ಬೆಂಗಳೂರು,ಸೆ.16-ಕೋಲಾರ ಜಿಲ್ಲೆ, ಕೆಜಿಎಫ್ ತಾಲ್ಲೂಕಿನ ರಾಬಟ್ಸ್‍ಸನ್‍ಪೇಟೆ ಹೋಬಳಿಯಲ್ಲಿರುವ ಬಿಇಎಂಎಲ್‍ನ 971 ಎಕರೆ ಜಮೀನನ್ನು ಅಭಿವೃದ್ಧಿ ಪಡಿಸಿ ಸಮಗ್ರ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
ಬೆಂಗಳೂರು ಸುತ್ತಮುತ್ತ ಹೊಸದಾಗಿ ಜಮೀನು ಖರೀದಿಸಿ ಕೈಗಾರಿಕಾ ಪ್ರದೇಶ ನಿರ್ಮಿಸುವುದು ಅಷ್ಟು ಸುಲಭವಲ್ಲ. ಇದು ಸರ್ಕಾರಕ್ಕೂ ಹೊರೆ ಹಾಗೂ ಕೈಗಾರಿಕೆ ಪ್ರಾರಂಭಿಸುವ ಉದ್ದೆಮಿಗಳಿಗೂ ಆರ್ಥಿಕ ಹೊರೆಯಾಗುತ್ತದೆ. ಹೀಗಾಗಿ ಕೆಐಎಡಿಬಿಯಲ್ಲಿರುವ ಜಮೀನುಗಳನ್ನು ಅಭಿವೃದ್ಧಿಪಡಿಸಿ ಟೌನ್‍ಶಿಪ್ ನಿರ್ಮಾಣ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-09-2022)
ವಿಧಾನಸಭೆಯ ಪ್ರಶ್ನೋತ್ತರ ಅವಯಲ್ಲಿ ಕಾಂಗ್ರೆಸ್‍ನ ರೂಪಕಲಾ ಅವರ ಪ್ರಶ್ನೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರು ಉತ್ತರಿಸುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಿಎಂ, ಕೆಜಿಎಫ್ ಬೆಂಗಳೂರಿಗೆ ಹತ್ತಿರವಿದ್ದರೂ, ಕೈಗಾರಿಕಾ ವಂಚಿತ ಪ್ರದೇಶವಾಗಿದೆ. ಅದರಲ್ಲೂ ಕೋಲಾರ ಮತ್ತು ಕೆಜಿಎಫ್‍ನಲ್ಲಿ ಗಣಿಗಾರಿಕೆ ನಿಂತ ಮೇಲೆ ಉದ್ಯೋಗದ ಕೊರತೆ ಸೃಷ್ಟಿಯಾಗಿದೆ ಎಂದರು.
ಕೆಜಿಎಫ್‍ನ ಬಿಇಎಂಎಲ್ ಕಾರ್ಖಾನೆಗೆ ಒಟ್ಟು 1870.30 ಎಕರೆ ಜಮೀನನನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ 971.33 ಎಕರೆ ಜಮೀನು ಹಾಗೆಯೇ ಉಳಿದಿದೆ. ಈಗಾಗಲೇ ಇದನ್ನು ಕೈಗಾರಿಕೆ ಸಚಿವರು ಮತ್ತು ಶಾಸಕರು ನನ್ನ ಗಮನಕ್ಕೆ ತಂದಿದ್ದಾರೆ. ಈ ಜಮೀನನ್ನು ಕಂದಾಯ ಇಲಾಖೆಯಿಂದ ಕೈಗಾರಿಕೆ ಇಲಾಖೆ ಹಾಗೂ ಅಲ್ಲಿಂದ ಕೆಐಎಡಿಬಿಗೆ ಹಸ್ತಾಂತರ ಮಾಡುತ್ತೇವೆ.
ಸಮಗ್ರ ಕೈಗಾರಿಕಾ ಟೌನ್‍ಶಿಪ್ ನಿರ್ಮಾಣ ಮಾಡಿ ಉದ್ಯೋಗ ಸೃಷ್ಟಿಗೂ ಗಮನ ಕೊಡುತ್ತೇವೆ ಎಂಬ ಭರವಸೆ ನೀಡಿದರು.
ಇದಕ್ಕೂ ಮೊದಲು ಸಚಿವ ಮುರುಗೇಶ್ ನಿರಾಣಿ ಮಾತನಾಡಿ, ಬಿಇಎಂಎಲ್‍ನಲ್ಲಿ ಬಾಕಿ ಉಳಿದಿರುವ ಜಮೀನನ್ನು ಕಂದಾಯ ಇಲಾಖೆಯಿಂದ ಹಸ್ತಾಂತರ ಮಾಡಲು ನಮ್ಮ ಇಲಾಖೆ ಹಲವಾರು ಬಾರಿ ಪತ್ರ ಮುಖೇನ ಮನವಿ ಮಾಡಲಾಗಿದೆ.
ಇದನ್ನೂ ಓದಿ : ಅಪ್ಪು ಜನ್ಮದಿನವನ್ನು ‘ಸ್ಪೂರ್ತಿ ದಿನ’ವಾಗಿ ಆಚರಿಸಲು ಸರ್ಕಾರ ಘೋಷಣೆ
ಕಂದಾಯ ಸಚಿವ ಆರ್.ಅಶೋಕ್ ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ. ನಮ್ಮ ಇಲಾಖೆಗೆ ಹಸ್ತಾಂತರವಾದರೆ ಕೆಐಡಿಬಿ ಮೂಲಕ ಅಭಿವೃದ್ಧಿಪಡಿಸಿ ಕೈಗಾರಿಕೆ ಸ್ಥಾಪನೆಗೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡುತ್ತೇವೆ ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ದೇಶಪಾಂಡೆ ಅವರು, ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಸರ್ಕಾರ ಮಟ್ಟದಲ್ಲಿ ಹಸ್ತಾಂತರ ಮಾಡುವುದು ದೊಡ್ಡ ಸಮಸ್ಯೆ ಅಲ್ಲ. ನಾನು ಕೈಗಾರಿಕಾ ಸಚಿವನಾಗಿದ್ದಾಗ ಬೇರೆ ಬೇರೆ ಇಲಾಖೆ ಸ್ವಾೀನದಲ್ಲಿದ್ದ ಜಮೀನನ್ನು ಕೆಐಡಿಬಿ ಸುಪರ್ದಿಗೆ ಹಸ್ತಾಂತರ ಮಾಡಿದ್ದೆವು.
ಇದರ ಪರಿಣಾಮ ಕೈಗಾರಿಕೆಗಳು ಸ್ಥಾಪನೆಯಾಗಿ ಉದ್ಯೋಗ ಸೃಷ್ಟಿಯಾದವು. ಬೆಂಗಳೂರು ಸುತ್ತಮುತ್ತ ಒಂದು ಎಕರೆ ಜಮೀನಿಗೆ 2ರಿಂದ 3 ಕೋಟಿ ಹಣ ಕೊಟ್ಟು ಕೈಗಾರಿಕೆ ಸ್ಥಾಪನೆ ಮಾಡಲು ಮುಂದೆ ಬರುವುದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಚಿಂತನೆ ಮಾಡಬೇಕೆಂದು ಸಲಹೆ ನೀಡಿದರು.