ಬೆಂಗಳೂರು,ಮಾ.1- ಯುದ್ಧ ಪೀಡಿತ ಉಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ರಾಜ್ಯದ ವಿದ್ಯಾರ್ಥಿಗಳ ಜೊತೆ ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ದೂರವಾಣಿ ಕರೆ ಮಾಡಿ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಧೈರ್ಯ ತುಂಬಿದರು.
ವಿಡಿಯೋ ಕರೆ ಮಾಡಿದ ಗೋಪಾಲಯ್ಯ ಅವರು, ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ರೋಹಿತ್, ಬೆಂಗಳೂರಿನ ರಕ್ಷಿತ್, ಹಾಸನ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳ ಜೊತೆ ಯೋಗಕ್ಷೇಮ ವಿಚಾರಿಸಿ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದರು.
ಪ್ರಧಾನಿ ನರೇಂದ್ರಮೋದಿ , ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್, ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ನಾಗರಿಕ ವಿಮಾನಯಾನ ಸಚಿವ ಜೋತಿರಾತ್ಯ ಸಿಂಧ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಮತ್ತಿತರರು ಉಕ್ರೇನ್‍ನಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮನವರಿಕೆ ಮಾಡಿದರು.
ವಿದ್ಯಾರ್ಥಿಗಳ ಜೊತೆ ಮಾತನಾಡಿದ ಸಚಿವರು, ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬಾರದು. ಆತ್ಮಸ್ಥೈರ್ಯದಿಂದ ಪರಿಸ್ಥಿತಿಯನ್ನು ಎದುರಿಸಿ. ನಿಮ್ಮ ತಂದೆತಾಯಿಗಳು, ಸಹೋದರ-ಸಹೋದರಿಯರು ಆತಂಕದಲ್ಲಿರುತ್ತಾರೆ. ನಿಮ್ಮ ಕುಟುಂಬ ವರ್ಗದವರಿಗೆ ಕರೆ ಮಾಡಿ ತಾವು ಸುರಕ್ಷಿತವಾಗಿರುವುದಾಗಿ ತಿಳಿಸುವಂತೆ ಮನವಿ ಮಾಡಿದರು.
ನೀವು ಧೈರ್ಯ ಕಳೆದುಕೊಂಡರೆ ಪೋಷಕರು ಆತಂಕಕ್ಕೆ ಒಳಗಾಗುತ್ತಾರೆ. ಪ್ರತಿದಿನ ದೂರವಾಣಿ ಕರೆ ಮಾಡಿ ಅಲ್ಲಿನ ವಸ್ತುಸ್ಥಿತಿಯನ್ನು ತಿಳಿಸಿ. ನಿಮ್ಮನ್ನು ಆದಷ್ಟ ಶೀಘ್ರದಲ್ಲಿ ತಾಯ್ನಾಡಿಗೆ ಕರೆ ತರಲು ನಮ್ಮ ಸರ್ಕಾರ ತಯಾರಿ ಮಾಡಿಕೊಂಡಿದೆ ಎಂದು ಅಭಯ ನೀಡಿದರು.
ಈಗಾಗಲೇ ಅನೇಕ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರ್ನಾಟಕಕ್ಕೆ ಕರೆತರಲಾಗಿದೆ. ಪ್ರತಿಯೊಬ್ಬರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಬೇಕೆಂದು ಖುದ್ದು ಪ್ರಧಾನಿ ನರೇಂದ್ರಮೋದಿ ಅವರೇ ಸಚಿವರಿಗೆ ಸೂಚನೆ ಕೊಟ್ಟಿದ್ದಾರೆ.
ಉಕ್ರೇನ್‍ನಿಂದ ಬರುವವರಿಗೆ ಉಚಿತವಾಗಿ ವಿಮಾನ ಪ್ರಯಾಣ, ವಿಮಾನ ನಿಲ್ದಾಣದಿಂದ ಮನೆಯವರೆಗೂ ತಲುಪಿಸಲು ನಮ್ಮ ಸರ್ಕಾರ ಉಚಿತವಾಗಿ ಪ್ರಯಾಣ ವ್ಯವಸ್ಥೆಯನ್ನು ಕಲ್ಪಿಸಿದೆ. ಯಾವುದೇ ಬೆಲೆ ತೆತ್ತಾದರೂ ಸುರಕ್ಷಿತವಾಗಿ ನಿಮ್ಮನ್ನು ಕರೆತರುತ್ತೇವೆ. ನೀವು ಆತಂಕಕ್ಕೆ ಒಳಗಾಗಬಾರದು ಎಂದು ಗೋಪಾಲಯ್ಯ ಸಲಹೆ ಮಾಡಿದರು.
ಅಲ್ಲಿನ ರಾಯಭಾರಿ ಕಚೇರಿ ಅಧಿಕಾರಿಗಳು ಹೇಳುವವರೆಗೂ ಮನೆಯಿಂದಾಗಲಿ ಇಲ್ಲವೇ ಬಂಕರ್‍ನಿಂದ ಆಚೆ ಬರಬೇಡಿ. ನೀರು, ಊಟ ಸರಿಯಾದ ಸಮಯಕ್ಕೆ ತೆಗೆದುಕೊಳ್ಳಿ. ಅಧಿಕಾರಿಗಳು ಹೊರಡಿ ಎಂದು ಹೇಳಿದಾಗ ಎಲ್ಲರೂ ಸುರಕ್ಷಿತವಾಗಿ ಬನ್ನಿ ಎಂದು ಆಶಿಸಿದರು.
ನನ್ನಿಂದ ಯಾವುದಾದರೂ ಸಹಾಯ ಬೇಕಾದರೆ ದಿನದ 24 ಗಂಟೆಯೂ ದೂರವಾಣಿ ಕರೆ ಮಾಡಬಹುದು ನಿಮ್ಮ ತಂದೆತಾಯಿಗಳಿಗೆ ಸಾಧ್ಯವಾದರೆ ನನ್ನನ್ನು ಭೇಟಿ ಮಾಡಲು ಹೇಳಿ. ನಿಮ್ಮನ್ನು ತಾಯ್ನಾಡಿಗೆ ಸುರಕ್ಷಿತವಾಗಿ ಕರೆತರುತ್ತೇವೆ. ವಾಪಸ್ ಬರುವವರೆಗೂ ಜಾಗೃತಿ ವಹಿಸಿ ಎಂದು ಕಿವಿಮಾತು ಹೇಳಿದರು.
