ಜನರ ಜೀವನಾಡಿ KRS ವಿಚಾರದಲ್ಲಿ ಹಗುರ ಹೇಳಿಕೆ ಬೇಡ

ಕೆಆರ್‍ಎಸ್ ಜಲಾಶಯ ಬಿರುಕು ಬಿಟ್ಟಿದೆ ಎಂಬ ವಿಚಾರ ಮಂಡ್ಯ ಜಿಲ್ಲೆಯ ಜನರಿಗೆ ಮಾತ್ರವಲ್ಲ; ರಾಜಧಾನಿ ಬೆಂಗಳೂರು ಸೇರಿದಂತೆ ಕಾವೇರಿ ನದಿ ಪಾತ್ರದ ಜನರಿಗೆ ಬರಸಿಡಿಲು ಬಡಿದಂತಾಗಿದೆ. ಇದರಿಂದ ಜನರು ಭಯಭೀತರಾಗಿ ನಿದ್ದೆಗೆಡುವಂತೆ ಮಾಡಿದೆ. ಏಕೆಂದರೆ, ಮಂಡ್ಯ ಜಿಲ್ಲೆಯ ರೈತರು ಈ ಜಲಾಶಯದ ನೀರನ್ನೇ ನಂಬಿ ಬೇಸಾಯ ಮಾಡುತ್ತಾರೆ. ಅವರ ಬದುಕು ಕೂಡ ಇದರೊಂದಿಗೆ ಬೆರೆತುಕೊಂಡಿದೆ. ಅಲ್ಲದೆ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಭಾಗದ ಜನರ ಕುಡಿಯುವ ನೀರಿನ ಪ್ರಮುಖ ಮೂಲವೇ ಕಾವೇರಿ ನದಿ. ಹೀಗಾಗಿ ಲಕ್ಷಾಂತರ ರೈತರು ಹಾಗೂ ಕೋಟ್ಯಂತರ ಜನರು ಕಾವೇರಿ ನದಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.

ನಾಡಿನ ಜನರ ಜೀವನಾಡಿಯಾಗಿರುವ ಕಾವೇರಿ ನದಿ ಯಾವುದಾದರೊಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಕಾವೇರಿ ಮತ್ತು ಕನ್ನಂಬಾಡಿ ವಿಚಾರದಲ್ಲಿ ನಾಡಿನ ಜನರಿಗೆ ಭಾವನಾತ್ಮಕ ಸಂಬಂಧವಿದೆ. ನದಿ ಮತ್ತು ಜಲಾಶಯದ ವಿಚಾರದಲ್ಲಿ ಜನರು ತಕ್ಷಣ ಸ್ಪಂದಿಸುತ್ತಾರೆ. ಧಕ್ಕೆಯಾಗುವ ವಿಚಾರ ಬಂದಾಗ ಜನರು ಸಿಡಿದೇಳುತ್ತಾರೆ. ಕಾವೇರಿ ನದಿ ಸದಾ ಒಂದಿಲ್ಲೊಂದು ವಿವಾದ ಹಾಗೂ ಸಂಘರ್ಷದ ಕೇಂದ್ರವಾಗಿರುವುದು ಮತ್ತೊಂದು ವಿಶೇಷ. ಕೆಆರ್‍ಎಸ್ ಜಲಾಶಯ ಈ ನದಿಗೆ ನಿರ್ಮಿಸಿರುವ ಕೃಷ್ಣರಾಜಸಾಗರ ಜಲಾಶಯವೂ ವಿಶ್ವವಿಖ್ಯಾತಿ. ಕೇವಲ ಮಂಡ್ಯ ಜಿಲ್ಲೆಗೆ ಸೀಮಿತವಲ್ಲ. ಹಲವು ಜಿಲ್ಲೆಗಳ ಜನರ ಜೀವನಾಡಿ.

ಕೆಆರ್‍ಎಸ್ ಜಲಾಶಯಕ್ಕೆ ಬಿರುಕು ಬಿಟ್ಟಿದೆ ಎಂಬ ವಿಚಾರ ಮಂಡ್ಯ ಜಿಲ್ಲೆಯ ಜನರಿಗೆ ಮಾತ್ರವಲ್ಲ; ರಾಜಧಾನಿ ಬೆಂಗಳೂರು ಸೇರಿದಂತೆ ಕಾವೇರಿ ನದಿ ಪಾತ್ರದ ಜನರಿಗೆ ಬರಸಿಡಿಲು ಬಡಿದಂತಾಗಿದೆ. ಇದರಿಂದ ಜನರು ಭಯಭೀತರಾಗಿ ನಿದ್ದೆಗೆಡುವಂತೆ ಮಾಡಿದೆ. ಏಕೆಂದರೆ, ಮಂಡ್ಯ ಜಿಲ್ಲೆಯ ರೈತರು ಈ ಜಲಾಶಯದ ನೀರನ್ನೇ ನಂಬಿ ಬೇಸಾಯ ಮಾಡುತ್ತಾರೆ. ಅವರ ಬದುಕು ಕೂಡ ಇದರೊಂದಿಗೆ ಬೆರೆತುಕೊಂಡಿದೆ. ಅಲ್ಲದೆ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಭಾಗದ ಜನರ ಕುಡಿಯುವ ನೀರಿನ ಪ್ರಮುಖ ಮೂಲವೇ ಕಾವೇರಿ ನದಿ. ಹೀಗಾಗಿ ಲಕ್ಷಾಂತರ ರೈತರು ಹಾಗೂ ಕೋಟ್ಯಂತರ ಜನರು ಕಾವೇರಿ ನದಿ ನೀರಿನ ಮೇಲೆ ಅವಲಂಬಿತರಾಗಿದ್ದಾರೆ.

ಕಾವೇರಿ ನದಿ ಹಾಗೂ ಜಲಾಶಯಗಳು ಸೂಕ್ಷ್ಮ ಮತ್ತು ಭಾವನಾತ್ಮಕವಾಗಿರುವುದರಿಂದ ಯಾರೇ ಆದರೂ ಬಹಳ ಎಚ್ಚರಿಕೆಯಿಂದ ಪ್ರತಿಕ್ರಿಯಿಸಬೇಕು. ಈ ವಿಚಾರ ರಾಜಕೀಯದ ವಸ್ತು ಆಗಬಾರದು. ಕೆಆರ್‍ಎಸ್ ಜಲಾಶಯ ಕ್ಕೆ ಬಿರುಕು ಬಿಟ್ಟಿದೆ ಎಂದು ಮಂಡ್ಯ ಜಿಲ್ಲೆ ಸಂಸದರಾದ ಸುಮಲತಾ ಅಂಬರೀಶ್ ಹೇಳಿದ್ದಾರೆಂಬ ವಿಚಾರ ಬಹು ಚರ್ಚೆಗೆ ಗ್ರಾಸವಾಗಿದೆ. ಅಷ್ಟೇ ಅಲ್ಲ; ಕೋಟ್ಯಂತರ ಜನರಲ್ಲಿ ಭಯ ಭೀತಿಯನ್ನು ಹುಟ್ಟಿಸಿದೆ. ಜಲಾಶಯ ಗೋಡೆಯಲ್ಲಿ ಯಾವುದೇ ಬಿರುಕು ಬಿಟ್ಟಿಲ್ಲ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸ್ಪಷ್ಟನೆ ನೀಡಿರುವುದು ಸದ್ಯಕ್ಕೆ ಸಮಾಧಾನ ತಂದಿದೆ.

ಶತಮಾನದ ಹೊಸ್ತಿಲಲ್ಲಿರುವ ಕೆಆರ್‍ಎಸ್ ಜಲಾಶಯದ ವಿಚಾರದಲ್ಲಿ ಯಾರೊಬ್ಬರೂ ಹುಡುಗಾಟಿಕೆ ತೋರಬಾರದು ಎಂಬುದು ಸಾರ್ವಜನಿಕರ ಅಭಿಪ್ರಾಯ. ಸಂಸದರಾದರೂ ವಾಸ್ತವ ಸ್ಥಿತಿ ಅರಿತು ಮಾತನಾಡಬೇಕಿತ್ತು. ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದು ಹೇಳಬೇಕೇ ಹೊರತು ಗಾಳಿಯಲ್ಲಿ ಗುಂಡು ಹಾರಿಸಿದಂತೆ ಮಾತನಾಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಮಂಡ್ಯದ ಸಂಸದರರಿಗೆ ಯಾವುದೇ ಪಕ್ಷದ ಚೌಕಟ್ಟಿಲ್ಲ. ಹೀಗಾಗಿ ಅವರು ಸ್ವತಂತ್ರವಾದ ಹೇಳಿಕೆ ನೀಡುತ್ತಾರೆ. ಒಂದು ವೇಳೆ ಯಾವುದೇ ಒಂದು ಪಕ್ಷದಿಂದ ಸ್ಪರ್ಧಿಸಿ ಚುನಾಯಿತರಾಗಿದ್ದರೆ, ಆ ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧವಾಗಿರಬೇಕಾಗುತ್ತದೆ. ಆಗ ತಮ್ಮಿಚ್ಚೆಯಂತೆ ಹೇಳಿಕೆ ನೀಡಲಾಗದು. ಹೇಳಿಕೆಯಲ್ಲಿ ಅಲ್ಪ-ಸ್ವಲ್ಪ ವ್ಯತ್ಯಾಸವಾದರೂ ವರಿಷ್ಠರು ಗಮನ ಹರಿಸುತ್ತಾರೆ. ಶಿಸ್ತುಕ್ರಮ ಕೈಗೊಳ್ಳುತ್ತಾರೆ ಎಂಬ ಭಯ ಕಾಡುತ್ತದೆ.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಚುನಾಯಿತರಾಗಿ ರುವ ಸುಮಲತಾ ಅವರಿಗೆ ಯಾವುದೇ ಪಕ್ಷದ ಕಟ್ಟುಪಾಡುಗಳಿಲ್ಲ. ಹೀಗಾಗಿ ಅಪ್ರಬುದ್ಧತೆ ರೀತಿಯಲ್ಲಿ ಮಾತನಾಡುತ್ತಾರೆ ಎಂಬ ಅಭಿಪ್ರಾಯ ಸಾರ್ವಜನಿಕರಲ್ಲಿದೆ. ಸ್ವತಃ ಕಲಾವಿದರಾಗಿರುವ ಅವರಿಗೆ ರಾಜಕೀಯ ಹೊಸದಲ್ಲ. ಆದರೂ ರಾಜಕೀಯ ಮತ್ತು ಆಡಳಿತದ ಅನುಭವದ ಕೊರತೆ ಇದ್ದರೆ, ರಾಜಕೀಯ ಮುತ್ಸದ್ದಿಗಳ ಸಲಹೆ ಪಡೆಯಬಹುದು. ಇಲ್ಲವೆ, ಅನುಭವಿ ಆಡಳಿತಗಾರರ ಸಲಹೆ ಪಡೆಯಬಹುದು. ಚುನಾಯಿತ ಜನಪ್ರತಿ ನಿಧಿಗಳು ಜನರ ನಾಡಿಮಿಡಿತ ಚೆನ್ನಾಗಿ ಅರಿತಿರಬೇಕು. ಅವರ ಭಾವನೆಗಳಿಗೆ ಧಕ್ಕೆಯಾಗುವಂತಹ ವಿಚಾರಗಳಿಂದ ದೂರ ಉಳಿಯಬೇಕು. ಅವರ ಹಿತಾಸಕ್ತಿಗೆ ಧಕ್ಕೆಯಾದಾಗ ಬೆನ್ನೆಲುಬಾಗಿ ನಿಲ್ಲಬೇಕು.

ಕೆಆರ್‍ಎಸ್ ಜಲಾಶಯ ಬಿರುಕು ಬಿಟ್ಟಿದೆ ಎಂಬ ಸುದ್ದಿ ಜನರ ನಿದ್ದೆಗೆಡಿಸಿದೆ. ಅಲ್ಲದೆ, ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಇದು ಹಗುರವಾದ ವಿಚಾರವಲ್ಲ. ಇಂಥ ಗಹನವಾದ ವಿಚಾರ ಪ್ರಸ್ತಾಪ ಮಾಡುವ ಮುನ್ನ ಹತ್ತಾರು ಬಾರಿ ಯೋಚಿಸಬೇಕಿತ್ತು. ಸಂಸದರಂತಹ ಜವಾಬ್ದಾರಿ ಸ್ಥಾನದಲ್ಲಿರು ವವರು ಆ ಸ್ಥಾನದ ಘನತೆ ಗೌರವವನ್ನು ತಾವಾಡುವ ಮಾತುಗಳಿಂದ ಕಾರ್ಯವೈಖರಿಯಿಂದ ಹೆಚ್ಚಿಸಬೇಕೇ ಹೊರತು ವಿವಾದಕ್ಕೆ, ಸಂಘರ್ಷಕ್ಕೆ ಎಡೆ ಮಾಡಿಕೊಡಬಾರದು. ಪೂರ್ಣ ಮಾಹಿತಿ ಇದ್ದು ಪ್ರಸ್ತಾಪ ಮಾಡಿದ್ದರೆ, ಅದನ್ನು ರುಜುವಾತು ಮಾಡಿ ತೋರಿಸಬೇಕಾಗಿತ್ತು. ವಿಷಯಾಂತರ ಮಾಡಬಾರದು ಎಂಬುದು ಸಾರ್ವಜನಿಕವಾಗಿ ಚರ್ಚಿತವಾಗುತ್ತಿರುವ ವಿಚಾರ.

ಕೆಆರ್‍ಎಸ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದಿರುವ ಸಂಸದರು, ಕೆಆರ್‍ಎಸ್ ಅಣೆಕಟ್ಟು ಕುರಿತಂತೆ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕೆಆರ್‍ಎಸ್ ಸುತ್ತಮುತ್ತ ನಡೆಯುವ ಸ್ಫೋಟದಿಂದ ಅಣೆಕಟ್ಟೆಗೆ ಧಕ್ಕೆಯಾಗುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಏನೇ ಇದ್ದರೂ ಇಂಥ ಗಂಭೀರ ವಿಷಯದಲ್ಲಿ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡ ಬಾರದು. ಮಾಜಿ ಸಚಿವ ಹಾಗೂ ನಟ ಅಂಬರೀಷ್ ಅವರು ಎಂದೂ ವಿವಾದಕ್ಕೆ ಆಸ್ಪದ ನೀಡಿರಲಿಲ್ಲ. ಕೆಲವೊಂದು ಬಿಕ್ಕಟ್ಟು ಎದುರಾದಾಗ ಅಂಬರೀಷ್ ಅವರೇ ಮುಂದೆ ನಿಂತು ಬಗೆಹರಿಸಿರುವ ನಿದರ್ಶನಗಳಿವೆ. ಶತ್ರು-ಮಿತ್ರರಿಗಿಂತ ಹೆಚ್ಚಾಗಿ ಅವರು ಜನರ ಪ್ರೀತಿ-ವಿಶ್ವಾಸಕ್ಕೆ ಪಾತ್ರರಾಗಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ.

ಅವರಂತೆ ಆಡಳಿತದ ಮೂಲಕ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಮಾದರಿ ಎಂಬುದನ್ನು ಮಾಡಿ ತೋರಿಸುವಂತಹ ಅವಕಾಶವನ್ನು ಮಂಡ್ಯದ ಜನತೆ ಮಾಡಿಕೊಟ್ಟಿದ್ದಾರೆ. ಅದನ್ನು ಸದ್ಬಳಕೆ ಮಾಡಿಕೊಂಡು ವಿವಾದದಿಂದ ದೂರ ಉಳಿದು ಜನ ಕಲ್ಯಾಣ ಹಾಗೂ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಸಂಸದರು ಆದ್ಯತೆ ನೀಡುವುದು ಸೂಕ್ತ ಎಂಬ ಅಭಿಪ್ರಾಯವಿದೆ.

ಕಂಪನದ ಬಗ್ಗೆ ವಿಶ್ಲೇಷಣೆ ಅಗತ್ಯ….
ಕೆಆರ್‍ಎಸ್ ಡ್ಯಾಮ್ ಸೈಟ್(ಪ್ರದೇಶ)ನಲ್ಲಿ ಅಳವಡಿಸಿರುವ ಭೂಕಂಪನ ಮಾಪಕದಲ್ಲಿನ ಡಾಟಾವನ್ನು ವಿಶ್ಲೇಷಣೆ ಮಾಡಿದರೆ ವಾಸ್ತವಾಂಶ ತಿಳಿಯುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರದ ಸಂಸ್ಥಾಪಕ ಹಾಗೂ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ. ಕೆಆರ್‍ಎಸ್ ಡ್ಯಾಮ್ ಸೈಟಿನಲ್ಲಿ ಟ್ರೈಆ್ಯಕ್ಸಿಯಲ್ ಬ್ರಾಡ್‍ಬ್ಯಾಂಡ್ ಸೆಸಿಮಿ ಮೀಟರ್ ಅಳವಡಿಸಿದ್ದು, ಅದು ಭೂಮಿಯಲ್ಲಿ ಉಂಟಾಗುವ ಯಾವುದೇ ರೀತಿಯ ಕಂಪನವನ್ನು ದಾಖಲಿಸುತ್ತದೆಸ ಮೈಕ್ರೋ ಸೆಕೆಂಡ್‍ನಲ್ಲಿ ಉಂಟಾಗುವಂತಹ ಕಂಪನವನ್ನೂ ದಾಖಲಿಸಲಿದೆ. ಉಪಗ್ರಹ ಆಧಾರಿತ ಮಾಹಿತಿಯನ್ನು ಒದಗಿಸುತ್ತದೆ.

ಇದು ಮೇಲೆ-ಕೆಳಗೆ, ಅಡ್ಡಡ್ಡ ಹಾಗೂ ಹಿಂದು-ಮುಂದಕ್ಕೆ ಆಗು ವಂತಹ ಕಂಪನವನ್ನು ದಾಖಲಿಸಲಿದೆ. ಅದು ಒದಗಿಸಿರುವ ಡಾಟಾಗಳನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ಕೆಆರ್‍ಎಸ್ ಜಲಾಶಯದ ಸುರಕ್ಷತೆಯ ವಿಚಾರ ಸ್ಪಷ್ಟವಾಗಲಿದೆ ಎಂದು ಹೇಳಿದ್ದಾರೆ. ತಾವು ನಿವೃತ್ತಿಯಾಗುವವರೆಗೂ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದೆವು. ಈಗ ಯಾವ ಸ್ಥಿತಿಯಲ್ಲಿ ಇದೆ ಎಂಬುದನ್ನು ಹೇಳಲಾಗದು. ಕೆಆರ್‍ಎಸ್ ಸೇರಿದಂತೆ ರಾಜ್ಯದ 14 ಕಡೆಗಳಲ್ಲಿ ಭೂಕಂಪನ ಮಾಪಕಗಳನ್ನು ಅಳವಡಿಸಲಾಗಿತ್ತು. ಅವುಗಳ ಮೂಲಕ ಭೂಮಿಯಲ್ಲಿ ಆಗುವ ಕಂಪನ ಅಧ್ಯಯನ ಮಾಡುವ ಅತ್ಯುತ್ತಮ ವ್ಯವಸ್ಥೆಯೂ ಆಗಿತ್ತು. ಕೆಆರ್‍ಎಸ್ ಡ್ಯಾಮ್ ಸೈಟ್‍ನಲ್ಲಿ ಅಳವಡಿಸಿರುವ ಮಾಪಕದ ಮಾಹಿತಿಯನ್ನು ಸಂಬಂಧಪಟ್ಟ ಪರಿಣಿತ ಸಮಿತಿ ಗಮನಿಸಿ ಸುರಕ್ಷಿತವಾಗಿರುವ ವಿಚಾರವನ್ನು ಹೇಳಿರಬಹುದು ಎಂದು ಅವರು ತಿಳಿಸಿದ್ದಾರೆ.

ಪರಿಶೀಲನೆಗೆ ತಜ್ಞರ ತಂಡ: 
ಕೆಆರ್‍ಎಸ್ ಅಣೆಕಟ್ಟೆ ಬಿರುಕುಬಿಟ್ಟಿಲ್ಲ ಎಂದು ಈ ಭಾಗದ ತಜ್ಞರು ವರದಿ ಕೊಟ್ಟಿದ್ದಾರೆ. ಆ ವರದಿಯನ್ನು ನಂಬಬೇಕೆ ಹೊರತು ಬೇರೆಯವರ ಮಾತನ್ನು ನಂಬಲು ಸಾಧ್ಯವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಅಣೆಕಟ್ಟೆ ಬಿರುಕುಬಿಟ್ಟಿದೆ ಎಂಬ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಜನರಲ್ಲಿ ಆತಂಕ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಇಡೀ ಅಣೆಕಟ್ಟು ಪರಿಶೀಲಿಸಿ ವರದಿ ಸಲ್ಲಿಸುವಂತೆ ತಜ್ಞರ ತಂಡವನ್ನು ಕಳುಹಿಸಲು ಸೂಚಿಸುವುದಾಗಿ ಅವರು ಹೇಳಿದ್ದಾರೆ.

ಜಲಾಶಯದ ಕೆಳಭಾಗದಲ್ಲಿ ವಾಸಿಸುವ ಜನರು ಹಾಗೂ ರೈತರಿಗೆ ಉಂಟಾಗಿರುವ ಆತಂಕ ನಿವಾರಿಸಲು ತಜ್ಞರಿಂದ ಮತ್ತೊಮ್ಮೆ ವರದಿ ಪಡೆಯಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಣೆಕಟ್ಟೆ ಬಿರುಕು ಬಿಟ್ಟಿಲ್ಲ: 
ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಜೈಪ್ರಕಾಶ್ ಅವರು ಕೆಆರ್‍ಎಸ್ ಜಲಾಶಯದಲ್ಲಿ ಯಾವುದೇ ರೀತಿಯ ಬಿರುಕು ಬಿಟ್ಟಿಲ್ಲ. ಅಣೆಕಟ್ಟೆ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಣೆಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿ ಸದಸ್ಯರು ಹಾಗೂ ನೀರಾವರಿ ಇಲಾಖೆ ಮುಖ್ಯಸ್ಥರು ಅಣೆಕಟ್ಟೆಯನ್ನು ನಿಯಮಿತ ಅವಧಿಗಳಲ್ಲಿ ಪರಿವೀಕ್ಷಿಸಿ ವರದಿಗಳನ್ನು ಅಣೆಕಟ್ಟು ಭದ್ರತಾ ವಿಭಾಗಕ್ಕೆ ಸಲ್ಲಿಸಿದ್ದಾರೆ. ಅಣೆಕಟ್ಟೆಯ ಸುರಕ್ಷತೆ ಬಗ್ಗೆ ವರದಿಯಲ್ಲಿ ಪರಾಮರ್ಶೆ ಮಾಡಲಾಗಿದೆ ಎಂದು ಅವರು ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆಆರ್‍ಎಸ್ ಅಣೆಕಟ್ಟೆಯ ಬಾಡಿವಾಲ್‍ನಲ್ಲಿ ಯಾವುದೇ ತರಹದ ಬಿರುಕು ಇಲ್ಲದಿರುವ ಬಗ್ಗೆ ಮಳೆಗಾಲಕ್ಕೂ ಮುನ್ನ ಹಾಗೂ ಮಳೆಗಾಲಕ್ಕೂ ನಂತರ ನಡೆಸಿರುವ ಪರಿಶೀಲನಾ ವರದಿಯಿಂದ ಖಚಿತವಾಗಿದೆ. ಅಣೆಕಟ್ಟು ಸುರಕ್ಷತಾ ಸಮಿತಿ ಸದಸ್ಯರು ನೀಡಿರುವ ಸಲಹೆಗಳ ಆಧಾರದ ಮೇಲೆ ಅಣೆಕಟ್ಟೆ ಬಲವನ್ನು ವೃದ್ಧಿಸಲು ಅವಶ್ಯವಿರುವ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಹೊಸದಾಗಿ ಕಟ್ಟಡದ ಕಲ್ಲುಗಳ ಕೀಲುಗಳಿಗೆ ಪಾಯಿಂಟಿಂಗ್ ಮತ್ತು ಗ್ರೌಟಿಂಗ್ ಮಾಡಿ ಭದ್ರಗೊಳಿಸಲಾಗಿದೆ. ಅಣೆಕಟ್ಟೆಯಲ್ಲಿ ಯಾವುದೇ ರೀತಿಯ ಸ್ಟ್ರಕ್ಚರಲ್ ಡಿಫೆಕ್ಸ್ ಇರುವುದಿಲ್ಲ ಹಾಗೂ ಯಾವುದೇ ತರಹದ ಬಿರುಕುಗಳು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಣೆಕಟ್ಟೆಯ ಪುನಃಶ್ಚೇತನ ಕಾಮಗಾರಿಗೆ ವಿಶ್ವಬ್ಯಾಂಕ್ ಮತ್ತು ಕೇಂದ್ರ ಜಲ ಆಯೋಗದ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ದೊರೆತಿದೆ. ಜುಲೈ 2ರಂದು ಡಿಆರ್‍ಐಪಿ ಕನ್ಸಲ್ಟೆಂಟ್ ಹಾಗೂ ರಾಜ್ಯದ ಗೇಟ್ ಸಲಹಾ ಸಮಿತಿ ಸದಸ್ಯರು ಡ್ಯಾಮ್‍ನ 136 ಗೇಟುಗಳ ಬದಲಾವಣೆ ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿ ಅಣೆಕಟ್ಟೆಯ ಬಾಡಿವಾಲ್‍ನಲ್ಲಿ ಯಾವುದೇ ತಹದ ಸ್ಟ್ರಕ್ಚರಲ್ ಡಿಫೆಕ್ಸ್ ಇರುವುದಿಲ್ಲ ಎಂದು ತಿಳಿಸಿರುವುದಾಗಿ ಅವರು ಹೇಳಿದ್ದಾರೆ.

ಪರಿಣಿತರ ಸಮಿತಿ ರಚಿಸುವುದು ಸೂಕ್ತ
ಕೆಆರ್‍ಎಸ್ ಅಣೆಕಟ್ಟೆಯಲ್ಲಿ ಬಿರುಕು ಬಿಟ್ಟಿದೆ ಎಂಬ ವಿಚಾರ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ಇದನ್ನು ಲಘುವಾಗಿ ಪರಿಗಣಿಸುವುದಲ್ಲ. ಈ ವಿಚಾರದ ಗಂಭೀರತೆಯನ್ನು ಅರಿತು ಭಾರತೀಯ ವಿಜ್ಞಾನ ಸಂಸ್ಥೆಯಂತಹ ಪರಿಣಿತರ ಸಮಿತಿಯನ್ನು ಸರ್ಕಾರ ರಚನೆ ಮಾಡಿ ಕಾಲಮಿತಿಯಲ್ಲಿ ಪರಿಶೀಲನಾ ವರದಿ ಪಡೆಯುವುದು ಸೂಕ್ತ ಎಂದು ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆ ಸಮಿತಿಯು ವಸ್ತು ಸ್ಥಿತಿ ಅಧ್ಯಯನ ಮಾಡಿ ಸತ್ಯಾಂಶವನ್ನು ಹೊರ ಹಾಕಬೇಕು. ಇದು ರಾಜಕೀಯದಿಂದ ಹೊರತಾಗಿರಬೇಕು. ಸಾರ್ವಜನಿಕರಲ್ಲಿ ಉಂಟಾ ಗಿರುವ ಗೊಂದಲವನ್ನು ತಿಳಿಗೊಳಿಸಬೇಕು. ಏಕೆಂದರೆ ಲಕ್ಷಾಂತರ ಮಂದಿ ಬೇಸಾಯಕ್ಕೆ ಕೆಆರ್‍ಎಸ್ ಜಲಾಶಯದ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಬೆಂಗಳೂರು ಸೇರಿದಂತೆ ಕಾವೇರಿ ನದಿ ಪಾತ್ರದ ಹಲವು ಜಿಲ್ಲೆಗಳ ಕೋಟ್ಯಂತರ ಮಂದಿ ಕುಡಿಯುವ ನೀರಿಗೆ ಅವಲಂಬಿತವಾಗಿ ರುವುದರಿಂದ ಈ ವಿಚಾರವನ್ನು ಲಘುವಾಗಿ ಪರಿಗಣಿಸ ಬಾರದು. ಉಂಟಾಗಿರುವ ಸಂದೇಹವನ್ನು ಪರಿಹರಿಸಲು ಸರ್ಕಾರ ಮುಂದಾಗಬೇಕು ಎಂದು ಹೇಳಿದ್ದಾರೆ.

ಅಕ್ರಮ ಗಣಿಗಾರಿಕೆ ಇಲ್ಲ
ಕೆಆರ್‍ಎಸ್ ಅಣೆಕಟ್ಟಿನ ಸುತ್ತಮುತ್ತ ಹಾಗೂ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಸ್ಪಷ್ಟಪಡಿಸಿದ್ದಾರೆ.
ಕಳೆದ ನಾಲ್ಕು ತಿಂಗಳಿನಿಂದ ಕಾನೂನು ಬಾಹಿರವಾಗಿ ನಿಯಮಗಳನ್ನು ಉಲ್ಲಂಘಿಸಿ ಕಲ್ಲುಗಣಿಗಾರಿಕೆ ನಡೆಸುವುದನ್ನು ಸ್ಥಗಿತಗೊಳಿಸಲಾಗಿದೆ. ನಿಯಮ ಉಲ್ಲಂಘಿಸಿ ಕಲ್ಲುಗಣಿಗಾರಿಕೆ ಮಾಡಿದವರಿಗೆ ದಂಡ ವಿಧಿಸಿ ಯಾವುದೇ ರೀತಿಯ ಚಟುವಟಿಕೆ ನಡೆಸದಂತೆ ನಿರ್ಬಂಧ ವಿಧಿಸಿರುವುದಾಗಿ ಅವರು ಹೇಳಿದ್ದಾರೆ.

ಕೆಆರ್‍ಎಸ್ ಜಲಾಶಯದ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಚಟುವಟಿಕೆ ನಡೆಸದಂತೆ ಕ್ರಮ ಕೈಗೊಳ್ಳಲಾಗಿದೆ. ಕಳೆದ 70 ವರ್ಷಗಳಿಂದಲೂ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದೆ. ಮಂಡ್ಯ ಸಂಸದರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸರ್ಕಾರಕ್ಕೆ ನೀಡಿದರೆ ಸಮಗ್ರ ತನಿಖೆಗೆ ಆದೇಶಿಸುವುದಾಗಿಯೂ ಅವರು ತಿಳಿಸಿದ್ದಾರೆ.