ಡಿಸೆಂಬರ್‌ನಲ್ಲಿ ಚಳಿಗಾಲದ ಅಧಿವೇಶನ

Social Share

ಬೆಂಗಳೂರು. ಅ.18-ರಾಜ್ಯ ವಿಧಾನ ಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಡಿಸೆಂಬರ್ ಎರಡನೇ ವಾರದಿಂದ ಹತ್ತು ದಿನಗಳ ಕಾಲ ಬೆಳಗಾವಿಯಲ್ಲಿ ನಡೆಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.
ಪ್ರತಿ ವರ್ಷದ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವ ಸಂಪ್ರದಾಯವಿದೆ. ಅದರಂತೆ ಈ ಬಾರಿಯ ಅಧಿವೇಶನವನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಲಾಗುತ್ತದೆ.

ಅಂದರೆ ಡಿ.12ರಿಂದ 23ರವರೆಗೆ ಹತ್ತು ದಿನಗಳ ಕಾಲ ಅಧಿವೇಶನ ನಡೆಸಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಸುವರ್ಣ ವಿಧಾನಸೌಧ ನಿರ್ಮಾಣಗೊಂಡು ಹತ್ತು ವರ್ಷಗಳು ಕಳೆದ ಬಳಿಕ ನಡೆಯುವತ್ತಿರುವ ಅಧಿವೇಶನ ಇದಾಗಲಿದೆ. ಈ ಬಾರಿಯೂ ಐತಿಹಾಸಿಕ ನಿರ್ಣಯಕ್ಕೆ ಅಧಿವೇಶನ ಸಾಕ್ಷಿಯಾಗುವ ಸಂಭವವಿದೆ.

ಕಾಂಗ್ರೆಸ್ ಸರ್ಕಾರವಿದ್ದಾಗ ಸುವರ್ಣಸೌಧದಲ್ಲಿ ನಡೆದ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಒದಗಿಸುವ ಹಾಗೂ ಆಯಾ ವರ್ಷವೇ ಆ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನವನ್ನು ಖರ್ಚು ಮಾಡುವ ವಿಧೇಯಕವನ್ನು ಮಂಡಿಸಿ ಒಪ್ಪಿಗೆ ಪಡೆಯಲಾಗಿತ್ತು.

ಆಯಾ ವರ್ಷ ಒದಗಿಸಿದ ಅನುದಾನ ಖರ್ಚು ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ನೀಡುವ ವಿಧೇಯಕವನ್ನು ಆಗಿನ ಸಮಾಜ ಕಲ್ಯಾಣ ಸಚಿವ ಎಚ್,ಆಂಜನೇಯ ಮಂಡಿಸಿ ಗಮನ ಸೆಳೆದಿದ್ದರು. ನಂತರ ಅದು ಕಾಯ್ದೆಯಾಗಿ (ಎಸ್‍ಸಿಪಿ ಟಿಎಸ್‍ಪಿ)ರಾಜ್ಯದಲ್ಲಿ ಜಾರಿಯಲ್ಲಿದೆ.

ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಹೆಚ್ಚಳ ಮಾಡಿದ್ದು, ಸುಗೀರ್ವಾಜ್ಞೆ ಮೂಲಕ ಜಾರಿಗೊಳಿಸಲು ಮುಂದಾಗಿದೆ.
ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದ ವಿಧೇಯಕವನ್ನು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯುವ ಉದ್ದೇಶ ಹೊಂದಿದ್ದಾರೆ.

ಹೀಗಾಗಿ ಈ ಬಾರಿಯ ಅಧಿವೇಶನವೂ ಎಸ್‍ಸಿ ಎಸ್‍ಟಿ ಮೀಸಲಾತಿ ಹೆಚ್ಚಳದ ವಿಧೇಯಕಕ್ಕೆ ಒಪ್ಪಿಗೆ ನೀಡುವ ಐತಿಹಾಸಿಕ ನಿರ್ಣಯಕ್ಕೂ ಸಾಕ್ಷಿಯಾಗುವ ಸಂಭವವಿದೆ.

Articles You Might Like

Share This Article