ಶತಮಾನದ ಸಂತ, ನಡೆದಾಡುವ ದೇವರು ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ

Social Share

ವಿಜಯಪುರ : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಶತಮಾನದ ಸಂತ, ನಾಡು ಕಂಡ ನಡೆದಾಡುವ ದೇವರು ಜ್ಞಾನ‌ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ (82 ) ಅವರು ಸೋಮವಾರ ರಾತ್ರಿ ಲಿಂಗೈಕ್ಯರಾಗಿದ್ದಾರೆ.

ತಮ್ಮ ಪ್ರವಚನದ ಮೂಲಕ ದೇಶ – ವಿದೇಶಗಳಲ್ಲಿ ಆಪಾರ ಸಂಖ್ಯೆಯ ಭಕ್ತರನ್ನು ಹೊಂದಿದ್ದ ಸ್ವಾಮೀಜಿ ಅವರು ಬದುಕಲಿ ಎಂದು ಲಕ್ಷಾಂತರ ಭಕ್ತರ ಪೂಜೆ, ಹೋಮ, ಹವನ, ಯಾವುದೂ ಫಲಿಸಲಿಲ್ಲ. ಕೊನೆ ಕ್ಷಣದ ವರೆಗೂ ಅವರನ್ನು ಉಳಿಸಿಕೊಳ್ಳುವ ವೈದ್ಯರ ಪ್ರಯತ್ನ ಕೈಗೂಡಲಿಲ್ಲ.ಸಂಜೆ 6.15 ಕ್ಕೆ ಸಿದ್ದೇಶ್ವರ ಸ್ವಾಮೀಜಿ ಅಸ್ತಂಗತರಾದರು.

ಮೃತರ ಅಂತ್ಯಕ್ರಿಯೆ ಮಂಗಳವಾರ ಸಂಜೆ ಸರ್ಕಾರಿ ಗೌರವಧಾರಗಳೊಂದಿಗೆ ನಡೆಯಲಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ವಿನಯ್ ಮಹೇಂತೇಶ್ ದಾನಮ್ಮನವರ್ ತಿಳಿಸಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುಹಿತ್ತಿದ್ದ ಸಿದ್ದೇಶ್ವರ ಸ್ವಾಮೀಜಿ ಅವರಿಗೆ ವೈದ್ಯರು ಆಶ್ರಮದಲ್ಲೇ ಚಿಕಿತ್ಸೆ ನೀಡುತ್ತಿದ್ದರು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದೇಶ್ವರ ಸ್ವಾಮೀಜಿ ಚಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಲು ನಿರಾಕರಿಸಿದ್ದರು.

ಜಿಲ್ಲಾಧಿಕಾರಿ ಡಾ. ವಿಜಯ ಮಾಂತೇಶ ದಾನಮನ್ನವರ, ಎಸ್ಪಿ ಎಚ್. ಡಿ.ಆನಂದ್ ಕುಮಾರ್ ಹಾಗೂ ಹಲವು ಮಠಾಧೀಶರು ಆಶ್ರಮದ ಆವರಣದಲ್ಲಿ ಬೀಡು ಬಿಟ್ಟಿದ್ದರು.ಸ್ವಾಮೀಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ವಿಜಯಪುರದ ಜ್ಞಾನಯೋಗಾಶ್ರಮ ಮಠಕ್ಕೆ ಸುತ್ತೂರು ಶ್ರೀಗಳೂ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ದರು.

ಡಿ.31ರಂದು ಭೇಟಿ ನೀಡಿದ್ದ ಸಿಎಂ ಬಸವರಾಜ ಬೊಮ್ಮಾಯಿ ಶ್ರೀಗಳ ದರ್ಶನ ಪಡೆದಿದ್ದರು. ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದ್ದರು. ಶ್ರೀಗಳು ಪ್ರಧಾನಿ ಮೋದಿ ಅವರ ಜತೆ ಫೋನಿನಲ್ಲಿ ಮಾತನಾಡಿಸಿದ್ದರು. ಉನ್ನತ ಚಿಕಿತ್ಸೆ ನೀಡುವುದರ ಬಗ್ಗೆ ಪ್ರಧಾನಿಯವರು ಚರ್ಚಿಸಿದಾಗ ಕೈ ಮುಗಿದು ಧನ್ಯವಾದ ಅರ್ಪಿಸಿದ್ದರು. ಅಲ್ಲದೆ ಗುರುಗಳ ಕಿಡ್ನಿ, ಹೃದಯ, ಶ್ವಾಸಕೋಶ ಪ್ಯಾರಾಮೀಟರ್ಸ್ ಸಾಮಾನ್ಯವಾಗಿದೆ ಎಂಬುದಾಗಿ ಸಿಎಂ ತಿಳಿಸಿದ್ದರು.

ಉತ್ತರ ಕರ್ನಾಟಕದಲ್ಲಿ ನಡೆದಾಡುವ ದೇವರಾಗಿರುವ ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಕಳೆದೆರಡು ದಿನ ಚೇತರಿಕೆ ಕಂಡಿತ್ತು, ಆದರೆ, ಮಂಗಳವಾರ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು.ಶ್ರೀಗಳ ಅಗಲಿಕೆಗೆ ಇಡೀ ರಾಜ್ಯವೇ ದುಖಃದ ಮಡಿಲಲ್ಲಿದೆ. ಮಠದ ಆವರಣದಲ್ಲಿ ಭಕ್ತರ ಆಕ್ರಂದನ ಮುಗಿಲು ಮುಟ್ಟಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಶ್ರೀಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಭಕ್ತರ ಆಕ್ರಂದನ ಮುಗಿಲು ಮುಟ್ಟಿತ್ತು. ಮಠದತ್ತ ಭಕ್ತರು ಧಾವಿಸುತ್ತಿದ್ದು, ಪೊಲೀಸರು ಮಠದ ಸುತ್ತ ಮುತ್ತ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ.

# ವಿಜಯಪುರ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳಿಗೆ
ಜ್ಞಾನಯೋಗಿ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ(82) ಅವರು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ಜನವರಿ 3 ರಂದು ವಿಜಯಪುರ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕನಿಷ್ಠ 10 ಲಕ್ಷ ಮಂದಿ ಶ್ರೀಗಳ ದರ್ಶನಕ್ಕೆ ಬರುವ ನಿರೀಕ್ಷೆಯಿದ್ದು, ಜನವರಿ 3ರ ಮಧ್ಯಾಹ್ನ 3 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 5 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ದರ್ಶನಕ್ಕೆ ಬರುವವರಿಗೆ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಎಲ್ಲವನ್ನೂ ಮಾಡಲಾಗಿದೆ.

# ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ವ್ಯವಸ್ಥೆ
ಪೂಜ್ಯರ ಪಾರ್ಥಿವ ಶರೀರವನ್ನು ಶ್ರೀ ಜ್ಞಾನಯೋಗಾಶ್ರಮದಲ್ಲಿ ಸೋಮವಾರ ರಾತ್ರಿಯಿಂದ ಬೆಳಗ್ಗೆ 4.30ರವರೆಗೆ ಭಕ್ತಾದಿಗಳ ದರ್ಶನಕ್ಕಾಗಿ ಇಡಲಾಗುವುದು. ನಂತರ ಪೂಜ್ಯರ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಶ್ರೀ ಜ್ಞಾನಯೋಗಾಶ್ರಮದಿಂದ ಸೈನಿಕ ಶಾಲೆಯವರೆಗೆ ತರಲಾಗುವುದು.ಭಕ್ತಾದಿಗಳಿಗೆ ಪೂಜ್ಯರ ಅಂತಿಮ ದರ್ಶನವನ್ನು ದ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ನಗರದ ಸೈನಿಕ ಶಾಲೆ ಆವರಣದಲ್ಲಿ ಏರ್ಪಡಿಸಲಾಗಿದೆ. ಅಂತಿಮ ದರ್ಶನಕ್ಕಾಗಿ ಸೋಲಾಪುರ, ಕಲಬುರಗಿ, ಸಿಂದಗಿ, ಬಾಗಲಕೋಟೆ, ಜಮಖಂಡಿ, ಅಥಣಿಯಿಂದ ಆಗಮಿಸುವ ಭಕ್ತಾದಿಗಳು ನೇರವಾಗಿ ವಿಜಯಪುರ ನಗರದ ರಿಂಗ್ ರೋಡ್ ಮೂಲಕ (ಇಟಗಿ ಪೆಟ್ರೋಲ್ ಪಂಪ್) ಜಿಲ್ಲಾ ಆಸ್ಪತ್ರೆಯ ಹಿಂಭಾಗದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಸ್ಥಳದಲ್ಲಿಯೇ ಭಕ್ತಾದಿಗಳಿಗೆ ಪ್ರಸಾದ, ನೀರು, ಇನ್ನಿತರೆ ವ್ಯವಸ್ಥೆ ಮಾಡಲಾಗಿದೆ.

ಭಕ್ತಾದಿಗಳು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸೈನಿಕ ಶಾಲೆಯ ಎದುರುಗಡೆ ಇರುವ ನೇತಾಜಿ ಸುಭಾಷ ಚಂದ್ರ ಬೋಸ್, ರಸ್ತೆಯ ಮೂಲಕ ನಡೆದುಕೊಂಡು ಸೈನಿಕ ಶಾಲೆಯ ಮುಖ್ಯ ದ್ವಾರದ ಮೂಲಕ ಪ್ರವೇಶಿಸಬೇಕು. ದರ್ಶನದ ನಂತರ ಸೈನಿಕ ಶಾಲೆಯ 2ನೇ ಗೇಟ್ ಮೂಲಕ (ಲೆಫ್ಟಿನೆಂಟ್ ಕರ್ನಲ್ ಅಜಿತ್ ಭಂಡಾರಕರ ದ್ವಾರ) ಹೊರಗಡೆ ಬಂದು ತಮ್ಮ ವಾಹನ ಮೂಲಕ ವಾಪಸ ತೆರಳಬೇಕು. ಸೈನಿಕ ಶಾಲೆಯಲ್ಲಿ ಮಧ್ಯಾಹ್ನ 3.00 ಗಂಟೆಯಿಂದ ಸಾಯಂಕಾಲ 4.00 ಗಂಟೆಯ ಅವಧಿಯಲ್ಲಿ ಸರ್ಕಾರದ ವತಿಯಿಂದ ಸಕಲ ಗೌರವಗಳೊಂದಿಗೆ ಪೂಜ್ಯರಿಗೆ ಅಂತಿಮ ನಮನ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸಂಜೆ 4.00 ಗಂಟೆಯಿಂದ ಪುನಃ ತೆರೆದ ವಾಹನದಲ್ಲಿ ಪೂಜ್ಯರ ಪಾರ್ಥೀವ ಶರೀರವನ್ನು ಸೈನಿಕ ಶಾಲೆಯಿಂದ ಶ್ರೀ ಜ್ಞಾನಯೋಗಾಶ್ರಮಕ್ಕೆ ತರಲಾಗುವುದು. (ಮಾರ್ಗ: ಗೋದಾವರಿ-ಶ್ರೀ ಶಂಕರಲಿಂಗ ದೇವಸ್ಥಾನ-ಶಿವಾಜಿವೃತ್ತ – ಗಾಂಧಿವೃತ್ತ- ಶ್ರೀ ಸಿದ್ದೇಶ್ವರ ದೇವಸ್ಥಾನ-ಬಿ.ಎಲ್.ಡಿ.ಇ. ಆಸ್ಪತ್ರೆ-ಶ್ರೀ ಜ್ಞಾನಯೋಗಾಶ್ರಮ), ಭಕ್ತಾದಿಗಳು ರಸ್ತೆಯ ಇಕ್ಕೆಲಗಳಲ್ಲಿ ನಿಂತುಕೊಂಡು ಪೂಜ್ಯರ ಪಾರ್ಥೀವ ಶರೀರಕ್ಕೆ ಅಂತಿಮ ನಮನವನ್ನು ಸಲ್ಲಿಸಬಹುದಾಗಿದೆ. ಪೂಜ್ಯರ ಅಂತಿಮ ಕ್ರಿಯೆಯನ್ನು ಸಂಜೆ 5.00 ಗಂಟೆಗೆ ಶ್ರೀ ಜ್ಞಾನಯೋಗಾಶ್ರಮದ ಆವರಣದಲ್ಲಿ ವಿಧಿವಿಧಾನಗಳಂತೆ ನೇರವೇರಿಸಲಾಗುವುದು.

# ಗಣ್ಯರ ಸಂತಾಪ :
ಜ್ಞಾನಯೋಗಿ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ(82) ಅವರ ನಿಧನಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿದ್ದಾರಮಯ್ಯ, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.ಶ್ರೀಗಳ ಅಗಲಿಕೆ ನಾಡಿಗೆ ತುಂಬಲಾರದ ನಷ್ಟವಾಗಿದೆ. ಶ್ರೀಗಳ ಆತ್ಮಕ್ಕೆ ಸದ್ಗತಿ ಕೋರುತ್ತೇನೆ. ನಾಡಿನಾದ್ಯಂತ ಇರುವ ಶ್ರೀಗಳ ಭಕ್ತ ಸಮೂಹಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಸುದ್ದಿ ತಿಳಿದು ಅತ್ಯಂತ ದುಃಖವಾಗಿದೆ. ತಮ್ಮ ಪ್ರವಚನಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶ್ರೀಗಳ ಸೇವೆ ಅಮೋಘ ಹಾಗೂ ಅನನ್ಯವಾದುದು ಎಂದು ಬಸವರಾಜ್ ಬೊಮ್ಮಾಯಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ತಮ್ಮ ಪ್ರವಚನಗಳ‌ ಮೂಲಕ ಕೋಟ್ಯಂತರ ಜನರಿಗೆ ಜ್ಞಾನದಾಸೋಹ ನೀಡಿದ ನಡೆದಾಡುವ ದೇವರು, ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ವಿಧಿವಶರಾದ ಸುದ್ದಿ ಅತ್ಯಂತ ದುಃಖವನ್ನುಂಟು ಮಾಡಿದೆ. ಪೂಜ್ಯರ ಆತ್ಮಕ್ಕೆ ಸದ್ಗತಿ ಕೋರುತ್ತಾ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಕ್ತರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಬೆಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಶ್ರೀಗಳ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ. ನಡೆದಾಡುವ ದೇವರು, ತಮ್ಮ ಅತ್ಯಮೂಲ್ಯ ಪ್ರವಚನಗಳ ಮೂಲಕ ನಾಡಿನ ಜನತೆಗೆ ಜ್ಞಾನ ದಾಸೋಹ ನೀಡುತ್ತಾ, ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಣೆ ನೀಡುತ್ತಿದ್ದ ವಿಜಯಪುರದ ಜ್ಞಾನ ಯೋಗಾಶ್ರಮದ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಶಿವಸಾಯುಜ್ಯವನ್ನು ಪಡೆದಿದ್ದಾರೆ. ಭಗವಂತನು ಆ ಮಹಾನ್ ಚೇತನಕ್ಕೆ ಸದ್ಗತಿ ಕರುಣಿಸಲೆಂದು ಪ್ರಾರ್ಥಿಸುತ್ತೇನೆ ಎಂದು ಕಟೀಲ್ ಟ್ವೀಟ್ ಮಾಡಿದ್ದಾರೆ.ಮಾಜಿ ಸಿಎಂ ಸಿದ್ದರಾಮಯ್ಯ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ದಿವ್ಯ ಆತ್ಮಕ್ಕೆ ಚಿರಶಾಂತಿ ಸಿಗಲಿ.

ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಮಠದ ಅನುಯಾಯಿಗಳಿಗೆ ಮತ್ತು ಭಕ್ತವೃಂದಕ್ಕೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಧಾರ್ಮಿಕ ಪ್ರವಚನದ ಮೂಲಕ ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದ ದಾರ್ಶನಿಕ ಗುರುವಿನ ಅಗಲಿಕೆ ವೈಯಕ್ತಿಕವಾಗಿ ಮತ್ತು ನಾಡಿಗೆ ತುಂಬಿಬಾರದ ನಷ್ಟ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮೀ ಶ್ರೀಗಳ ಅಗಲಿಕೆಗೆ ನೋವು ವ್ಯಕ್ತಪಡಿಸಿದ್ದಾರೆ. ಸಮಾಜಕ್ಕೆ ಚಿಕಿತ್ಸರಾಗಿದ್ದ ಪೂಜ್ಯರು, ತಮ್ಮ ಪರಿಪೂರ್ಣ ಸಾರ್ಥಕ ಬದುಕಿನಿಂದಲೇ ನಮ್ಮನ್ನು ಪಾವನಗೊಳಿಸಿದವರು. ತಮ್ಮ ಪ್ರತಿ ಹೆಜ್ಜೆಯಲ್ಲೂ ಜ್ಞಾನದ ಬೆಳಕು ಮೂಡಿಸುತ್ತಿದ್ದ ಅವರ ನಿರ್ಗಮನ ಬಹುದೊಡ್ಡ ನಷ್ಟ. ಪೂಜ್ಯರು ಬಿಟ್ಟುಹೋಗಿರುವ ಅರಿವು ನಮಗೆಲ್ಲ ದಿವ್ಯಬೆಳಕು. ಆ ಬೆಳಕಿನಡಿಯಲ್ಲಿ ಮುನ್ನಡೆಯೋಣ ಎನ್ನುವ ಆಶಯ ನನ್ನದಾಗಿದೆ. ನಮ್ಮ ಪಾಲಿಗೆ ನಡೆದಾಡುವ ಬೆಳಕು, ನಡೆದಾಡುವ ಅರಿವು, ನಡೆದಾಡುವ ದೇವರೇ ಆಗಿದ್ದ ಜ್ಞಾನ ಯೋಗಾಶ್ರಮದ ಜ್ಞಾನಯೋಗಿ ಪರಮಪೂಜ್ಯ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಶಿವೈಕ್ಯರಾಗಿದ್ದಾರೆ ಎಂದು ಹೆಚ್‌ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಇನ್ನು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ನಡೆದಾಡುವ ದೇವರೆಂದೇ ಕರೆಯಲ್ಪಡುವ ಜ್ಞಾನ ಯೋಗಾಶ್ರಮದ ಜ್ಞಾನಯೋಗಿ ಶ್ರೀ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಇಹಲೋಕ ತ್ಯಜಿಸಿದ್ದಾರೆ. ಸ್ವಾಮೀಜಿಗಳು ನೀಡಿರ ವ ಜ್ಞಾನದ ಬೆಳಕು, ತೋರಿರುವ ಹಾದಿ ನಮಗೆಲ್ಲಾ ಸಾರ್ಥಕ ಬದುಕು ನಡೆಸಲು ಪ್ರೇರಕ ಶಕ್ತಿಯಾಗಿದೆ. ಶ್ರೀಗಳ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಶಿಕ್ಷಣ ಸಚಿವ ಬಿಸಿ ನಾಗೇಶ್ ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸಂತ, ಜ್ಞಾನಯೋಗಿ, ಸಮಾಜದ ಹಿತ ಚಿಂತಕರು, ಖ್ಯಾತ ಪ್ರವಚನಕಾರರಾಗಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಪೂಜ್ಯಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಉತ್ತಮ ಸಮಾಜ ನಿರ್ಮಾಣ ಮತ್ತು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸ್ವಾಮೀಜಿಯವರು ನೀಡುತ್ತಿದ್ದ ಸಂದೇಶಗಳು ಸದಾ ದಾರಿ ದೀಪವಾಗಿರುತ್ತವೆ ಎಂದು ಬಿಸಿ ನಾಗೇಶ್ ಟ್ವೀಟ್ ಮಾಡಿದ್ದಾರೆ.

#KarnatakaSeer, #SiddeshwaraSwamiji, #passesaway,

Articles You Might Like

Share This Article