ಬೆಂಗಳೂರು,ಮಾ.1-ಯುದ್ಧಪೀಡಿತ ಉಕ್ರೇನ್‍ನಲ್ಲಿ ರಷ್ಯಾ ನಡೆಸಿದ ಕ್ಷಿಪಣಿ ದಾಳಿಗೆ ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ.ಹಾವೇರಿ ಜಿಲ್ಲೆ ರಾಣಿಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದ ನವೀನ್ ಶೇಖರಪ್ಪ ಎಂಬ ನತದೃಷ್ಟ ವಿದ್ಯಾರ್ಥಿಯೇ ರಷ್ಯಾದ ಕ್ಷಿಪಣಿ ದಾಳಿಗೆ ಆಹುತಿಯಾಗಿದ್ದಾನೆ.
ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಇದನ್ನು ಅಕೃತಗೊಳಿಸಿದ್ದು, ಉಕ್ರೇನ್‍ನ ಕರ್ಕೀವ್‍ನಲ್ಲಿ ರಷ್ಯಾದ ಕ್ಷಿಪಣಿಗೆ ಕರ್ನಾಟಕದ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ ಎಂದು ದೃಢಪಡಿಸಿದೆ. ಆದರೆ ಆತನ ಹೆಸರನ್ನು ಬಹಿರಂಗಪಡಿಸಿಲ್ಲ.
ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಹರೀಂದಾವತ್ ಟ್ವೀಟ್ ಮಾಡಿದ್ದು, ಸಾವನ್ನಪ್ಪಿರುವುದನ್ನು ಖಚಿತಪಡಿಸಿದರಾದರೂ ಹೆಸರು ಮತ್ತು ವಿವರವನ್ನು ಬಹಿರಂಗಪಡಿಸಿಲ್ಲ. ಕ್ಷಿಪಣಿ ದಾಳಿಗೆ ನವೀನ್ ಶೇಖರಪ್ಪ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ಕನ್ನಡಿಗ ವಿದ್ಯಾರ್ಥಿಗಳು ಖಚಿತಪಡಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ ನವೀನ್ ಶೇಖರಪ್ಪ ತಾಯ್ನಾಡಿಗೆ ಮರಳಲು ಪ್ರಯತ್ನಿಸಿದ್ದರು. ಆದರೆ ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಸಂಘರ್ಷ ಏರ್ಪಟ್ಟಿದ್ದರಿಂದ ಹೊರಬರಲು ಸಾಧ್ಯವಾಗದೆ ಬಂಕರ್‍ನಲ್ಲಿ ತಂಗಿದ್ದ ಎನ್ನಲಾಗಿದೆ.
ಇಂದು ಬೆಳಗ್ಗೆ ನವೀನ್ ದಿನಸಿ ವಸ್ತುಗಳನ್ನು ತರಲು ಕರ್ಕೀವ್‍ನಲ್ಲಿರುವ ಸೂಪರ್ ಮಾರ್ಕೆಟ್‍ಗೆ ತೆರಳಿದ್ದ ವೇಳೆ ರಷ್ಯಾದ ಕ್ಷಿಪಣಿಗೆ ಸಾವನ್ನಪ್ಪಿದ್ದಾರೆ.ಈತನ ಜೊತೆ ಮತ್ತೋರ್ವ ಸ್ನೇಹಿತ ಯಶವಂತ್ ಎಂಬುವರು ಕೂಡ ತೆರಳಿದ್ದರು ಎನ್ನಲಾಗಿದೆ.
# ಆತಂಕದಲ್ಲಿ ಕನ್ನಡಿಗರು:
ರಷ್ಯಾ ನಿರಂತರವಾಗಿ ಕರ್ಕೀವ್ ಮತ್ತು ಕೀವ್‍ನಲ್ಲಿ ಇಂದು ದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿರುವುದರಿಂದ ತಾಯ್ನಾಡಿಗೆ ಮರಳಲು ಪರದಾಡುತ್ತಿರುವ ವಿದ್ಯಾರ್ಥಿಗಳು ಆತಂಕದ ಕ್ಷಣಗಳನ್ನು ಎದುರಿಸುತ್ತಿದ್ದಾರೆ.ಅದರಲ್ಲೂ ಕರ್ಕೀವ್ ವಶಪಡಿಸಿಕೊಳ್ಳಲು ರಷ್ಯಾ ನಿರಂತರವಾಗಿ ಕ್ಷಿಪಣಿ ದಾಳಿ ನಡೆಸುತ್ತಿರುವುದರಿಂದ ಬಂಕರ್‍ನಲ್ಲಿ ರಕ್ಷಣೆ ಪಡೆದಿರುವ ಭಾರತೀಯರು ಯಾವ ಕ್ಷಣದಲ್ಲಿ ಏನಾಗುತ್ತದೆಯೋ ಎಂಬ ಆತಂಕದಲ್ಲಿದ್ದಾರೆ.
ಉಕ್ರೇನ್‍ನಲ್ಲಿರುವ ಭಾರತೀಯರು ತಕ್ಷಣವೇ ದೇಶಬಿಟ್ಟು ಗಡಿಭಾಗಗಳಿಗೆ ತೆರಳುವಂತೆ ಅಲ್ಲಿನ ರಾಯಭಾರಿ ಕಚೇರಿ ಅಧಿಕಾರಿಗಳು ಸೂಚನೆ ನೀಡಿರುವುದು ಅಪಾಯದ ಮುನ್ಸೂಚನೆ ಎದುರಾಗಿದೆ ಎಂದೇ ಹೇಳಲಾಗುತ್ತಿದೆ.
