ಬೆಂಗಳೂರು,ಫೆ.28- ಉಕ್ರೇನ್‍ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದ 31 ವಿದ್ಯಾರ್ಥಿಗಳು ರಾಜ್ಯಕ್ಕೆ ಮರಳಿದ್ದು, ಇಂದು ಸಂಜೆ ವೇಳೆಗೆ ಮತ್ತೆ ಆರು ಮಂದಿ ವಾಪಾಸಾಗಲಿದ್ದಾರೆ.ಯುದ್ಧಪೀಡಿತ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆತರುವ ಪ್ರಯತ್ನ ಕೇಂದ್ರ ಸರ್ಕಾರದ ನೆರವಿನೊಂದಿಗೆ ನಿರಂತರವಾಗಿ ನಡೆಯುತ್ತಿದೆ.
ನಿನ್ನೆ ಬೆಳಗ್ಗೆ ಮುಂಬೈ ಮೂಲಕ 12 ಮಂದಿ ವಿದ್ಯಾರ್ಥಿಗಳು ಬೆಂಗಳೂರಿಗೆ ಆಗಮಿಸಿದ್ದರು. 13 ಮಂದಿ ದೆಹಲಿ ಮೂಲಕ ರಾತ್ರಿ ಬೆಂಗಳೂರಿಗೆ ಆಗಮಿಸಿದ್ದಾರೆ. ಅಲ್ಲದೆ, ಐದು ವಿದ್ಯಾರ್ಥಿಗಳು ದೆಹಲಿ ಮೂಲಕವೇ ಬೆಂಗಳೂರಿಗೆ ಆಗಮಿಸಿದ್ದಾರೆ ಎಂದು ಕೆಎಸ್‍ಡಿಎಂಎ ಆಯುಕ್ತ ಹಾಗೂ ನೋಡೆಲ್ ಅಧಿಕಾರಿ ಮನೋಜ್‍ರಾಜನ್ ತಿಳಿಸಿದ್ದಾರೆ.
ಇಂದು ಸಂಜೆ ವೇಳೆಗೆ ಆರು ಮಂದಿ ವಿದ್ಯಾರ್ಥಿಗಳನ್ನು ಕರೆತರಲಾಗುತ್ತಿದೆ. ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು ಹಾಗೂ ನಾಗರಿಕರನ್ನು ಕರೆತರುವ ಪ್ರಯತ್ನ ನಿರಂತರವಾಗಿ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳ 406 ಮಂದಿ ಉಕ್ರೇನ್‍ನಲ್ಲಿ ಸಿಲುಕಿರುವ ಮಾಹಿತಿಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲಾಗಿದ್ದು, ಎಲ್ಲರನ್ನು ಹಂತ ಹಂತವಾಗಿ ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ ಎಂದಿದ್ದಾರೆ.
# ಉಚಿತ ಪ್ರಯಾಣ:
ಉಕ್ರೇನ್‍ನಿಂದ ರಾಜ್ಯಕ್ಕೆ ವಾಪಾಸಾಗಿರುವ ವಿದ್ಯಾರ್ಥಿಗಳು ಹಾಗೂ ನಾಗರಿಕರಿಗೆ ತಮ್ಮ ತವರೂರಿಗೆ ತೆರಳಲು ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಉಚಿತ ಪ್ರಯಾಣದ ವ್ಯವಸ್ಥೆಯನ್ನು ಮಾಡಲಾಗಿದೆ.
ಕರ್ನಾಟಕದ ಹತ್ತಿರದ ವಿಮಾನ ನಿಲ್ದಾಣದಿಂದ ರಾಜ್ಯದೊಳಗಿನ ಅವರವರ ಸ್ಥಳಗಳಿಗೆ ತೆರಳಲು ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ್ ತಿಳಿಸಿದ್ದಾರೆ.
ರಾಜ್ಯದ ವಿಮಾನದೊಳಗಿನ ಎಲ್ಲಾ ನೋಡೆಲ್ ಅಧಿಕಾರಿಗಳು ಹಾಗೂ ಕೆಎಸ್‍ಆರ್‍ಟಿಸಿಗೆ ಸಂಬಂಧಪಟ್ಟ ಅಕಾರಿಗಳು ಸಮನ್ವಯ ಸಾಸಿ ಉಚಿತ ಬಸ್ ಪ್ರಯಾಣಕ್ಕೆ ಅನುವು ಮಾಡಿಕೊಡಬೇಕೆಂದು ಅವರು ಸೂಚಿಸಿದ್ದಾರೆ.
