ಬೆಂಗಳೂರು,ಜು.14- ಹಿಂದೂಗಳ ಪವಿತ್ರ, ಧಾರ್ಮಿಕ ಶ್ರದ್ಧಾಕೇಂದ್ರ ಕಾಶಿಯಾತ್ರೆಗೆ ಹೊರಡುವ ಭಕ್ತಾದಿಗಳಿಗೆ ರಾಜ್ಯ ಸರ್ಕಾರ ಉಚಿತವಾಗಿ ಆರ್ಥಿಕ ನೆರವು ನೀಡುವ ಕಾಶಿಯಾತ್ರೆ ಯೋಜನೆಗೆ ಇಂದು ಚಾಲನೆ ನೀಡಲಾಯಿತು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಜರಾಯಿ ಇಲಾಖೆ ಸಚಿವೆ ಶಶಿಕಲಾಜೊಲ್ಲೆ ಸೇರಿದಂತೆ ಮತ್ತಿತರರು ಈ ಯೋಜನೆಗೆ ಚಾಲನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಕಾಶಿ ಕಾರಿಡಾರ್ಗೆ ಕರ್ನಾಟಕದ ಯಾತ್ರಿಗಳು ಭೇಟಿ ನೀಡುವುದನ್ನು ಪೊ್ರೀತ್ಸಾಹಿಸಲು ಕಳೆದ ಬಜೆಟ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಯೋಜನೆಯನ್ನು ಘೋಷಣೆ ಮಾಡಿದ್ದರು.
ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಅರ್ಹ ಯಾತ್ರಾರ್ಥಿಗಳಿಗೆ ತಲಾ 5000 ಸಹಾಯಧನ ನೀಡಲಾಗುವುದು. ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಧನಸಹಾಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಈ ಉದ್ದೇಶಕ್ಕಾಗಿ ಯಾವುದಾದರೂ ಒಂದು ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸಬೇಕು.
ಕೇಂದ್ರ ಸರಕಾರದ `ಭಾರತ ಗೌರವ’ ಯೋಜನೆಯ ಅಡಿಯಲ್ಲಿ ಮುಜರಾಯಿ ಇಲಾಖೆಯ ರೈಲ್ವೇ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಕಾಶಿಗೆ ವಿಶೇಷ ರೈಲಿನ ಕಾರ್ಯಾಚರಣೆ ಸದ್ಯದಲ್ಲೇ ಪ್ರಾರಂಭಿಸಲು ಸಿದ್ದತೆಗಳನ್ನು ಭರದಿಂದ ಮಾಡಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ರೈಲ್ವೇ ಇಲಾಖೆಯಲ್ಲಿ ನೊಂದಣಿ ಮಾಡಿಸಿದ್ದು ಇನ್ನು ಕೆಲವೇ ತಿಂಗಳುಗಳಲ್ಲಿ ಯೋಜನೆ ಕಾರ್ಯಗತಗೊಳ್ಳಲಿದೆ.
ಇದರಿಂದ ಕಾಶಿ ಯಾತ್ರೆ ಕೈಗೊಂಡಿದ್ದ ರಾಜ್ಯದ ಸಾವಿರಾರು ಯಾತ್ರಾರ್ಥಿಗಳಿಗೆ 5,000ರೂ. ಸಹಾಯಧನ ಸಿಗಲಿದೆ. ವಾರ್ಷಿಕ 30,000 ಯಾತ್ರಾರ್ಥಿಗಳಿಗೆ ಐದು ಸಾವಿರ ಸಹಾಯಧನ ನೀಡುವ ಯೋಜನೆ ಜಾರಿಗೊಳಿಸಿದೆ. ಪ್ರಸಕ್ತ ವರ್ಷ 2022ರ ಏ.1ರಿಂದ ಜೂನ್ 30ರವೆರೆಗೆ ಕಾಶಿಯಾತ್ರೆ ಕೈಗೊಂಡ 18ವರ್ಷ ಮೇಲ್ಪಟ್ಟವರು ಅಗತ್ಯ ದಾಖಲೆ ಸಲ್ಲಿಸಿ ಸರ್ಕಾರದಿಂದ ಸಹಾಯಧನ ಪಡೆಯಬಹುದು.
ರಾಜ್ಯದ ನಿವಾಸಿಗಳನ್ನು ಕಾಶಿ ವಿಶ್ವನಾಥ ಸ್ವಾಮಿಯ ದೇವಾಲಯಕ್ಕೆ ತೆರಳಲು (ಕಾಶಿಯಾತ್ರೆ) ಉತ್ತೇಜಿಸುವ ನಿಟ್ಟಿನಲ್ಲಿ ಈ ಯೋಜನೆ ಏ.1ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ತಂದಿದೆ. ಪ್ರತಿ ವರ್ಷ ಕಾಶಿಯಾತ್ರೆ ಮಾಡುವ 18 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಪ್ರಸ್ತುತ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಸಹಾಯಧನ ಪಡೆಯಲು ಬೇಕಾದ ಅರ್ಹತೆಗಳೇನು?:
ಕಳೆದ ಏಪ್ರಿಲ್ 1ಕ್ಕೆ 18ವರ್ಷ ವಯಸ್ಸು ಪೂರೈಸಿದ ಹಾಗೂ ಕರ್ನಾಟಕ ನಿವಾಸಿಗಳು ಮಾತ್ರ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಈ ಸಂಬಂಧ ಪೂರಕ ದಾಖಲೆಗಳನ್ನು ಧಾರ್ಮಿಕ ದತ್ತಿ ಇಲಾಖೆಗೆ ಸಲ್ಲಿಸಿ ಹಣ ಪಡೆಯಬಹುದು.
ಏ.1ರಿಂದ ಜೂ.30ರೊಳಗೆ ಕಾಶಿ ವಿಶ್ವನಾಥನ ಭಕ್ತರು ಕಾಶಿಗೆ ತೆರಳಲು ಮುಂಗಡವಾಗಿ ಕಾಯ್ದಿರಿಸಿದ ಅಥವಾ ದೇವಾಲಯಕ್ಕೆ ಹೋಗಿ ಬಂದ ಬಗ್ಗೆ ಟಿಕೆಟ್, ಪೂಜಾ ರಶೀದಿ ಸೇರಿದಂತೆ ದೇವಾಲಯಕ್ಕೆ ತೆರಳಿ ಬಂದ ಯಾವುದೇ ದಾಖಲೆಗಳನ್ನು ಒದಗಿಸಬೇಕು. ವಯಸ್ಸು ಹಾಗೂ ಅವರು ರಾಜ್ಯ ನಿವಾಸಿಯೇ ಎಂಬುದಕ್ಕೆ ಆಧಾರ್, ಮತದಾನದ ಗುರುತಿನ ಚೀಟಿ, ಪಡಿತರ ಚೀಟಿ ಯನ್ನು ಧಾರ್ಮಿಕ ಇಲಾಖೆ ಆಯುಕ್ತರ ಕಚೇರಿಗೆ ಸಲ್ಲಿಸಬೇಕು.
ಬಯೊಮೆಟ್ರಿಕ್ ಕಡ್ಡಾಯ:
ಇನ್ನು ಜುಲೈ 1ರಿಂದ ಯಾತ್ರೆ ಕೈಗೊಳ್ಳುವವರು ಸಂಬಂಸಿದ ದಾಖಲೆಗಳನ್ನು ವಾರಣಾಸಿಯ ಕರ್ನಾಟಕ ರಾಜ್ಯಛತ್ರದ ಕಚೇರಿ ವ್ಯವಸ್ಥಾಪಕ ಕಚೇರಿಯಲ್ಲಿ ಬಯೋಮೆಟ್ರಿಕ್ ದೃಢೀಕರಣದ ವಿವರಗಳ ಸಹಿತ ಆನ್ಲೈನ್ ಮೂಲಕ ಇಲ್ಲವೇ ಖುದ್ದು ಭೇಟಿ ನೀಡಿ ಧಾರ್ಮಿಕ ಇಲಾಖೆ ಆಯುಕ್ತರಿಗೆ ಸಲ್ಲಿಸಬೇಕಿದೆ.
ಬಯೋಮೆಟ್ರಿಕ್ ಇಲ್ಲದ್ದಿದ್ದರೆ ಅಂತವರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಒಬ್ಬರು ಒಂದು ಬಾರಿ ಮಾತ್ರ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಸಹಾಯಧನ ಪಡೆಯುವವರು ರಾಷ್ಟ್ರೀಕೃತ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವುದು ಕಡ್ಡಾಯವಾಗಿದೆ ಎಂದು ಸರ್ಕಾರ ತಿಳಿಸಿದೆ.
ರಾಜ್ಯ ಸರ್ಕಾರ 2022-23ರ ಆಯವ್ಯಯದಲ್ಲಿ ಕಾಶಿ ಯಾತ್ರೆಗೆ ಪೊ್ರೀತ್ಸಾಹಿಸಲು ಸಹಾಯಧನ ನೀಡುವ ಬಗ್ಗೆ ಯೋಜನೆ ಘೋಷಿಸಿತ್ತು. ಅದರಂತೆ ಸಹಾಯಧನ ನೀಡಲು ಮಾರ್ಗಸೂಚಿ ನಿಯಮಗಳನ್ನು ರೂಪಿಸಿ ಇದೀಗ ತಾತ್ವಿಕ ಅನುಮೋದನೆ ನೀಡಿ ಆದೇಶಿಸಿದೆ. ಉದ್ದೇಶಿತ 30,000 ಯಾತ್ರಾರ್ಥಿಗಳಿಗಾಗಿ ಒಟ್ಟು 15ಕೋಟಿ ರು. ಅನುದಾನ ಮಂಜೂರು ಮಾಡುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಕೋರಿದ್ದಾರೆ.
ವಿಶೇಷ ರೈಲು ವ್ಯವಸ್ಥೆ:
ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಈಗಾಗಲೇ ಕೇಂದ್ರ ರೈಲ್ವೆ ಇಲಾಖೆ ಅಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಚರ್ಚಿಸಲಾಗಿದೆ. ಆದಷ್ಟು ಬೇಗ ಆರಂಭವಾಗಲಿದೆ.ಯಾತ್ರಾರ್ಥಿಗಳು ಸಹಾಯಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ, ಅದೇ ವ್ಯಕ್ತಿಗೆ ಎರಡನೇ ಬಾರಿ ಅನುದಾನ ನೀಡಲು ಪರಿಗಣಿಸಲಾಗುವುದಿಲ್ಲ.
ಸರ್ಕಾರದ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಯಾತ್ರಾರ್ಥಿಗಳ ಬ್ಯಾಂಕ್ ಖಾತೆಯು ರಾಷ್ಟ್ರೀಕೃತ ಬ್ಯಾಂಕಿನ ಖಾತೆಯಾಗಿರಬೇಕು ಮತ್ತು ಕಡ್ಡಾಯವಾಗಿ ಆಧಾರ್ ಲಿಂಕ್ ಆಗಿರಬೇಕು. ಸಹಾಯಧನವನ್ನು ಯಾತ್ರೆಯನ್ನು ಪೂರ್ಣಗೊಳಿಸಿ ಸಂಬಂಧಿಸಿದ ದಾಖಲೆಗಳನ್ನು ನಿಗತ ನಮೂನೆ ಅರ್ಜಿಯನ್ನು ಭರ್ತಿ ಮಾಡಿ ಒದಗಿಸಿದ ನಂತರ ಅರ್ಜಿಗಳನ್ನು ಪರಿಶೀಲಿಸಿ ಅನುದಾನ ಮಂಜೂರು ಮಾಡುತ್ತಾರೆ.
ಅಗತ್ಯ ದಾಖಲಾತಿಗಳು:
ಕರ್ನಾಟಕ ರಾಜ್ಯ ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಅಥವಾ ಆಧಾರ್ ಗುರುತಿನ ಚೀಟಿ ಅಥವಾ ರೇಷನ್ ಕಾರ್ಡ್, ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಕರ್ನಾಟಕ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ (ಏಪ್ರಿಲ್ 1 ಕ್ಕೆ) 18 ವರ್ಷ ಪೂರ್ಣಗೊಂಡಿರಬೇಕು.
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. 18 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಹಾಜರುಪಡಿಸಬೇಕು. 2022ರ ಏಪ್ರಿಲ್ 1ರಿಂದ ಜೂನ್ 30ರವರೆಗೆ ಕಾಶಿ ಶ್ರೀ ವಿಶ್ವನಾಥ ಸ್ವಾಮಿಯ ದರ್ಶನಕ್ಕೆ ತೆರಳಿದ ಯಾತ್ರಾರ್ಥಿಗಳು ಸಂಬಂಸಿದ ದಾಖಲಾತಿಗಳನ್ನು ಖುದ್ದಾಗಿ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಇವರ ಕಚೇರಿಗೆ ಸಲ್ಲಿಸಬೇಕು.