ಜೋರ್ ಬಾಗ್ ನಿವಾಸ ತೆರವು ಮಾಡುವಂತೆ ಸಂಸದ ಕಾರ್ತಿಗೆ ಇಡಿ ಸೂಚನೆ

ನವದೆಹಲಿ, ಆ.1- ಐಎನ್‍ಎಕ್ಸ್ ಕೋಟ್ಯಂತರ ರೂ.ಗಳ ಮೀಡಿಯಾ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ವಶಕ್ಕೆ ಪಡೆಯಲಾಗಿದ್ದ ಜೋರ್ ಬಾಗ್ ನಿವಾಸ ತೆರವು ಮಾಡುವಂತೆ ಕಾಂಗ್ರೆಸ್ ಧುರೀಣ ಮತ್ತು ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಅವರ ಪುತ್ರ ಸಂಸದ-ಉದ್ಯಮಿ ಕಾರ್ತಿ ಚಿದಂಬರಂ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ) ನಿರ್ದೇಶನ ನೀಡಿದೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ನ್ಯಾಯಾಧೀಶರ ಪ್ರಾಧಿಕಾರ ನೀಡಿರುವ ತೆರವು ನೋಟಿಸ್‍ನ್ನು ಕಾರ್ತಿ ಅವರಿಗೆ ನಿನ್ನೆ ರಾತ್ರಿ ನಿರ್ದೇಶನ ನೀಡಲಾಗಿದ್ದು, ಆಸ್ತಿ ವಶಕ್ಕೆ ತೆಗೆದುಕೊಂಡಿರುವುದನ್ನು ಅದರಲ್ಲಿ ಲಗತ್ತಿಸಲಾಗಿದೆ.

ನವದೆಹಲಿ-3 ಜೋರ್‍ಬಾಗ್ 115- ಎ ಬ್ಲಾಕ್ 172ಯಲ್ಲಿರುವ ಸ್ಥಿರಾಸ್ತಿಯನ್ನು ಕಳೆದ ವರ್ಷ ಆಕ್ಟೋಬರ್ 10 ರಂದು ಜಾರಿ ನಿರ್ದೇಶನಾಲಯ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು.

2007ರಲ್ಲಿ 305 ಕೋಟಿ ರೂ.ಗಳ ಅಕ್ರಮ ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟು 3.5 ಕೋಟಿ ರೂ. ಲಂಚ ಪಡೆದ ಆರೋಪ ಕಾರ್ತಿ ಚಿದಂಬರಂ ಮೇಲಿದೆ. ಆಗ ಪಿ.ಚಿದಂಬರಂ ಅವರು ಕೇಂದ್ರ ಸಚಿವರಾಗಿದ್ದರು.