ನವದೆಹಲಿ, ಜ.3- ಕೋವಿಡ್ ಮೂರನೆ ಅಲೆಯ ಊಹಾಪೋಹಗಳ ನಡುವೆ ಕರ್ನಾಟಕದಲ್ಲಿ ಸೋಂಕಿನ ಪ್ರಮಾಣ ಶೇ.241ಪಟ್ಟು ಏರಿಕೆಯಾಗಿದ್ದು, ಮಹಾರಾಷ್ಟ್ರ, ನವದೆಹಲಿ, ಗುಜರಾತ್ ಸೇರಿ ಐದು ರಾಜ್ಯಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ಕೇಂದ್ರ ಸರ್ಕಾರ ಮೇಲಿಂದ ಮೇಲೆ ರಾಜ್ಯ ಸರ್ಕಾರಗಳಿಗೆ ಪತ್ರಗಳನ್ನು ಬರೆದು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಲೇ ಇದೆ. ಅದರ ನಡುವೆಯೂ ಸೋಂಕು ಅಂಕೆ ಮೀರಿ ಏರಿಕೆಯಾಗುತ್ತಿದೆ. ಆತಂಕಕಾರಿ ಬೆಳವಣಿಗೆಯಲ್ಲಿ ಮಹಾರಾಷ್ಟ್ರ ದಲ್ಲಿ ಕೋವಿಡ್ ಸೋಂಕಿತರಿಗೆ ಆಮ್ಲಜನಕ ಪೂರೈಕೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ದೇಶದ ಎಲ್ಲಾ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲಿ ಸೋಂಕು ವೇಗವಾಗಿ ಹರಡಲಾರಂಭಿಸಿದೆ. ಭಾನುವಾರ 1,187 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 10,292ರಷ್ಟಾಗಿವೆ. ಬೆಂಗಳೂರು ನಗರವೊಂದರಲ್ಲೇ 8671 ದಾಖಲಾಗಿವೆ. ಹೊಸದಾಗಿ ಆರು ಸಾವುಗಳಾಗಿದ್ದು, ಅದರಲ್ಲಿ ಬೆಂಗಳೂರು ನಗರದಲ್ಲಿ ಮೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ತುಮಕೂರಿನಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ.
ಹೊಸ ಸೋಂಕಿನ ಪ್ರಕರಣಗಳ ಪೈಕಿ ಬೆಂಗಳೂರು ನಗರದಲ್ಲಿ 923, ದಕ್ಷಿಣ ಕನ್ನಡ ದಲ್ಲಿ 63, ಉಡುಪಿಯಲ್ಲಿ 54, ಮೈಸೂರಿ ನಲ್ಲಿ 20, ಬೆಳಗಾವಿಯಲ್ಲಿ 12, ತುಮಕೂರು, ಕೊಡಗು, ಮಂಡ್ಯ ಜಿಲ್ಲೆಯಲ್ಲಿ ತಲಾ 10 ಪ್ರಕರಣಗಳು ವರದಿಯಾಗಿವೆ. ಹಲವು ತಿಂಗಳಿಂದಲೂ ಶೇ.1ರ ಒಳಗೆ ನಿಯಂತ್ರಣ ದಲ್ಲಿದ್ದ ಸೋಂಕು, ನಿನ್ನೆ ಶೇ.1.08ರಷ್ಟಾಗಿದೆ. ಸಾವಿನ ಪ್ರಮಾಣವೂ ಶೇ.0.5ರಷ್ಟಾಗಿದೆ.
ಎರಡನೇ ಅಲೆಯಲ್ಲಿ ಭಾರೀ ಸಾವು-ನೋವು ಅನುಭವಿಸಿದ್ದ ಮಹಾರಾಷ್ಟ್ರದಲ್ಲಿ ಭಾನುವಾರ 11,877 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ. ಇದು ಶನಿವಾರಕ್ಕಿಂತಲೂ ಶೇ.29ರಷ್ಟು ಹೆಚ್ಚಿನದಾಗಿದ್ದು, ಒಂಬತ್ತು ಮಂದಿ ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 42,024ಕ್ಕೆ ಏರಿಕೆಯಾಗಿತ್ತು.
ಮುಂಬೈನಲ್ಲಿ 29,819 ಪ್ರಕರಣಗಳಿದ್ದವು. ಡಿಸೆಂಬರ್ 20ರಲ್ಲಿ 2,061ರಷ್ಟಿದ್ದ ಸಕ್ರಿಯ ಪ್ರಕರಣಗಳು ಏಕಾಏಕಿ ಶೇ.1300ಕ್ಕೆ ಏರಿಕೆ ಯಾಗಿವೆ. ಭಾನುವಾರ ಮುಂಬೈನಲ್ಲಿ 503 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ, ಅವರಲ್ಲಿ 56 ಮಂದಿ ಆಮ್ಲಜನಕದ ನೆರವಿನಲ್ಲಿ ಉಸಿರಾಡುತ್ತಿದ್ದಾರೆ. ಶನಿವಾರ 389, ಶುಕ್ರವಾರ 497 ಮಂದಿ ಆಸ್ಪತ್ರೆ ದಾಖಲಾಗಿದ್ದರು.
ವಾಣಿಜ್ಯ ನಗರಿ ಮುಂಬೈನಲ್ಲಿ ಭಾನುವಾರ ಒಂದೇ ದಿನ 7,792 ಸೋಂಕಿನ ಪ್ರಕರಣ ಗಳು ಪತ್ತೆಯಾಗಿವೆ. ಶನಿವಾರ 6186 ಪ್ರಕರಣಗಳು ದಾಖಲಾಗಿದ್ದವು, ಒಂದೇ ದಿನ ಶೇ.26ರಷ್ಟು ಹೆಚ್ಚಾಗಿವೆ. ಓಮಿಕ್ರಾನ್ ಪ್ರಕರಣಗಳಲ್ಲೂ ಮಹಾರಾಷ್ಟ್ರ ಮುಂದಿದೆ. 50 ಹೊಸ ಪ್ರಕರಣಗಳೊಂದಿಗೆ ಒಟ್ಟು 510 ಮಂದಿ ರೂಪಾಂತರಿ ಸೋಂಕಿಗೆ ಸಿಲುಕಿದ್ದಾರೆ. ಪುಣೆಯಲ್ಲೂ 36 ಪ್ರಕರಣಗಳು ದಾಖಲಾಗಿವೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದೆರಡು ದಿನಗಳಿಂದ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಕೋವಿಡ್ ಎರಡನೇ ಅಲೆಯ ನಡುವೆ ಆಗಸ್ಟ್ ಮತ್ತು ನವೆಂಬರ್‍ನಲ್ಲಿ ದಾಖಲಾಗಿದ್ದ ಪ್ರಮಾಣದಷ್ಟೆ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ.
ಶನಿವಾರ 3,194 ಪ್ರಕರಣಗಳು ಕಾಣಿಸಿಕೊಂಡಿದ್ದು, ಸೋಂಕಿನ ಪ್ರಮಾಣ ಶೇ.4.59ರಷ್ಟಿದೆ. ಜನವರಿ 1 ವರೆಗೆ 5,910 ಮಂದಿ ಸೋಂಕಿತರಿ ದ್ದರು. ಕಳೆದ ಮೇ 20ರ ನಂತರ ದಾಖಲಾದ ಅತಿ ಹೆಚ್ಚು ಪ್ರಕರಣಗಳು ಭಾನುವಾರ ದಾಖಲಾಗಿವೆ. ಇದು ಹಿಂದಿನ ದಿನಕ್ಕಿಂತಲೂ ಶೇ.17ರಷ್ಟು ಹೆಚ್ಚು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಗುಜರಾತ್‍ನಲ್ಲಿ ಭಾನುವಾರ 968 ಹೊಸ ಪ್ರಕರಣಗಳು ವರದಿಯಾಗಿವೆ, ಈ ಮೂಲಕ ಒಟ್ಟು ಸೋಂಕಿನ ಸಂಖ್ಯೆ 8.33,769ರಷ್ಟಾಗಿದೆ. ವಲ್ಸಾದ್ ಜಿಲ್ಲೆಯಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 10,120ರಷ್ಟಾಗಿದೆ. ಶನಿವಾರ 1069 ಪ್ರಕರಣಗಳು ದಾಖಲಾಗುವ ಮೂಲಕ ಕಳೆದ ಏಳು ತಿಂಗಳ ನಂತರ ಹೆಚ್ಚು ಪ್ರಕರಣಗಳನ್ನು ಗುಜರಾತ್ ಕಂಡಿದೆ.
ದೇಶದಲ್ಲಿ ಹಂತ ಹಂತವಾಗಿ ಸೋಂಕಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ಫೆಬ್ರವರಿ ವೇಳೆಗೆ ಮೂರನೇ ಅಲೆ ಹೆಚ್ಚಾಗಬಹುದು ಎಂಬ ವದ್ಧಂತಿಗಳಿದ್ದವು, ಈಗಾಗಲೇ ಸೋಂಕು ಹೆಚ್ಚುತ್ತಿರುವುದನ್ನು ನೋಡಿದರೆ ಜನವರಿ ಮಧ್ಯ ಭಾಗದಲ್ಲೇ ಅಲೆ ಕಾಣಿಸಿಕೊಳ್ಳುವ ಅಂದಾಜಿದೆ.
