ಹುಬ್ಬಳ್ಳಿ, ಫೆ.28- ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಬ್ರೆಡ್ ಮಾತ್ರ ತಿಂದು ದಿನ ಕಳೆದಿದ್ದೇವೆ ಅಮ್ಮಾ… ಹೊಟ್ಟೆನೋವು ತಡೆಯಲು ಆಗುತ್ತಿಲ್ಲ…ಇದು ಉಕ್ರೇನ್ನ ಹಾರ್ಕಿವ್ನ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ಓದುತ್ತಿರುವ ಹುಬ್ಬಳ್ಳಿಯ ನಾಜಿಲ್ಲಾ ಬಾಬಾಜಾನ್ ಗಾಜಿಪುರ್ ಅವರು ತಮ್ಮ ತಾಯಿ ನೂರ್ಜಹಾನ್ ಮುಂದೆ ತೋಡಿಕೊಂಡ ನೋವು.
ತಮ್ಮ ಮಗಳು ಭಾನುವಾರ ಬೆಳಿಗ್ಗೆ ವಿಡಿಯೊ ಕಾಲ್ ಮಾಡಿ ಮಾತನಾಡಿದ್ದನ್ನು ಮಾಧ್ಯಮಗಳ ಜೊತೆ ಹಂಚಿಕೊಂಡ ನೂರ್ಜಹಾನ್ ಅವರು ಹಲವು ದಿನಗಳ ಹಿಂದೆ ಸಂಗ್ರಹಿಸಿಟ್ಟು ಕೊಂಡಿದ್ದ ನೀರು ವಾಸನೆ ಬರುತ್ತಿದೆ. ಕುಡಿಯಲು ಸಾಧ್ಯವಾಗುತ್ತಿಲ್ಲ.
ಮೊದಲೇ ತಂದುಕೊಂಡಿದ್ದ ಬ್ರೆಡ್ ತಿಂದು ದಿನಗಳನ್ನು ದೂಡುತ್ತಿದ್ದೇನೆ. ಬೇಸ್ಮೆಂಟ್ನಲ್ಲಿರುವ ಬಹಳಷ್ಟು ವಿದ್ಯಾರ್ಥಿಗಳು ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ ಎಂದು ನಮ್ಮ ಮಗಳು ಅಳುತ್ತಿದ್ದಳು. ನನ್ನ ಮಗಳನ್ನು ರಕ್ಷಿಸಿ ಕರೆತನ್ನಿ ಎಂದು ನೂರ್ ಜಹಾನ್ ಮನವಿ ಮಾಡಿದ್ದಾರೆ.
ಕೆಲವು ವಿದ್ಯಾರ್ಥಿಗಳು ಹಾರ್ಕಿವ್ನ ಮೆಟ್ರೊ ನಿಲ್ದಾಣ ಮತ್ತು ಇನ್ನೂ ಕೆಲವರು ಹಾಸ್ಟೆಲ್ನ ಬೇಸ್ಮೆಂಟ್ನಲ್ಲಿದ್ದೇವೆ. ಇಲ್ಲಿನ ಪರಿಸ್ಥಿತಿ ನೋಡಿದರೆ ತಾಯ್ನಾಡಿಗೆ ಬದುಕಿ ಬರುತ್ತೇವೆ ಎಂಬ ಭರವಸೆಯೇ ಉಳಿಯುತ್ತಿಲ್ಲ ಎಂದು ಮಗಳು ನೋವಿನಿಂದ ಹೇಳಿದಳು ಎಂದು ತಾಯಿ ಕಣ್ಣೀರಾದರು.
