ಶ್ರೀನಗರ,ಆ.17- ಜಮ್ಮು ಕಾಶ್ಮೀರದ ಸೋಫಿಯಾನ್ ಜಿಲ್ಲೆಯಲ್ಲಿ ಕಾಶ್ಮೀರಿ ಪಂಡಿತನನ್ನು ಹತ್ಯೆ ಮಾಡಿದ ಉಗ್ರ ಅದಿಲ್‍ವಾನಿ ಮನೆಯನ್ನು ಜಪ್ತಿ ಮಾಡ ಲಾಗಿದ್ದು, ತಂದೆ ಮತ್ತು ಸಹೋದರರನ್ನು ಬಂಧಿಸಲಾಗಿದೆ. ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕಲು ಬಿಗಿ ಕ್ರಮಗಳನ್ನು ಕೈಗೊಂಡಿರುವ ಜಮ್ಮುಕಾಶ್ಮೀರ ಆಡಳಿತ ಮಂಗಳವಾರ ನಡೆದ ಕಾಶ್ಮೀರಿ ಪಂಡಿತ್ ಸುನೀಲ್‍ಕುಮಾರ್ ಭಟ್ ಹತ್ಯೆ ಪ್ರಕರಣದಲ್ಲಿ ಕ್ಷಿಪ್ರ ಕಾರ್ಯಾಚರಣೆ ಆರಂಭಿಸಿದೆ.
ಅದಿಲ್‍ವಾನಿ ಅಮಾನುಷವಾಗಿ ಗುಂಡಿನ ದಾಳಿ ನಡೆಸಿ ಸುನೀಲ್‍ಕುಮಾರ್ ಭಟ್‍ನನ್ನು ಹತ್ಯೆ ಮಾಡಿದ್ದನ್ನು ಕಣ್ಣಾರೆ ಕಂಡ ಪ್ರತ್ಯಕ್ಷ ಸಾಕ್ಷಿಗಳು ಪೊಲೀಸರಿಗೆ ಹೇಳಿಕೆ ನೀಡಿವೆ. ಅದನ್ನು ಆಧರಿಸಿ ಉಗ್ರ ಅದಿಲ್‍ನನ್ನು ಪೊಲೀಸರು ಮತ್ತು ರಕ್ಷಣಾ ಪಡೆಗಳು ಬೆನ್ನತ್ತಿವೆ. ಕುತ್ವಾರದಲ್ಲಿರುವ ಆತನ ಮನೆಯನ್ನು ಸುತ್ತುವರೆದಾಗ ಆರೋಪಿ ಗ್ರೇನೆಡ್ ಎಸೆದು ಕತ್ತಲಿನಲ್ಲಿ ಪರಾರಿಯಾಗಿ ತಲೆಮರೆಸಿಕೊಂಡಿದ್ದಾನೆ.
ಬಳಿಕ ಪೊಲೀಸರು ಆರೋಪಿಗೆ ಆಶ್ರಯ ನೀಡಿದ ಆರೋಪದ ಮೇಲೆ ಆತನ ತಂದೆ ಮತ್ತು ಮೂವರು ಸಹೋದರರನ್ನು ಬಂಧಿಸಿದ್ದಾರೆ. ಯುಎಪಿಎ ಕಾಯ್ದೆ ಸೆಕ್ಷನ್ 2(ಜಿ) ಮತ್ತು 25ರ ಅನ್ವಯ ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುವ ಉಗ್ರರಿಗೆ ಆಶ್ರಯ ನೀಡುವ ಆರೋಪಿಗಳ ಚಿರಾಸ್ತಿಗಳನ್ನು ಜಪ್ತಿ ಮಾಡಲು ಅವಕಾಶವಿದೆ.
ಅದನ್ನು ಬಳಸಿಕೊಂಡಿರುವ ಪೊಲೀಸರು ಅದಿಲ್‍ನ ಮನೆಯನ್ನು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.