ಕೋವಿಡ್ ಲಸಿಕೆ ವಿಚಾರದಕ್ಕೆ ವಿಧಾನಸಭೆಯಲ್ಲಿ ಮಾತಿನ ಚಕಮಕಿ

Social Share

ಬೆಂಗಳೂರು,ಫೆ.15- ಕೋವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ನೀಡುವಾಗ ವ್ಯಕ್ತವಾದ ಅನು ಮಾನಗಳ ಬಗ್ಗೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ವಿಧಾನಸಭೆಯಲ್ಲಿಂದು ಆರೋಪ- ಪ್ರತ್ಯಾರೋಪ ಹಾಗೂ ಮಾತಿನ ಚಕಮಕಿ ನಡೆಯಿತು.
ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಪ್ರಸ್ತಾಪ ಸಲ್ಲಿಸುವ ವೇಳೆ ಕುಡಕಿ ಶಾಸಕ ರಾಜೀವ್ ಅವರು ವಿಷಯ ಪ್ರಸ್ತಾಪಿಸಿ, ಕೋವಿಡ್ ಸಂದರ್ಭದಲ್ಲಿ ಪ್ರಧಾನಿಯವರು ದೇಶದ ಜನತೆಗೆ ಕೋವಿಡ್ ಲಸಿಕೆಯನ್ನು ನೀಡಲು ಮುಂದದಾಗ ಕೆಲವರು ಇದಕ್ಕೆ ಅನುಮಾನ ವ್ಯಕ್ತಪಡಿಸಿದರು. ಇದಕ್ಕೆ ಬಿಜೆಪಿ ಲಸಿಕೆ, ಮೋದಿ ಲಸಿಕೆ ಎಂದೆಲ್ಲ ಕುಹಕವಾಡಿದರು ಎಂದು ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ಕಾಲೆಳೆದರು.
ಇದಕ್ಕೆ ಕಾಂಗ್ರೆಸ್ ಸದಸ್ಯರಾದು ಯು.ಟಿ.ಖಾದರ್, ಡಾ.ರಂಗನಾಥ್ ಸೇರಿದಂತೆ ಮತ್ತಿತರರು ಆಕ್ಷೇಪಿಸಿದರು. ನಾವು ಕೋವಿಡ್ ಲಸಿಕೆಯನ್ನು ನೀಡಲು ವಿರೋಸಲಿಲ್ಲ. ಆದರೆ ಲಸಿಕೆ ಉತ್ಪಾದನೆ ಮಾಡಿದವರೋ ಯಾರು, ಕಂಡು ಹಿಡಿದವರ್ಯಾರು, ಉತ್ಪಾದಿಸಿದವರು ಇನ್ಯಾರೋ ಆದರೆ ಇದು ಮೋದಿಯವರದಾಗಿತ್ತು ಹಾಗಾಗಿ ಇದನ್ನು ನಾವು ಆಕ್ಷೇಪಿಸಿದೆವು ಎಂದರು.
ಮಾತು ಮುಂದುವರೆಸಿದ ರಾಜೀವ್, ದೀಪ ಹಚ್ಚಿರಿ, ಜಾಗಟೆಯನ್ನು ಭಾರಿಸಿ ಎಂದು ಹೇಳಿದ್ದು ನಿಜ. ಇದರಿಂದ ಕೋವಿಡ್ ಹೋಗುವುದಿಲ್ಲ ಎಂಬುದು ಪ್ರತಿಯೊಬ್ಬರಿಗೂ ಗೊತ್ತಿತ್ತು. ಆದರೆ ಇದರ ವಿರುದ್ಧ ಒಟ್ಟಾಗಿದ್ದರೆ ಮಾತ್ರ ಹೋರಾಟ ಮಾಡಲು ಸಾಧ್ಯ ಎಂಬ ಕಾರಣಕ್ಕಾಗಿ ದೇಶದ ಜನತೆಗೆ ಕರೆಕೊಟ್ಟಿದ್ದರು ಎಂದು ಹೇಳಿದರು.
ಇದಕ್ಕೂ ಸಹ ಕೆಲವರು ಕುಹಕವಾಡಿದರು ಎಂದು ಪರೋಕ್ಷವಾಗಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರನ್ನು ಗುರಿಯಾಗಿಸಿಕೊಂಡು ಟೀಕಿಸಿದರು. ಈ ಹಂತದಲ್ಲಿ ಕಾಂಗ್ರೆಸ್‍ನ ಪ್ರಿಯಾಂಕ ಖರ್ಗೆ, ನೀವು ವೈಜ್ಞಾನಿಕವಾಗಿ ಚಿಂತನೆ ಮಾಡುತ್ತೀರೆಂದು ಅಂದುಕೊಂಡಿದ್ದೆವು. ಆದರೆ ಬಿಜೆಪಿ ಸೇರಿದ ಮೇಲೆ ನೀವು ಕೂಡ ಆ ಪಕ್ಷದಂತೆ ಮಾತನಾಡುತ್ತೀದ್ದೀರಿ ಎಂದು ಕಾಲೆಳೆದರು.
ಜಾಗಟೆ ಬಾರಿಸುವುದರಿಂದ ಇಲ್ಲವೇ ದೀಪ ಹಚ್ಚುವುದರಿಂದ ಕೋವಿಡ್ ಹೋಗುವುದಿಲ್ಲ. ವೈಜ್ಞಾನಿಕವಾಗಿ ಅಭ್ಯಸಿಸಿ ಲಸಿಕೆಯನ್ನು ಕಂಡುಹಿಡಿಯಬೇಕು. ಇದರಲ್ಲಿ ವಿಫಲರಾಗಿದ್ದಾರೆ ಂದ ಪ್ರಿಯಾಂಕ ಖರ್ಗೆ ಹೇಳಿದಾಗ, ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ಉಂಟಾಯಿತು.
ಇದಕ್ಕೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಶೇ ನೂರರಷ್ಟು ಮೊದಲ ಡೋಸ್ ನೀಡಲಾಗಿದೆ. ಎರಡನೇ ಡೋಸ್ 80 ರಷ್ಟು ಆಗಿದೆ. ಆದರೆ ಪ್ರಾರಂಭದಲ್ಲಿ ಲಸಿಕೆ ಬಗ್ಗೆ ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶದಲ್ಲಿ ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ನೀಡಲಾಗಿದೆ ಎಂದು ವಿವರಿಸಿದರು.
130 ಕೋಟಿ ಜನರಿಗೆ ಲಸಿಕೆ ಕೊಟ್ಟ ಯಾವುದೇ ಉದಾಹರಣೆ ಇಲ್ಲ. ಮೋದಿ ನಾಯಕತ್ವಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಎಲ್ಲ ರಾಜ್ಯಗಳ ಜೊತೆ ಸಹಕಾರ ಇಟ್ಟುಕೊಂಡು ಕೋವಿಡ್ ನಿಯಂತ್ರಣ ಮಾಡಿದ್ದಾರೆ. ಇದು ರಾಜಕೀಯ ಇಚ್ಚಾಶಕ್ತಿ ಇಟ್ಟುಕೊಂಡೇ ಮಾಡಿದ್ದಾರೆ. ಲಸಿಕೆ ಬಗ್ಗೆ ಹಾಗೂ ಕೋವಿಡ್ ಬಗ್ಗೆ ರಾಜಕೀಯ ದೃಷ್ಟಿಯಿಂದ ಅನುಮಾನ ಬರುವ ರೀತಿಯಲ್ಲಿ ಕೆಲಸ ಮಾಡಿದರು ಎಂದರು.

Articles You Might Like

Share This Article