ಇಂದಿನಿಂದ ಶಾಲೆಗಳು ಆರಂಭ, ಮುಂದುವರೆದ ಹಿಜಾಬ್ ಹಠ

Social Share

ಬೆಂಗಳೂರು,ಫೆ.14- ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದಿಂದ ಕಳೆದ ನಾಲ್ಕು ದಿನಗಳಿಂದ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ ಆರಂಭವಾದವು. ಪೊಲೀಸ್ ಬಿಗಿ ಭದ್ರತೆಯಲ್ಲಿ 9 ಮತ್ತು 10ನೆ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ಆಗಮಿಸಿದರು.
ಸಮವಸ್ತ್ರ ಕಡ್ಡಾಯ ಮಾಡಿಯೇ ಶಾಲೆಗಳನ್ನು ಆರಂಭಿಸಬೇಕು. ಯಾವುದೇ ಕಾರಣಕ್ಕೂ ಶಾಲೆಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಶಾಲೆಗಳ ಆವರಣದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಯಿತು.
ಯಾವುದೇ ಧಾರ್ಮಿಕ ಸಂಕೇತಗಳನ್ನು ಧರಿಸಿ ಶಾಲೆಗೆ ಬರುವಂತಿಲ್ಲ ಎಂದು ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿದ್ದ ನಡುವೆಯೂ ಇಂದು ರಾಜ್ಯದ ಹಲವು ಶಾಲೆಗಳಿಗೆ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಬಂದರೆ ಕೆಲವು ಶಿಕ್ಷಕಿಯರೇ ಹಿಜಾಬ್ ಮತ್ತು ಬುರ್ಖಾ ಧರಿಸಿದ್ದುದು ಕಂಡುಬಂತು.
ವಿದ್ಯಾರ್ಥಿಗಳ ಮನವೊಲಿಸಿ ಹಿಜಾಬ್ ತೆಗೆಸಿ ಶಾಲೆಗಳಲ್ಲಿ ಕೂರುವಂತೆ ಮಾಡುವಲ್ಲಿ ಹಲವು ಶಾಲೆಗಳ ಶಿಕ್ಷಕರು ಯಶಸ್ವಿಯಾದರು. ಮತ್ತೆ ಕೆಲವೆಡೆ ಹಿಜಾಬ್ ಧರಿಸಿಯೇ ಕುಳಿತ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನಗಳು ಮುಂದುವರೆದವು. ಹಲವೆಡೆ ಹಿಜಾಬ್ ಹಾಗೂ ಬುರ್ಖಾ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗಳು ಶಾಲೆಯಿಂದ ವಾಪಸ್ ಹೋದ ಘಟನೆಯೂ ನಡೆಯಿತು.
ಯಾವುದೇ ಕಾರಣಕ್ಕೂ ಕೋಮು ಸೌಹಾರ್ದತೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು. ಸಮವಸ್ತ್ರದ ವಿಷಯದಲ್ಲಿ ಏನಾದರೂ ಕಿರಿಕ್ ಆದರೆ ತಕ್ಷಣ ಡಿಡಿಪಿಐ ಗಮನಕ್ಕೆ ತರಬೇಕು ಎಂದು ಸ್ಪಷ್ಟ ಸೂಚನೆ ನೀಡಲಾಗಿತ್ತು. ಎಲ್ಲ ಶಾಲಾ ಆಡಳಿತ ಮಂಡಳಿಯವರು ಪ್ರವೇಶದ್ವಾರದಲ್ಲೇ ನಿಂತು ಹೈಕೋರ್ಟ್ ಆದೇಶ ಪಾಲನೆ ಮಾಡುವಂತೆ ಸಲಹೆ ನೀಡುತ್ತಿದ್ದುದು ಕಂಡುಬಂತು. ಬಹುತೇಕ ಕಡೆ ಎಂದಿನಂತೆ ಶಾಲೆಗಳು ಆರಂಭವಾಗಿ ಪಾಠ-ಪ್ರವಚನಗಳು ನಡೆದವು.
ಕಲಬುರಗಿ, ಕೊಪ್ಪ, ಯಾದಗಿರಿ, ಬೆಳಗಾವಿ, ಶಿವಮೊಗ್ಗ, ಮೈಸೂರು, ಮಂಡ್ಯ ಮುಂತಾದ ಕಡೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಬಂದಿದ್ದರು. ಕಲಬುರಗಿ ಜಿಲ್ಲೆಯ ಜೇವರ್ಗಿ ಪ್ರೌಢಶಾಲೆಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಆಗಮಿಸಿದ್ದರು. ಶಿಕ್ಷಕರು ಮತ್ತು ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಮನವೊಲಿಸಿ ಸಮವಸ್ತ್ರ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಹಿಜಾಬ್ ತೆಗೆದು ಶಾಲೆಗಳಲ್ಲಿ ಕೂರುವಂತೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಬ್ಯಾಗಲ್ಲಿಟ್ಟು ತರಗತಿಗಳಿಗೆ ಹಾಜರಾದರು.
ಕೊಪ್ಪಳದ ಮೌಲಾನಾ ಆಜಾದ್ ಕಾಲೇಜಿನಲ್ಲಿ ಶಿಕ್ಷಕಿಯರೇ ಹಿಜಾಬ್ ಧರಿಸಿ ಶಾಲೆಗೆ ಆಗಮಿಸಿದ್ದರು. ಇಲ್ಲೂ ಹಲವು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದು ಕಂಡುಬಂತು. ಅಧಿಕಾರಿಗಳು, ಶಾಲಾ ಆಡಳಿತ ಮಂಡಳಿಯವರು ವಿದ್ಯಾರ್ಥಿಗಳ ಮನವೊಲಿಸುವಲ್ಲಿ ಯಶಸ್ವಿಯಾದರು.
ದೇವನಹಳ್ಳಿಯಲ್ಲಿ ಎಂದಿನಂತೆ ಮಕ್ಕಳು ಸಮವಸ್ತ್ರ ಧರಿಸಿ ಶಾಲೆಗಳಿಗೆ ಆಗಮಿಸಿದ್ದು ಕಂಡುಬಂತು. ಮಕ್ಕಳನ್ನು ಹೊರತುಪಡಿಸಿ ಶಾಲಾ ಸುತ್ತಮುತ್ತ ಯಾರೂ ಗುಂಪು ಸೇರದಂತೆ ಕಟ್ಟೆಚ್ಚರ ವಹಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಸ್ಲಿಂ ಹಾಗೂ ವಿವಿಧ ಧಾರ್ಮಿಕ ಮುಖಂಡರ ಸಭೆ ಕರೆದು ಪೊಲೀಸರು ಸಮಾಲೋಚನೆ ನಡೆಸಿದ್ದರು.
ಬೆಳಗಾವಿಯ ಸರ್ದಾರ್ ಸರ್ಕಾರಿ ಹೈಸ್ಕೂಲ್‍ಗೆ ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ಬರುತ್ತಿದ್ದುದನ್ನು ಗಮನಿಸಿದ ಶಾಲಾ ಸಿಬ್ಬಂದಿ ಹಿಜಾಬ್ ತೆಗೆದು ಒಳಗೆ ಹೋಗುವಂತೆ ಮನವಿ ಮಾಡಿಕೊಂಡರು. ವಿದ್ಯಾರ್ಥಿನಿಯರು ಪ್ರವೇಶದ್ವಾರದಲ್ಲೇ ಹಿಜಾಬ್ ತೆಗೆದು ಶಾಲೆಗಳಿಗೆ ಆಗಮಿಸಿ ತರಗತಿಯಲ್ಲಿ ಭಾಗವಹಿಸಿದರು.
ಬೆಳಗಾವಿಯ ಅಂಜುಮನ್ ಶಾಲೆಗೆ ಹಿಜಾಬ್ ಧರಿಸಿಯೇ ವಿದ್ಯಾರ್ಥಿಗಳು ಆಗಮಿಸಿದ್ದು ಕಂಡುಬಂತು. ಶಾಲೆಗಳ ಆವರಣದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಹೊರಗಿನಿಂದ ಬೇರೆ ಯಾರೂ ಶಾಲೆ ಬಳಿ ಬರದಂತೆ ಎಚ್ಚರಿಕೆ ನೀಡಲಾಗಿದೆ. ನಗರದ ಎಲ್ಲ ಶಾಲಾ-ಕಾಲೇಜುಗಳ ಎದುರು ನಿಗಾ ವಹಿಸಲಾಗಿದೆ ಎಂದು ಬೆಳಗಾವಿ ಡಿಸಿಪಿ ರವೀಂದ್ರ ಗಡಾಡಿ ತಿಳಿಸಿದ್ದಾರೆ.
ಬುರ್ಖಾ ಹಾಗೂ ಹಿಜಾಬ್ ತೊಟ್ಟು ಬಂದ ವಿದ್ಯಾರ್ಥಿನಿಯರನ್ನು ಮಂಡ್ಯದ ಹಲವು ಶಾಲೆಗಳಲ್ಲಿ ಸಿಬ್ಬಂದಿ ತಡೆದು ಅವರ ಮನವೊಲಿಸಿದರು. ಹಿಜಾಬ್ ತೆಗೆದ ನಂತರವೇ ಶಾಲೆಯ ಒಳಗೆ ಹೋಗಲು ಅವಕಾಶ ನೀಡಿದರು. ತುಮಕೂರಿನಲ್ಲೂ ಕೂಡ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯಲಿಲ್ಲ. ಎಂದಿನಂತೆ ಪ್ರೌಢಶಾಲೆಗಳು ಆರಂಭವಾದವು. ಶಾಲೆಯ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಮೈಸೂರು ನಗರ ಹಾಗೂ ಜಿಲ್ಲೆಯ ಶಾಲೆಗಳಲ್ಲಿ ಹಿಜಾಬ್ ಮತ್ತು ಬುರ್ಖಾ ಧರಿಸಿಬಂದ ವಿದ್ಯಾರ್ಥಿಗಳು ಶಾಲೆ ಆವರಣದಲ್ಲಿ ಅದನ್ನು ತೆಗೆದು ಶಾಲಾ ಕೊಠಡಿ ಪ್ರವೇಶಿಸಿ ನ್ಯಾಯಾಲಯದ ಕಾನೂನಿನಂತೆ ನಡೆದುಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮೈಸೂರು ನಗರ ಹಾಗೂ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞಾ ಜಾರಿ ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿರುವ ಎಲ್ಲ ಪ್ರೌಢಶಾಲೆಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಜಿಲ್ಲೆಯ ಎಲ್ಲ ಶಾಲೆಗಳಿಗೆ ವಿದ್ಯಾರ್ಥಿಗಳು ಎಂದಿನಂತೆ ಆಗಮಿಸಿದ್ದರು. ಶಿವಮೊಗ್ಗದ ಸರ್ಕಾರಿ ಶಾಲೆಯೊಂದರಲ್ಲಿ ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪೂರ್ವಸಿದ್ಧತಾ ಪರೀಕ್ಷೆ ಬರೆಯದೆ ತೆರಳಿದ್ದು ಕಂಡುಬಂತು.
ರಾಜಧಾನಿ ಬೆಂಗಳೂರಿನ ಶಾಲೆಗಳ ಸುತ್ತಮುತ್ತ ಬಿಗಿ ಪೋಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಎಂದಿನಂತೆ ವಿದ್ಯಾರ್ಥಿಗಳು ಶಾಲೆಗಳಿಗೆ ಆಗಮಿಸಿದ್ದರು. ಪೋಷಕರು ನಿರಾತಂಕವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದುದು ಕಂಡುಬಂತು. ವಿವಾದಕ್ಕೆ ಕಾರಣವಾಗಿದ್ದ ನಗರದ ನಾಗರಬಾವಿಯ ವಿದ್ಯಾಸಾಗರ ಶಾಲೆಯಲ್ಲೂ ಕೂಡ ಇಂದು ಎಂದಿನಂತೆ ತರಗತಿಗಳು ನಡೆದವು. ಹೈಕೋರ್ಟ್ ಮಧ್ಯಂತರ ಆದೇಶ, ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮನವರಿಕೆ ಮಾಡಿದ ಸಿಬ್ಬಂದಿ ವರ್ಗ ಶಾಲೆಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಕೊಡದಂತೆ ಎಚ್ಚರ ವಹಿಸಿದರು.

Articles You Might Like

Share This Article