ಬೆಂಗಳೂರು,ಆ.29- ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅಧಿಕಾರ ಅವಧಿ ಮುಗಿದಿರುವುದರಿಂದ ಪಕ್ಷದ ಹೊಸ ಸಾರಥಿಯಾಗಲಿದ್ದಾರೆ ಎಂಬ ಕುತೂಹಲ ಮೂಡಿಸಿದೆ. ಸಾಮಾನ್ಯವಾಗಿ ಅಧ್ಯಕ್ಷರ ಅವಧಿ ಮೂರು ವರ್ಷ ಮುಗಿದ ಬಳಿಕ ಹೆಚ್ಚು ಸಮಯ ಮುಂದುವರೆಸುವ ಸಂಪ್ರದಾಯ ಬಿಜೆಪಿಯಲ್ಲಿಲ್ಲ. ಹೆಚ್ಚೆಂದರೆ ಹೊಸದಾಗಿ ನೇಮಕವಾಗುವ ಪ್ರಕ್ರಿಯೆಗಳು ನಡೆಯುವವರೆಗೂ ಮಾತ್ರ ಮುಂದುವರೆಯಬಹುದು.
ಭಾನುವಾರಕ್ಕೆ ಕಟೀಲ್ ಅವಧಿ ಮುಗಿದಿರುವುದರಿಂದ ಬಿಜೆಪಿಯ ಹೊಸ ಸಾರಥಿಯ ಶೋಧ ಕೇಸರಿ ಪಾಳೆಯದಲ್ಲಿ ಆರಂಭವಾಗಿದೆ. ಈ ಹಿಂದೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಇಂಧನ ಸಚಿವ ಸುನೀಲ್‍ಕುಮಾರ್, ಮಾಜಿ ಸಚಿವ ಅರವಿಂದ ಲಿಂಬಾವಳಿ ಸೇರಿದಂತೆ ಮತ್ತಿತರ ಹೆಸರುಗಳು ಕೇಳಿಬಂದಿದ್ದವು.
ಇದೀಗ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ಪ್ರಮುಖ ತೀರ್ಮಾನಗಳನ್ನು ನಿರ್ಧರಿಸಿರುವ ಅತ್ಯುನ್ನತ ಸಂಸದೀಯ ಮಂಡಳಿ ಹಾಗೂ ಚುನಾವಣ ಸಮಿತಿ ಸದಸ್ಯರಾಗಿ ನೇಮಕವಾಗಿರುವುದರಿಂದ ಇಡೀ ಚಿತ್ರಣವೇ ಬದಲಾಗಿದೆ.
ರಾಜ್ಯಾಧ್ಯಕ್ಷರನ್ನು ನೇಮಕ ಮಾಡುವಾಗ ವರಿಷ್ಠರು ಯಡಿ ಯೂರಪ್ಪ ನವರ ಅಭಿಪ್ರಾಯವನ್ನು ಪಡೆದೇ ಮುಂದಡಿ ಇಡಬೇಕಾಗಿರು ವುದರಿಂದ ಹೊಸ ಸಾರಥಿ ಯಾರೆಂಬುದು ನಿಗೂಢವಾಗಿಯೆ ಉಳಿದಿದೆ.
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರ ಅನುಯಾಯಿಗಳು ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ನಡೆಯುವವರೆಗೆ ನಳೀನ್‍ಕುಮಾರ್ ಕಟೀಲ್ ಅಧಿಕಾರ ಅವಧಿ ವಿಸ್ತರಣೆಗೆ ಒತ್ತಾಯಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಳಿನ್ ಕುಮಾರ್ ಕಟೀಲು ಅವರು 21 ಬಾರಿ ರಾಜ್ಯ ಪ್ರವಾಸ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಚುನಾವಣಾ ವರ್ಷದಲ್ಲಿ ಅವರನ್ನು ಏಕೆ ಬದಲಾಯಿಸಬೇಕು? ಅವರು ಉತ್ತಮ ಕೆಲಸ ನಿರ್ವಹಿಸುತ್ತಿದ್ದು, ಅರನ್ನು ಪಕ್ಷದ ಅಧ್ಯಕ್ಷರನ್ನಾಗಿ ಉಳಿಸಿಕೊಳ್ಳಬೇಕು. ಮೂರು ಬ್ಯಾಕ್ ಟು ಬ್ಯಾಕ್ ಗೆಲುವಿನೊಂದಿಗೆ ಅವರನ್ನು ಹ್ಯಾಟ್ರಿಕ್ ಹೀರೋ ಎಂದು ಪ್ರಶಂಸಿಸಬೇಕು ಎಂದು ಬಿಜೆಪಿ ನಾಯಕರೊಬ್ಬರು.
ಇದೇ ವೇಳೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ, ಪರಿಶಿಷ್ಟ ಜಾತಿಯ ಅರವಿಂದ ಲಿಂಬಾವಳಿ, ಒಕ್ಕಲಿಗ ನಾಯಕ ಸಿ.ಟಿ.ರವಿ ಹೆಸರು ಕೇಳಿಬರುತ್ತಿದೆ. ಮೊದಲೆರಡು ಹೆಸರು ಯಡಿಯೂರಪ್ಪ ಗುಂಪಿಗೆ ಸ್ವೀಕಾರಾರ್ಹ ಎಂದು ಹೇಳಲಾಗಿದ್ದರೂ, ಸಿ.ಟಿರವಿ ಅವರ ಉಮೇದುವಾರಿಕೆಯನ್ನು ಸಂತೋಷ್ ಪಾಳಯ ತಳ್ಳಿ ಹಾಕುತ್ತಿದೆ.
ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಾಗ, ಲಿಂಗಾಯತರಾದ ತಮ್ಮ ಆಪ್ತ ಬಸವರಾಜ ಬೊಮ್ಮಾಯಿ ಅವರಿಗೆ ಸಿಎಂ ಸ್ಥಾನ ನೀಡುವಂತೆ ಒತ್ತಾಯಿಸಿದ್ದರು. ಹೀಗಾಗಿ ಪಕ್ಷದ ಅಧ್ಯಕ್ಷರ ನೇಮಕದಲ್ಲೂ ಯಡಿಯೂರಪ್ಪ ಅವರ ಮಾತು ಫೈನಲ್ ಎಂದು ಪಕ್ಷದೊಳಗಿನ ಕೆಲವರು ಹೇಳುತ್ತಿದ್ದಾರೆ. ಒಂದು ವೇಳೆ ಯಡಿಯೂರಪ್ಪ ಹೇಳಿದ ಹಾಗೆ ಹೈಕಮಾಂಡ್ ನಡೆದರೇ ಪಕ್ಷದಲ್ಲಿ ಅಗ್ರಗಣ್ಯವಾಗಿ ಬಿಎಸ್ ವೈ ಹೊರಹೊಮ್ಮುತ್ತಾರೆ.
ಮುಂಬರುವ ಚುನಾವಣೆಯಲ್ಲಿ ಹೆಚ್ಚಿನ ಮತಗಳು ಬೇಕೆಂದು ಹೈಕಮಾಂಡ್ ಬಯಸಿದರೇ ಅವರಿಗೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಬಿಎಸ್ ವೈ ಬೆಂಬಲಿಗರ ಅಭಿಪ್ರಾಯವಾಗಿದೆ. ಗಣೇಶ ಚತುರ್ಥಿ ನಂತರ ಪಕ್ಷದ ಅಧ್ಯಕ್ಷ ಹುದ್ದೆ ಗೆ ನೂತನ ಹೆಸರು ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೇನು ವಿಧಾನಸಭೆ ಚುನಾವಣೆಗೆ ಎಂಟು ತಿಂಗಳು ಇದೆ. ಇಂತಹ ಸಂದರ್ಭದಲ್ಲಿ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷರ ಬದಲಾವಣೆ ಆದರೆ ಅದು ಚುನಾವಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಆದರೆ ಹೊಸ ರಾಜ್ಯಾಧ್ಯಕ್ಷರಿಗೆ ಪಕ್ಷದ ವಿವಿಧ ಘಟಕಗಳ ಪೂರ್ಣ ಹಿಡಿತವನ್ನು ತೆಗೆದುಕೊಳ್ಳಲು ಸಮಯಾವಕಾಶವೂ ಬೇಕಾಗುತ್ತದೆ.
ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷದ ಕಾರ್ಯಕರ್ತರು ಹಾಗೂ ಕೇಡರ್‍ಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಾಲಾವಕಾಶ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕಟೀಲ್ ಅವರನ್ನೇ ಮುಂದುವರಿಸುವ ಸಾಧ್ಯತೆಯೂ ಇದೆ. ಆದರೆ ಅಂತಿಮ ನಿರ್ಧಾರ ಹೈಕಮಾಂಡ್ ಅಂಗಳದಲ್ಲಿದೆ.