ವಿಧಾನಸಭೆಯಲ್ಲಿ ನಾಡೋಜ ಚನ್ನವೀರ ಕಣವಿ ಅವರಿಗೆ ಸಂತಾಪ

Social Share

ಬೆಂಗಳೂರು,ಫೆ.16-ಅನಾರೋಗ್ಯ ಹಿನ್ನೆಲೆಯಲ್ಲಿ ಇಂದು ನಿಧನರಾದ ನಾಡೋಜ, ಖ್ಯಾತ ಕವಿ ಡಾ.ಚನ್ನವೀರ ಕಣವಿ ಹಾಗೂ ಮಾಜಿ ಶಾಸಕ ಎಚ್.ಡಿ.ಚೌಡಯ್ಯ ಅವರಿಗೆ ವಿಧಾನಸಭೆಯಲ್ಲಿಂದು ಸಂತಾಪ ಸೂಚಿಸಲಾಯಿತು. ನಿಗದಿತ ಸಮಯಕ್ಕೆ ಸರಿಯಾಗಿ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷ ವಿಶ್ವೇಶ್ವರಹೆಗಡೆ ಕಾಗೇರಿ ಅವರು ಅಗಲಿದ ಗಣ್ಯರಿಗೆ ಗೌರವ ಸೂಚಿಸುವ ಸಂತಾಪ ನಿರ್ಣಯವನ್ನು ಮಂಡಿಸಿದರು.
ಬಳಿಕ ಮಾತನಾಡಿದ ಕಾಗೇರಿ ಅವರು, ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ಅವರು ಕನ್ನಡದ ಶ್ರೇಷ್ಟ ಸಾಹಿತಿಗಳಲ್ಲಿ ಒಬ್ಬರಾಗಿದ್ದರು. ಕಥೆ, ಕಾದಂಬರಿ, ಕವನ, ವಿಮರ್ಶೆ ಬರೆಯುವ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗಡೆ ನೀಡಿದ್ದರು. ರಾಜ್ಯೋತ್ಸವ, ಪಂಪ, ಕೇಂದ್ರ ಸಾಹಿತ್ಯ ಅಕಾಡೆಮಿ, ಆಳ್ವಾಸ್ ನುಡಿಸಿರಿ, ನಾಡೋಜ, ಕರ್ನಾಟಕ ಕವಿರತ್ನ, ಬಸವ ಗುರು ಕಾರುಣ್ಯ ಪ್ರಶಸ್ತಿಗೆ ಭಾಜನರಾಗಿದ್ದರು ಎಂದು ಸ್ಮರಿಸಿದರು.
ವಿಧಾನಸಭೆಯ ಮಾಜಿ ಸದಸ್ಯರಾಗಿದ್ದ ಎಚ್.ಡಿ.ಚೌಡಯ್ಯ ಅವರು 1978, 1983, 1985, 1999ರಲ್ಲಿ ವಿಧಾನಸಭೆ ಹಾಗೂ 1992ರಲ್ಲಿ ವಿಧಾನಪರಿಷತ್‍ಗೂ ಆಯ್ಕೆಯಾಗಿ ಕಾರ್ಯ ನಿರ್ವಹಿಸಿದ್ದರು ಎಂದು ಹೇಳಿದರು.
ಸಂತಾಪಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಡಾ.ಚನ್ನವೀರ ಕಣವಿ ಅವರು ಬಂಡಾಯ, ನವೋದಯ ಮತ್ತು ಸಾಂಪ್ರದಾಯಿಕ ಸಾಹಿತ್ಯದ ಪ್ರಮುಖ ಕೊಂಡಿಯಾಗಿದ್ದರು. ಯಾವುದನ್ನಾಗಲಿ, ಏನನ್ನಾಗಲಿ ಮಾತನಾಡಬೇಕಾದರೆ ಸಾಕಷ್ಟು ಅಳೆದು ತೂಗಿ ಮಾತನಾಡುತ್ತಿದ್ದರು. ಯಾವಾಗಲೂ ಕೂಡ ವಿವಾದವನ್ನು ಮೈಮೇಲೆ ಎಳೆದುಕೊಳ್ಳದ ಅಪರೂಪದ ಸಾಹಿತಿಗಳು ಎಂದರು.
ವರಕವಿ ದಾ.ರಾ.ಬೇಂದ್ರೆ, ಚಂದ್ರಶೇಖರ ಪಾಟೀಲ, ಎಂ.ಎನ್.ಕಲಬುರ್ಗಿ, ಪಟ್ಟಣ ಶೆಟ್ಟಿ ಅವರಂತಹ ಶ್ರೇಷ್ಠ ಕವಿಗಳ ಒಡನಾಡಿಯಾಗಿದ್ದ ಕಣವಿ ಅವರು, ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು.
ಧಾರವಾಡ ವಿದ್ಯಾವರ್ಧಕ ಸಂಘದ ಮೂಲಕ ಸಾಹಿತ್ಯ ಚಟುವಟಿಕೆಯನ್ನು ಆರಂಭಿಸಿದ ಅವರು, ನಾಡಿಗೆ ಶ್ರೇಷ್ಠ ಸಾಹಿತ್ಯವನ್ನು ನೀಡಿದ ಪ್ರಮುಖರಲ್ಲೊಬ್ಬರು. ಇತ್ತೀಚೆಗೆ ಕನ್ನಡ ಸಾಹಿತ್ಯ ಲೋಕವು ಡಾ.ಸಿದ್ದಲಿಂಗಯ್ಯ, ಚಂದ್ರಶೇಖರ ಪಾಟೀಲ್, ಚನ್ನವೀರ ಕಣವಿಯವರಂತಹ ದಿಗ್ಗಜರನ್ನು ಕಳೆದುಕೊಂಡಿದೆ.
ದೇಶದಲ್ಲಿ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಕನ್ನಡ ಸಾಹಿತ್ಯ ಲೋಕಕ್ಕಿದೆ. ಇಂತಹ ದಿಗ್ಗಜರನ್ನು ಕಳೆದುಕೊಂಡಿರುವ ಕನ್ನಡ ನಾಡಿಗೆ ಉತ್ಕಷ್ಟ ಸಾಹಿತ್ಯವನ್ನು ರಚಿಸುವ ದಿಗ್ಗಜರು ಮೂಡಿ ಬರಬೇಕು, ಕಸಾಪ ಈ ನಿಟ್ಟಿನಲ್ಲಿ ಆಲೋಚಿಸಲಿ ಎಂದು ಹೇಳಿದರು.
ಎಚ್.ಡಿ.ಚೌಡಯ್ಯ ಅವರು ವಿಶಿಷ್ಟ ವ್ಯಕ್ತಿತ್ವದ ನೇರ ನುಡಿಯ ರಾಜಕಾರಣಿ. ಸಹಕಾರಿ ಧುರೀಣರು ಆಗಿದ್ದ ಅಂತಹವರನ್ನು ಕಳೆದುಕೊಂಡಿರುವುದು ಕನ್ನಡ ನಾಡಿಗೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದರು.
ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಸಂತಾಪ ನಿರ್ಣಯದ ಮೇಲೆ ಮಾತನಾಡಿ, ಚನ್ನವೀರ ಕಣವಿ ಅವರು ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠ ಕವಿಗಳಲ್ಲಿ ಒಬ್ಬರಾಗಿದ್ದರು. ಅವರಿಗೆ ರಾಷ್ಟ್ರಕವಿ ಪ್ರಶಸ್ತಿ ಸಿಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದೆ. ದುರಾದೃಷ್ಟ ವಶಾತ್ ಇಷ್ಟು ಬೇಗ ನಮ್ಮನ್ನು ಬಿಟ್ಟು ಇಹಲೋಕ ತ್ಯಾಜಿಸುತ್ತಾರೆ ಎಂದು ಅಂದುಕೊಂಡಿರಲಿಲ್ಲ ಎಂದು ವಿಷಾದಿಸಿದರು.
ಇನ್ನು ಸಂತಾಪ ನಿರ್ಣಯದ ಮೇಲೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಸಚಿವರಾದ ಡಿ.ಸಿ.ತಮ್ಮಣ್ಣ, ಜಿ.ಟಿ.ದೇವೇಗೌಡ ಸೇರಿದಂತೆ ಅನೇಕ ಸದಸ್ಯರು ಮಾತನಾಡಿದರು. ಮೃತರ ಗೌರವಾರ್ಥವಾಗಿ ಸದಸ್ಯರು ಒಂದು ನಿಮಿಷ ಎದ್ದುನಿಂತು ಮೌನಾಚರಣೆ ಸಲ್ಲಿಸಿದರು.

Articles You Might Like

Share This Article