ಮಂಗಳೂರು, ಜು.19- ಕೇರಳದಲ್ಲಿ ಪತ್ತೆಯಾದ ಎರಡನೇ ಮಂಕಿಪಾಕ್ಸ್ ಸೋಂಕಿತ ವ್ಯಕ್ತಿ ಮಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ಆತನೊಂದಿಗೆ ಪ್ರಯಾಣಿಸಿದ್ದವರನ್ನು ಐಸೋಲೆಷನ್‍ಗೆ ಒಳಪಡಿಸಲಾಗಿದೆ.
ಜುಲೈ 13ರಂದು ದುಬೈನಿಂದ ಮಂಗಳೂರಿಗೆ ಪ್ರಯಾಣಿಸಿದ್ದ 31 ವರ್ಷದ ವ್ಯಕ್ತಿಯೊಂದಿಗೆ ವಿಮಾನದಲ್ಲಿ 191 ಮಂದಿ ಸಹ ಪ್ರಯಾಣಿಕರಿದ್ದರು. ಅವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 15, ಉಡುಪಿ ಜಿಲ್ಲೆಯ 6, ಕಾಸರಗೋಡು ಭಾಗದ 13, ಕಣ್ಣೂರು ಪ್ರದೇಶದ ಒಬ್ಬ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ. ಯಾರಿಗಾದರೂ ರೋಗ ಲಕ್ಷಣಗಳಿದ್ದರೆ ತಕ್ಷಣವೇ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಗಿದೆ.
ಸೋಂಕಿತನನ್ನು ಕಣ್ಣೂರಿನ ಮೆಡಿಕಲ್ ಕಾಲೇಜಿನಲ್ಲಿ ತಪಾಸಣೆ ನಡೆಸಲಾಗಿದ್ದು, ರಕ್ತದ ಮಾದರಿಯನ್ನು ಪುಣೆಯ ವೈರಾಣು ಸಂಸ್ಥೆಗೆ ಕಳುಹಿಸಿ ಹೆಚ್ಚಿನ ಪರೀಕ್ಷೆ ನಡೆಸಿ ಸೋಂಕನ್ನು ದೃಢಪಡಿಸಿಕೊಳ್ಳಲಾಗಿದೆ.
ತಕ್ಷಣವೇ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಸೋಂಕಿತನ ಸಮೀಪ ಪ್ರಯಾಣಿಸಿದ 35 ಮಂದಿಯನ್ನು ಪ್ರತ್ಯೇಕ ವಾಸದಲ್ಲಿ(ಐಸೋಲೆಷನ್) ಇರಿಸಲಾಗಿದೆ. ಇದಕ್ಕೂ ಮೊದಲು ಜುಲೈ 12ರಂದು ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾಗಿತ್ತು.