ಮಗು ಎತ್ತಿಕೊಂಡು ಭಾಷಣ ಮಾಡಿದ ಜಿಲ್ಲಾಧಿಕಾರಿ ಬಗ್ಗೆ ಪರ-ವಿರೋಧ ಚರ್ಚೆ

Social Share

ತಿರುವನಂತಪುರಂ,ನ.4-ಮಹಿಳಾ ಜಿಲ್ಲಾಧಿಕಾರಿಯೊಬ್ಬರು ಸಾರ್ವಜನಿಕ ಕಾರ್ಯಕ್ರಮದಲ್ಲಿ ತಮ್ಮ ಮುರೂವರೆ ವರ್ಷದ ಮಗುವನ್ನು ಎತ್ತಿಕೊಂಡು ಭಾಷಣ ಮಾಡಿರುವುದು ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ.

ಕೇರಳದ ಪತ್ತನಂತಿಟ್ಟ ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಐಎಎಸ್ ಅಧಿಕಾರಿ ದಿವ್ಯಎಸ್. ಅಯ್ಯರ್ ಅವರು ಖಾಸಗಿ ಸಂಸ್ಥೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ತಮ್ಮ ಮಗನೊಂದಿಗೆ ಕಾಣಿಸಿಕೊಂಡಿದ್ದರು.

ವೇದಿಕೆಯಲ್ಲಿ ಮಗುವನ್ನು ಎತ್ತಿಕೊಂಡು ಕುಳಿತುಕೊಂಡಿದ್ದ ದಿವ್ಯಾ ಅವರು ತಮ್ಮ ಸರದಿ ಬಂದಾಗ ಮಗುವನ್ನು ತೋಳಿನಲ್ಲಿ ಇಟ್ಟುಕೊಂಡೇ ಭಾಷಣ ಮಾಡಿದ್ದಾರೆ. ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ವಿಧಾನಸಭೆಯ ಉಪಾಧ್ಯಕ್ಷ ಚಿಟ್ಟಾಯಂ ಗೋಪಕ್‍ಕುಮಾರ್ ಅವರು ದಿವ್ಯ ಅವರ ಭಾಷಣದ ವಿಡಿಯೋವನ್ನು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡು 6ನೇ ಚಲನಚಿತ್ರೋತ್ಸವದಲ್ಲಿ ಜಿಲ್ಲಾಧಿಕಾರಿ ಮತ್ತು ಅವರ ಪುತ್ರ ಭಾಗವಹಿಸಿದ್ದರು ಎಂದು ಅಡಿಬರಹ ನೀಡಿದ್ದರು.

ಇದಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯ ಈ ವರ್ತನೆ ಸರಿಯಲ್ಲ ಎಂದು ಕೆಲವರು ಆಕ್ಷೇಪವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಮಹಿಳೆ ತನ್ನ ಜೀವನದಲ್ಲಿ ನಾನಾ ಪಾತ್ರಗಳನ್ನು ನಿರ್ವಹಿಸುತ್ತಾರೆ.

ಜಿಲ್ಲಾಧಿಕಾರಿಯಾಗಿ ಕೆಲಸ ಮಾಡುವ ದಿವ್ಯ ಅವರು ತಾಯಿಯೂ ಆಗಿರುವುದರಿಂದ ತಮ್ಮ ಮಗನನ್ನು ವೇದಿಕೆಗೆ ಕರೆತಂದಿರುವುದು ತಪ್ಪಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

2018ರಲ್ಲಿ ನ್ಯೂಜಿಲೆಂಡ್‍ನ ಪ್ರಧಾನಿ ಜೆಸ್ಸಿಂದ ಆ್ಯಂಡ್ರ್ಯೊ ಅವರು ತಮ್ಮ ಮೂರುವರೆ ತಿಂಗಳ ಮಗುವನ್ನು ಎತ್ತಿಕೊಂಡು ರಾಷ್ಟ್ರೀಯ ಸಂಸತ್‍ನಲ್ಲಿ ಭಾಗವಹಿಸಿದ್ದರು ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೂ ಮಾತನಾಡಿದರು. ಈ ಚಿತ್ರಗಳು ಆಗ ಭಾರೀ ವೈರಲ್ಲಾಗಿತ್ತು. ಅದೇ ರೀತಿ ದಿವ್ಯ ಅವರು ಜವಾಬ್ದಾರಿ ನಿಭಾಯಿಸಿದ್ದಾರೆ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ.

Articles You Might Like

Share This Article