ಕೆಂಪೇಗೌಡ ಪ್ರತಿಮೆ ಅನಾವರಣದ ಮೂಲಕ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಸಜ್ಜು.

Social Share

ಬೆಂಗಳೂರು,ಅ.21- ನಾಡಪ್ರಭು ಹಾಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರತಿಮೆ ಅನಾವರಣದ ಕಾರ್ಯಕ್ರಮವನ್ನು ರಾಜಕೀಯ ಸಮಾವೇಶವನ್ನಾಗಿ ಪರಿವರ್ತಿಸಲು ಆಡಳಿತಾರೂಢ ಬಿಜೆಪಿ ಭಾರೀ ಕಾರ್ಯತಂತ್ರ ರೂಪಿಸಿದೆ.

ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಸಚಿವರಾದ ಅಶ್ವಥ್‍ನಾರಾಯಣ, ಕೆ.ಗೋಪಾಲಯ್ಯ, ನಾರಾಯಣ ಗೌಡ, ಡಾ.ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್ ಸೇರಿದಂತೆ ಒಕ್ಕಲಿಗ ಸಮುದಾಯದ ಪ್ರಮುಖರ ಜೊತೆ ಮಾತುಕತೆ ನಡೆಸಿದ್ದಾರೆ.

ನ.11ರಂದು ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಿರ್ಮಿಸಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಪ್ರಧಾನಿ ನರೇಂದ್ರಮೋದಿ ಅವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಖುದ್ದು ಪ್ರಧಾನಿಯವರೇ ಆಗಮಿಸುತ್ತಿರುವುದರಿಂದ ಇದನ್ನು ಐತಿಹಾಸಿಕ ಸಮಾರಂಭವನ್ನಾಗಿ ಮಾಡುವುದು ಹಾಗೂ ಮೂರು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಕರೆತರಲು ಬಿಜೆಪಿ ಸಜ್ಜಾಗಿದೆ.

ಕೆಂಪೇಗೌಡರ ಹೆಸರಿನಲ್ಲಿ ನಾಡಿನಾದ್ಯಂತ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಶುಕ್ರವಾರದಿಂದ ಚಾಲನೆ ನೀಡಲಾಗಿದೆ. ಈ ಅಭಿಯಾನವು ರಾಜ್ಯದ ಒಕ್ಕಲಿಗರ ಪಾಬಲ್ಯವಿರುವ ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಹಾಸನ, ತುಮಕೂರು, ಮೈಸೂರು ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ನಡೆಯಲಿದೆ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯನ್ನು ಬಲಪಡಿಸಲು ನಾನಾ ರೀತಿಯ ತಂತ್ರಗಳನ್ನು ಕಮಲ ಪಕ್ಷ ಹೆಣೆದಿದೆ. ನಿರೀಕ್ಷಿತ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದಿದ್ದರೂ ಕಡೇ ಪಕ್ಷ 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ ಸ್ವಂತ ಬಲದ ಮೇಲೆ ಅಧಿಕಾರದ ಗದ್ದುಗೆ ಹಿಡಿಯಬಹುದು ಎಂಬುದು ಬಿಜೆಪಿ ಲೆಕ್ಕಾಚಾರ.

ಈಗಾಗಲೇ ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖರ ಜೊತೆ ಎರಡು ಸುತ್ತಿನ ಮಾತುಕತೆಯನ್ನು ನಡೆಸಲಾಗಿದ್ದು, ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಟಪಕ್ಷ 8ರಿಂದ 10 ಸಾವಿರ ಕಾರ್ಯಕರ್ತರನ್ನು ಕರೆತರಬೇಕೆಂದು ಸೂಚಿಸಲಾಗಿದೆ.

2ರಿಂದ 3 ಲಕ್ಷ ಕಾರ್ಯಕರ್ತರನ್ನು ಸೇರಿಸಿ ಶಕ್ತಿ ಪ್ರದರ್ಶಿಸಿ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವುದು ಇದರ ಉದ್ದೇಶವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸರಿ ಸುಮಾರು 75ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ 50 ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದೆ.

ಇದರಲ್ಲಿ 25ರಿಂದ 30 ಕ್ಷೇತ್ರಗಳನ್ನು ಗೆದ್ದರೆ ಸ್ವತಂತ್ರವಾಗಿ ಅಕಾರ ಹಿಡಿಯಬಹುದು. ಹಳೇ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆ ನಿರೀಕ್ಷೆಗೆ ತಕ್ಕಂತೆ ಇಲ್ಲದಿರುವ ಕಾರಣ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ ಎಂದು ಬಿಜೆಪಿ ವರಿಷ್ಠರು ಹೇಳಿದ್ದಾರೆ.

ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯ ನಾಯಕರು ಕೆಂಪೇಗೌಡ ಪ್ರತಿಮೆ ಅನಾವರಣವನ್ನು ರಾಜಕೀಯ ಸಮಾರಂಭವನ್ನಾಗಿ ಮಾಡಿ ಒಕ್ಕಲಿಗ ವೋಟ್ ಬ್ಯಾಂಕ್‍ಗೆ ಲಗ್ಗೆ ಹಾಕಲಿದೆ.

ಬರುವ ದಿನಗಳಲ್ಲಿ ಪ್ರಧಾನಿ ನರೇಂದ್ರಮೋದಿ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತಿತರರು ಮೈಸೂರು ಭಾಗವನ್ನು ಕೇಂದ್ರೀಕರಿಸಿ ಹೆಚ್ಚು ಪ್ರಚಾರ ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Articles You Might Like

Share This Article