ಬೆಂಗಳೂರು, ಫೆ.16- ಬಿಡಿಎ ವತಿಯಿಂದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 10ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಕಳೆದ ಐದು ವರ್ಷಗಳಿಂದ ಮೂಲಭೂತ ಸೌಲಭ್ಯ ಕಲ್ಪಿಸಲು ಕಾಮಗಾರಿ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶಾಸಕ ಎಸ್.ಸುರೇಶ್‍ಕುಮಾರ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮುಖ್ಯಮಂತ್ರಿಗಳು, ಕುಡಿಯುವ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆ, ಶುದ್ಧೀಕರಿಸಿದ ನೀರು ಸರಬರಾಜು ಯುಟಿಲಿಟಿ ಡಕ್ಟ್ ನಿರ್ಮಾಣ ಹಾಗೂ ವಿದ್ಯುತ್ ಕಾಮಗಾರಿಗಳು ನಡೆಯುತ್ತಿದ್ದು, ಎಲ್ ಆ್ಯಂಡ್ ಟಿ ಕನ್ಸ್‍ಟ್ರಕ್ಷನ್ ಸಂಸ್ಥೆ ಎಸ್‍ಪಿಎಂಎಲ್‍ಐಎಲ್-ಅಮೃತ ಕನ್ಸ್‍ಟ್ರಕ್ಷನ್ ಸಂಸ್ಥೆ ಗುತ್ತಿಗೆ ಕಾಮಗಾರಿ ನೀಡಲಾಗಿತ್ತು.
ಆದರೆ, ಅನುಷ್ಠಾನ ಸಂದರ್ಭದಲ್ಲಿ ಸ್ಥಳದ ಅವಶ್ಯಕತೆಗೆ ಅನುಸಾರವಾಗಿ ಹೆಚ್ಚುವರಿ ಪ್ರದೇಶಗಳು ಸೇರ್ಪಡೆಯಾಗಿದ್ದು, ಇದರಿಂದಾಗಿ ಕಳೆದ ಅಕ್ಟೋಬರ್ 13ರಂದು ಇದರ ಬಗ್ಗೆ ಪರಿಶೀಲಿಸಿ ಬಿಡಿಎ ವತಿಯಿಂದ ಥರ್ಡ್ ಪಾರ್ಟಿ ಸಂಸ್ಥೆಗಳಿಂದ ಕಾಮಗಾರಿ ಕುರಿತು ಸಭೆ ನಡೆಸಲಾಗಿದೆ.
ನಿವೇಶನ ಹಂಚಿಕೆಯಾಗಿ ಐದು ವರ್ಷ ಕಳೆದಿದ್ದರೂ ಯಾರೂ ಇಲ್ಲಿ ಮನೆ ನಿರ್ಮಿಸಿಲ್ಲ ಎಂದು ತಿಳಿಸಿದ್ದಾರೆ. ಬಡಾವಣೆ ನಿರ್ಮಾಣದ ಸಿವಿಲ್ ಕಾಮಗಾರಿಗಾಗಿ 714.12 ಕೋಟಿ ವೆಚ್ಚವಾಗಿದ್ದು, ಉಳಿದ 767.35 ಕೋಟಿ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ. ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆವರೆಗೆ ನಾಡಪ್ರಭು ಕೆಂಪೇಗೌಡರ ಬಡಾವಣೆ ಮುಖಾಂತರ ಹಾದು ಹೋಗುವ 10.35 ಕಿ.ಮೀ. ಉದ್ದದ ಮುಖ್ಯ ಸಂಪರ್ಕ ರಸ್ತೆಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.
