ಬೆಂಗಳೂರು,ಫೆ.10- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಗಮನಸೆಳೆಯುವಂತಹ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಾಣ ಮಾಡುತ್ತಿರುವ ಕೆಂಪೇಗೌಡರ ಪ್ರತಿಮೆಯ ಕಾಮಗಾರಿ ವಿಳಂಬವಾಗಿರುವುದು ನನ್ನ ಗಮನಕ್ಕೆ ಬಂದಿದೆ. ಸಂಬಂಧಪಟ್ಟವರನ್ನು ಕರೆದು ಕಾಮಗಾರಿಯನ್ನು ಚುರುಕುಗೊಳಿಸಲು ಸೂಚನೆ ನೀಡುವುದಾಗಿ ತಿಳಿಸಿದರು.
ಕೆಂಪೇಗೌಡರ ಪ್ರತಿಮೆಯ ನಿರ್ಮಾಣಕ್ಕೆ ಅನುದಾನ ಕೊರತೆಯಾಗಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಕಾರ ಅವಯಲ್ಲಿ ಘೋಷಿಸಿದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುತ್ತದೆ ಎಂದರು. ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆಯನ್ನು ದೇಶ-ವಿದೇಶಗಳಿಂದ ಬರುವವರು ವೀಕ್ಷಣೆ ಮಾಡಬೇಕು. ಈ ಮೂಲಕ ಅವರ ವ್ಯಕ್ತಿತ್ವವು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆಯಬೇಕು. ಇದು ನಮ್ಮ ಮೂಲ ಉದ್ದೇಶ ಎಂದು ತಿಳಿಸಿದರು.
ಹಿಜಾಬ್-ಕೇಸರಿ ವಿವಾದಕ್ಕೆ ಸಂಬಂಸಿದಂತೆ ಯಾರೊಬ್ಬರು ಮಕ್ಕಳಲ್ಲಿ ಗೊಂದಲ ಸೃಷ್ಟಿಸುವುದು ಬೇಡ. ಶಾಂತಿ ಸುವ್ಯವಸ್ಥೆ ಕಾಪಾಡಲುವಲ್ಲಿ ಪ್ರತಿಯೊಬ್ಬರು ಸ್ವಯಂ ನಿಯಂತ್ರಣ ಹಾಕಿಕೊಳ್ಳಬೇಕು ಎಂದು ಮನವಿ ಮಾಡಿದರು. ನ್ಯಾಯಾಲಯ ಕೂಡ ನ್ಯಾಯ ಕೊಡಲು ನಾವು ಶಾಂತಿಯುತ ವಾತಾವರಣವನ್ನು ನಿರ್ಮಾಣ ಮಾಡಬೇಕು. ಆಗ ಮಾತ್ರ ನ್ಯಾಯ ಸಿಗಲು ಸಾಧ್ಯವಾಗುತ್ತದೆ. ಕಾನೂನು ಸುವ್ಯವಸ್ಥೆಯನ್ನು ಎಲ್ಲರೂ ಪಾಲನೆ ಮಾಡಬೇಕೆಂದು ಸಲಹೆ ಮಾಡಿದರು.
ಹೊರಗಡೆಯಿಂದ ಕೆಲವರು ಬಂದು ಪ್ರಚೋದನೆ ಮಾಡುವ ಕೆಲಸವನ್ನು ಮಾಡಬಾರದು. ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಮಕ್ಕಳ ಶಿಕ್ಷಣಕ್ಕೆ ತೊಂದರೆ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕರ್ನಾಟಕದ ಹಿಜಾಬ್ ವಿಷಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತದೆಯಲ್ಲ ಎಂಬ ಪ್ರಶ್ನೆಗೆ ಮೊದಲು ಇಂತಹ ವಿಷಯಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತವೆ. ನಂತರ ಲೋಕಲ್(ಸ್ಥಳೀಯ) ಮಟ್ಟದಲ್ಲಿ ಚರ್ಚೆಯಾಗುತ್ತದೆ ಎಂದು ಸಿಎಂ ಹಾಸ್ಯ ಚಟಾಕಿ ಹಾರಿಸಿದರು.
