್ಟಿ ಅವರ ನಡುವೆ ವೈಮನಸ್ಸು ಉಂಟಾಗಿ ಪ್ರತ್ಯೇಕ ಬಣಗಳಾಗಿ ಗುರುತಿಸಿಕೊಂಡರು. ಆದರೂ ಕನ್ನಡಪರ ಹೋರಾಟಗಳನ್ನು ನಿಲ್ಲಿಸಿರಲಿಲ್ಲ.

ರಕ್ಷಣಾ ವೇದಿಕೆಯಡಿಯಲ್ಲಿ ಇಬ್ಬರು ತಮ್ಮ ತಮ್ಮ ನಾಯಕತ್ವದ ಅಡಿಯಲ್ಲಿ ಹೋರಾಟ ಮಾಡುತ್ತಿದ್ದರು. ಎರಡು ಗುಂಪುಗಳಾಗಿದ್ದವು. ಈಗ ನಾಡಿನ ಹಿತಕ್ಕಾಗಿ ಒಂದಾಗಲು ಮುಂದಾಗಿವೆ. ನಿನ್ನೆ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ 52ನೇ ಹುಟ್ಟುಹಬ್ಬ. ಎರಡು ಬಣದ ಬೆಂಬಲಿಗರು ಒಡೆದ ಮನಸ್ಸುಗಳನ್ನು ಒಂದು ಮಾಡಿ ನಾವು ಹೀಗೆ ಪ್ರತ್ಯೇಕವಾಗಿದ್ದರೆ ನಮ್ಮನ್ನು ಒಡೆದು ಆಳುವವರು ಹೆಚ್ಚಾಗುತ್ತಾರೆ. ನಾಡಿನ ಐಕ್ಯತೆ ಧಕ್ಕೆ ತರುತ್ತಾರೆ. ನಾವೆಲ್ಲ ಒಟ್ಟಾಗಿ ಹೋರಾಟ ಮಾಡೋಣ ಎಂದು ಮನವೊಲಿಸಿ ಇಬ್ಬರನ್ನು ಒಂದೇ ವೇದಿಕೆಗೆ ಕರೆತಂದಿದ್ದಾರೆ.

ನಾರಾಯಣಗೌಡರು, ಪ್ರವೀಣ್‍ಶೆಟ್ಟಿ ಕುಳಿತು ಸಮಾಲೋಚನೆ ಮಾಡಿದಾದರೆ. ಪ್ರವೀಣಶೆಟ್ಟಿ ಅವರು ನಾರಾಯಣಗೌಡರಿಗೆ ಹುಟ್ಟುಹಬ್ಬ ಶುಭಾಶಯ ಹೇಳುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ನಾಡಪರ ಹೋರಾಟಗಳಲ್ಲಿ ತಾರ್ಕಿಕ ಅಂತ್ಯ ಕಾಣಬೇಕೆಂದರೆ ಎಲ್ಲಾ ಕನ್ನಡ ಪರ ಸಂಘಟನೆಗಳು ಒಟ್ಟಾಗಿರಬೇಕು ಎಂದು ಮಾತನಾಡಿಕೊಂಡಿದ್ದಾರೆ. ಇದೆಲ್ಲಾ ಒಳ್ಳೆಯ ಬೆಳವಣಿಗೆ. ಕನ್ನಡದ ಶಕ್ತಿ ಸಂಘಟನೆ ಅಲ್ಲವೆ…?

ಕಾವೇರಿ, ಮಹದಾಯಿ, ಮೇಕೆದಾಟು, ಎತ್ತಿನಹೊಳೆ, ಬೆಳಗಾವಿ ಗಡಿ ಸಮಸ್ಯೆ, ಪರಭಾಷಾ ಚಿತ್ರಗಳ ಹಾವಳಿ ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ಕನ್ನಡಪರ ಸಂಘಟನೆಗಳು ಒಗ್ಗೂಡಬೇಕಾಗಿದೆ.  ನಾಡ ಪರ ಧೋರಣೆಗಳಿಗೆ ಪ್ರಭುತ್ವದ ಜತೆ ಕೈ ಜೋಡಿಸಬೇಕು. ನಾಡ ವಿರೋಧಿ ಧೋರಣೆಗಳಿದ್ದರೆ ಪ್ರಭುತ್ವದ ವಿರುದ್ಧ ತಿರುಗಿ ಬೀಳಬೇಕು. ಅದಕ್ಕೆ ಸಮರ್ಥ ಸಂಘಟನೆಗಳು ಅಗತ್ಯ. ಎಲ್ಲರೂ ಒಗ್ಗಟ್ಟಾಗಿರುವುದು ಕೂಡ ಅತ್ಯಗತ್ಯ.

Sri Raghav

Admin