ತಿರುವನಂತಪುರಂ, ಫೆ.12- ಕೇರಳ ಶಿಕ್ಷಣ ಇಲಾಖೆಯು 10 ಮತ್ತು 12ನೇ ತರಗತಿಗಳಿಗೆ ಶನಿವಾರ ಆಡಿಯೋ ಪುಸ್ತಕಗಳನ್ನು ಬಿಡುಗಡೆ ಮಾಡಿದೆ.
ಕೈಟ್ ವಿಕ್ಟರ್ಸ್ ಚಾನೆಲ್ ಮೂಲಕ ಪ್ರಸಾರವಾಗುತ್ತಿರುವ ಫಸ್ಟ್ ಬೆಲ್ ಡಿಜಿಟಲ್ ತರಗತಿಗಳ ಮುಂದುವರಿಕೆಯಾಗಿ ಆಡಿಯೋ ಪುಸ್ತಕಗಳು ಅನಾವರಣಗೊಂಡಿವೆ.
ಸಾರ್ವಜನಿಕ ಪರೀಕ್ಷೆಗಳಿಗೆ ಕೆಲವೇ ವಾರಗಳು ಬಾಕಿಯಿದ್ದು ಈ ಹಂತದಲ್ಲಿ ಧ್ವನಿ ಆಧಾರಿತ ಪುಸ್ತಕಗಳು ಮಕ್ಕಳಿಗೆ ಅನುಕೂಲವಾಗಲಿವೆ ಎಂದು ಆಡಿಯೋ ಪುಸಕ್ತಗಳನ್ನು ಬಿಡುಗಡೆ ಮಾಡಿದ ಶಿಕ್ಷಣ ಸಚಿವ ವಿಶಿವನ್‍ಕುಟ್ಟಿ ಹೇಳಿದ್ದಾರೆ.
ಪ್ರತಿ ವಿಷಯವನ್ನು ಸರಾಸರಿ 1.5 ಗಂಟೆಗಳ ಅವಧಿಯಲ್ಲಿ ವಿವರಿಸಲಾಗಿದೆ. 12 ನೇ ತರಗತಿಯ ಆಡಿಯೊ ಪುಸ್ತಕಗಳು ಫೆಬ್ರವರಿ 21 ರಿಂದ ಸಾರ್ವಜನಿಕ ವೇದಿಕೆಗಳಲ್ಲಿ ಲಭ್ಯವಾಗಲಿವೆ. ಫಸ್ಟ್ ಬೆಲ್ ಪೋರ್ಟಲ್ www.firstbell.kite.kerala.gov.in ನಲ್ಲಿ ಲಭ್ಯವಿರುವ ಆಡಿಯೊ ಪುಸ್ತಕಗಳು ರೇಡಿಯೊ ಕಾರ್ಯಕ್ರಮವನ್ನು ಆಲಿಸುವ ರೀತಿಯಲ್ಲಿ ರೂಪಿಸಲಾಗಿದೆ. ಎಂಪಿ3 ಫಾರ್ಮೆಟ್‍ನಲ್ಲಿರುವ ಈ ಪೈಲ್‍ಗಳನ್ನು ಸುಲಭವಾಗಿ ಹಂಚಿಕೊಳ್ಳಬಹುದಾಗಿದೆ.
ಶಿಕ್ಷಣ ಕ್ಷೇತ್ರದ ಸುಧಾರಣೆಯಲ್ಲಿ ಮುಂಚೂಣಿಯಲ್ಲಿರುವ ಕೇರಳ ಈ ಹಿಂದೆ ಶಾಲೆಗಳಿಗೆ ಸರಬರಾಜು ಮಾಡುವ ಎಲ್ಲಾ ಲ್ಯಾಪ್‍ಟಾಪ್‍ಗಳಲ್ಲಿ ಉಚಿತ ಸಾಫ್ಟ್‍ವೇರ್ ಆಧಾರಿತ ಸ್ಕ್ರೀನ್ ರೀಡಿಂಗ್ ಸಾಫ್ಟ್‍ವೇರ್ ಅಳವಡಿಸಿತ್ತು. ಈ ಆಡಿಯೋ ಪುಸ್ತಕಗಳು ದೃಷ್ಟಿ ಚೇತನರಿಗೆ ಅಷ್ಟೇ ಅಲ್ಲದೆ, ಸಾಮಾನ್ಯ ಮಕ್ಕಳಿಗೆ ಅನುಕೂಲವಾಗಿವೆ ಎನ್ನಲಾಗುತ್ತಿದೆ.
ಫಸ್ಟ್ ಬೆಲ್ ಇಲ್ಲಿಯವರೆಗೆ 10 ಸಾವಿರ ತರಗತಿಗಳ ಪ್ರಸಾರವನ್ನು ಪೂರ್ಣಗೊಳಿಸಿದ್ದು, ಇದರಲ್ಲಿ ಕನ್ನಡ ಮತ್ತು ತಮಿಳು ಮಾಧ್ಯಮದ ತರಗತಿಗಳು, ಸಾಮಾನ್ಯ ಮಾಧ್ಯಮ ಮತ್ತು ಇಂಗ್ಲಿಷ್ ತರಗತಿಗಳು ಸೇರಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
