ನಿಮ್ಮ ಜಮೀನಿನ ಪೋಡಿ ನೀವೇ ಮಾಡಿಕೊಳ್ಳಿ

ಬೆಂಗಳೂರು,ಏ.30- ಭೂ ಅರ್ಜಿಗಳನ್ನು ತೀವ್ರವಾಗಿ ಇತ್ಯರ್ಥಪಡಿಸುವ ಸದುದ್ದೇಶದಿಂದ ದೇಶದಲ್ಲೇ ಮೊದಲ ಬಾರಿಗೆ ಕಂದಾಯ ಇಲಾಖೆ ನಿಮ್ಮ ಪೋಡಿ ನೀವೇ ಮಾಡಿ ಸ್ವಾವಲಂಬಿ ಎಂಬ ವಿನೂತನ ಯೋಜನೆ ಯನ್ನು ಜಾರಿ ಮಾಡಿದೆ. ಇದರಿಂದಾಗಿ ಇನ್ನು ಮುಂದೆ ಸಾರ್ವಜನಿಕರು ತಮ್ಮ ಸ್ವಂತ ಭೂಮಿಯ ನಕ್ಷೆಯನ್ನು ತಾವೇ ತಯಾರಿಸಿಕೊಳ್ಳಬಹುದು. ಇದು ಸಂಪೂರ್ಣ ಕಾನೂನಿನ ಮಾನ್ಯತೆಯನ್ನು ಹೊಂದಿದ್ದು, ಭೂಮಾಪನ ಇಲಾಖೆಯಿಂದ ಆನ್‍ಲೈನ್ ಅನುಮೋದನೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಆರ್.ಅಶೋಕ್ ತಿಳಿಸಿದರು.

ಸ್ವಾವಲಂಬಿ ಯೋಜನೆಯನ್ನು 11 ಇ-ಸ್ಕೆಚ್ ಭೂ ಪರಿವರ್ತನೆಯ ಪೂರ್ವ ನಕ್ಷೆ , ಪೋಡಿ, ವಿಭಜನೆ, ಏಕ ಮಾಲೀಕತ್ವದ ಆರ್‍ಟಿಸಿ ಸೇರಿದಂತೆ ಹಲವಾರು ರೀತಿಯ ಅನುಕೂಲತೆಗಳನ್ನು ಈ ಯೋಜನೆಯಿಂದ ಪಡೆಯಬಹುದು ಎಂದರು. ಕಳೆದ 20-20 ವರ್ಷಗಳಿಂದ ಕಂದಾಯ ಇಲಾಖೆಯಲ್ಲಿ ಈ ರೀತಿ ಸುಮಾರು 10 ಲಕ್ಷ ಅರ್ಜಿಗಳು ಇತ್ಯರ್ಥವಾಗದೆ ಹಾಗೆಯೇ ಉಳಿದಿವೆ. ಪ್ರತಿ ವರ್ಷ 6 ಲಕ್ಷ ಅರ್ಜಿಗಳು ಇತ್ಯರ್ಥವಾಗದೆ ಉಳಿಯುತ್ತಿದ್ದವು. ಇದನ್ನು ತಪ್ಪಿಸಲು ಮೊದಲ ಬಾರಿಗೆ ಸ್ವಾವಲಂಬಿ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಇದು ನಾಗರಿಕ ಸ್ನೇಹಿಯಾಗಿದ್ದು, ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ನಾಗರಿಕರು ತಮ್ಮ ಸ್ವಂತ ಖಾಸಗಿ ಸರ್ವೆ ನಂಬರುಗಳ ಜಮೀನನ ನಕ್ಷೆಗಾಗಿ 11ಇ ಅರ್ಜಿಯನ್ನು ಉಪನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಸರ್ವೆ ನಂಬರ್ ಮಾರಾಟ ಅಥವಾ ವ್ಯವಹಾರ ನೊಂದಿಸುವ ಸಲುವಾಗಿ ತಮ್ಮ ಸ್ವಂತ ಖಾಸಗಿ ಸರ್ವೆ ನಂಬರ್‍ನ ಭೂಮಿಯ ನಕ್ಷೆ ಪಡೆಯಲು, ತತ್ಪಲ್ ಪೋಡಿಯಿಂದ ನಾಗರಿಕರು ಖಾಸಗಿ ಜಮೀನಿನ ಹಕ್ಕುದಾರಿಕೆಯಿಂದ ಉಪವಿಭಾಗ ವಿಂಗಡಿಸಲು ಜಿಲ್ಲಾಧಿಕಾರಿಗಳಿಂದ ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆಯ ನಕ್ಷೆ ಪಡೆಯಲು ಇದು ಅನುಕೂಲವಾಗಲಿದೆ ಎಂದರು.

ಸಾರ್ವಜನಿಕರು ಕಂದಾಯ ಇಲಾಖೆ ಹೊರತಂದಿರುವ ಆರ್‍ಡಿ ಸರ್ವೀಸಸ್.ಕರ್ನಾಟಕ, ಗೌರನ್ಮೆಂಟ್ ಇನ್ ಆನ್‍ಲೈನ್‍ನಲ್ಲಿ ಅಥವಾ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಮೊಬೈಲ್ ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು ಎಂದು ಸಲಹೆ ಮಾಡಿದರು.

ಈ ಆ್ಯಪ್‍ನ್ನು ಡೌನ್‍ಲೋಡ್ ಮಾಡಿಕೊಳ್ಳಲು ಸಂಬಂಧಪಟ್ಟವರು ಯಾರಿಂದಲಾದರೂ ಸಹಾಯವನ್ನು ಪಡೆಯಬಹುದು. ಇಲ್ಲವೇ ತಮ್ಮ ಇಲಾಖೆಯಿಂದ ಮೂರು ಸಾವಿರ ಸರ್ವೆಯರ್‍ಗಳನ್ನು ನೇಮಕ ಮಾಡಿದ್ದೇವೆ. ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಭೂ ಪರಿವರ್ತನೆಗಾಗಿ ಸಂಬಂಧಪಟ್ಟವರು ಅರ್ಜಿ ಸಲ್ಲಿಸಿ 10 ದಿನದೊಳಗೆ ಇಲಾಖೆ ಪರಿಶೀಲನೆ ನಡೆಸಲಿದೆ. ಎಲ್ಲ ದಾಖಲೆಗಳು ಸರಿಯಾಗಿದ್ದರೆ 15 ದಿನದೊಳಗೆ ನೀವು ಭೂ ನಕ್ಷೆಯು ನಿಮ್ಮ ಕೈಸೇರಲಿದೆ ಎಂದು ಹೇಳಿದರು.