ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಜಾರಿ : CM ಬೊಮ್ಮಾಯಿ

Spread the love

ಬೆಂಗಳೂರು, ಮೇ 12- ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿಯೇ ಚುನಾವಣೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸಂವಿಧಾನದ ಅಡಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ನೀಡಲಾಗುತ್ತಿತ್ತು. ನಮ್ಮ ಸರ್ಕಾರದ ಮುಂದೆಯೂ ಮೀಸಲಾತಿ ಕಲ್ಪಿಸಿಯೇ ಚುನಾವಣೆ ನಡೆಸುತ್ತದೆ. ಇದರಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ ಎಂದು ಹೇಳಿದರು.

ಮೀಸಲಾತಿ ನೀಡುವ ಸಂಬಂಧ ಸುಪ್ರೀಂಕೋರ್ಟ್ ಆದೇಶ, ಹಿಂದುಳಿದ ವರ್ಗಗಳ ಆಯೋಗ ಹಾಗೂ ಬೇರೆ ಬೇರೆ ಸಮಿತಿಯ ಶಿಫಾರಸುಗಳಿಗೆ ಇವೆಲ್ಲವನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಯಾರಿಗೂ ಅನ್ಯಾಯವಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಮಧ್ಯಪ್ರದೇಶ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು, ಹಿಂದುಳಿದ ವರ್ಗಗಳ ಆಯೋಗ ನೀಡಿರುವ ಶಿಫಾರಸು, ವಿರೋಧ ಪಕ್ಷದ ನಾಯಕರು ಬರೆದಿರುವ ಪತ್ರ ಸೇರಿದಂತೆ ಎಲ್ಲವನ್ನೂ ಅಧ್ಯಯನ ಮಾಡುತ್ತೇವೆ ಎಂದರು.

ಕಾನೂನು ತಜ್ಞರು, ಅಡ್ವೋಕೇಟ್ ಜನರಲ್ ಜತೆ ಸಭೆ ನಡೆಸಲಾಗುವುದು. ಅವರು ಯಾವ ರೀತಿ ಸಲಹೆಗಳನ್ನು ನೀಡುತ್ತಾರೋ ನೋಡಿಕೊಂಡು ಸರ್ಕಾರ ಮುಂದಿನ ಹೆಜ್ಜೆ ಇಡಲಿದೆ. ಸಂವಿಧಾನ ನೀಡಿರುವ ಮೀಸಲಾತಿಯನ್ನು ಯಾರಿಗೂ ಮೊಟಕುಗೊಳಿಸುವುದಿಲ್ಲ. ಇದು ಎಲ್ಲಾ ರಾಜಕೀಯ ಪಕ್ಷಗಳ ಉದ್ದೇಶವಾಗಿಯೂ ಆಗಿದೆ ಎಂದು ಸಿಎಂ ಹೇಳಿದರು.

ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವ ಕುರಿತು ಮಧ್ಯ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಆದೇಶ ಕೊಟ್ಟಿದೆ. ಇದು ಆ ಒಂದು ರಾಜ್ಯಕ್ಕೆ ಮಾತ್ರ ಅನ್ವಯವಾಗುತ್ತದೆಯೋ ಇಲ್ಲವೇ ದೇಶದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆಯೋ ಎಂಬುದರ ಬಗ್ಗೆ ಕಾನೂನು ತಜ್ಞರ ಜತೆ ಚರ್ಚಿಸಿ ಮಾಹಿತಿ ಪಡೆಯುತ್ತೇವೆ ಎಂದರು.

ವಾರ್ಡ್ ಪುನರ್‍ವಿಂಗಡಣೆ, ಮೀಸಲಾತಿ ನಿಗದಿ, ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಪ್ರಕ್ರಿಯೆಗಳನ್ನು ಆರಂಭಿಸಲು ಒಂದಿಷ್ಟು ಸಮಯವಕಾಶ ಬೇಕಾಗಬಹುದು. ಸರ್ಕಾರಕ್ಕೆ ಚುನಾವಣೆ ಮುಂದೂಡುವ ಉದ್ದೇಶವಿಲ್ಲ. ಎಲ್ಲರಿಗೂ ಸಂವಿಧಾನದ ಆಶಯದಂತೆ ಮೀಸಲಾತಿ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದು ಬೊಮ್ಮಾಯಿ ಪುನರುಚ್ಚರಿಸಿದರು.

# ಸುಗ್ರೀವಾಜ್ಞೆ ಜಾರಿ:

ಬೆಳಗಾವಿಯ ಚಳಿಗಾಲದ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ ಕರ್ನಾಟಕ ಧಾರ್ಮಿಕ ಸ್ವತಂತ್ರ ಹಕ್ಕು ಸಂರಕ್ಷಣಾ (ಮತಾಂತರ ನಿಷೇಧ) ಮಸೂದೆಯನ್ನು ಅಂಗೀಕರಿಸಲು ಇಂದು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸುತ್ತೇವೆ ಎಂದು ಸಿಎಂ ತಿಳಿಸಿದರು.

ವಿಧಾನಸಭೆಯಲ್ಲಿ ಇದು ಅಂಗೀಕೃತವಾಗಿದ್ದರೂ ಮೇಲ್ಮನೆಯಲ್ಲಿ ಮಸೂದೆ ಮಂಡನೆಯಾಗಿರಲಿಲ್ಲ. ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸುಗ್ರೀವಾಜ್ಞೆ ಹೊರಡಿಸುವುದಾಗಿ ಹೇಳಿದರು. ಸಚಿವ ಸಂಪುಟ ವಿಸ್ತರಣೆ/ ಪುನಾರಚನೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಮುಖ್ಯಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

Facebook Comments