ಬೆಂಗಳೂರು,ಆ.26- ಪಕ್ಷದ ನಾಯಕರ ವಿರುದ್ಧ ಅಸಮಾಧಾನಗೊಂಡು ಒಂದು ಕಾಲು ಈಗಾಗಲೇ ಆಚೆ ಇಟ್ಟಿರುವ ಕೇಂದ್ರದ ಮಾಜಿ ಸಚಿವ ಹಾಗು ಪ್ರಭಾವಿ ನಾಯಕ ಕೆ.ಎಚ್.ಮುನಿಯಪ್ಪ ಅವರು, ಸಚಿವ ಸುಧಾಕರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಸದಾಶಿವನಗರದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಧಾ ಕರ್ ನಿವಾಸಕ್ಕೆ ಗೌಪ್ಯವಾಗಿ
ಕಾರಿನಲ್ಲಿ ಆಗಮಿಸಿದ ಅವರು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಮಾತುಕತೆ ವಿವರಗಳು ಪೂರ್ಣವಾಗಿ ಲಭ್ಯವಾಗಿಲ್ಲವಾದರೂ ಬಿಜೆಪಿಗೆ ಬಂದರೆ ಸೂಕ್ತ ಸ್ಥಾನಮಾನ ಕೊಡಿಸುವ ಭರವಸೆಯನ್ನು ಮುನಿಯಪ್ಪ ಅವರಿಗೆ ಸುಧಾಕರ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಲೋಕಸಭೆ ಇಲ್ಲವೆ ವಿಧಾನಸಭೆ ಚುನಾವಣೆಗೆ ಸ್ರ್ಪಧಿಸುವುದಾದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಘಟಕದ ಅಧ್ಯಕ್ಷ ನಳೀನ್‍ಕುಮಾರ್ ಕಟೀಲ್, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಪ್ರಮುಖ ನಾಯಕರ ಜೊತೆ ಮಾತುಕತೆ ನಡೆಸಲಾಗುವುದು.
ಪಕ್ಷಕ್ಕೆ ಬಂದರೆ ನಿಮ್ಮ ಹಿರಿತನ, ಅನುಭವ, ವಯಸ್ಸು ಪರಿಗಣಿಸಿ ಸೂಕ್ತ ಸ್ಥಾನಮಾನವನ್ನು ನೀಡಲಾಗುವುದು ಎಂದು ಅಭಯ ನೀಡಿದ್ದಾರೆ. ಏಳು ಬಾರಿ ಸಂಸದರಾಗಿರುವ ನಿಮ್ಮನ್ನು ಸರಿಯಾಗಿ ನಡೆಸಿಕೊಡುತ್ತಿಲ್ಲ ಎಂಬ ನೋವು ನಮಗೂ ಇದೆ. ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಅನೇಕ ಕಡೆ ಪಕ್ಷದ ಬೆಳವಣಿಗೆಗೆ ನೀವು ಸಾಕಷ್ಟು ಕೊಡುಗೆ ನೀಡಿದ್ದೀರಿ. ಅದರೆ ನಿಮ್ಮಂಥ ಹಿರಿಯರನ್ನೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸುಧಾಕರ್ ಬೇಸರ ಹೊರಹಾಕಿದರು.
ಇದಕ್ಕೆ ದನಿಗೂಡಿಸಿದ ಮುನಿಯಪ್ಪ 2019ರ ಲೋಕಸಭೆ ಚುನಾವಣೆಯ ನಂತರ ನನ್ನನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸುತ್ತಿದ್ದಾರೆ. ನಾನು ಇದನ್ನು ಹೈಕಮಾಂಡ್ ಹಾಗು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅಸಮಾಧಾನ ತಂದಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಕೋಲಾರದಲ್ಲಿ ನನ್ನ ವಿರುದ್ಧ ಎತ್ತಿಕಟ್ಟಲು ಕೆಲವು ಬೇರೊಬ್ಬರನ್ನು ಛೂ ಬಿಟ್ಟಿದ್ದಾರೆ. ಪಕ್ಷ ಬಿಟ್ಟು ಹೋಗಲಿ ಎಂಬುದೇ ಅವರ ಉದ್ದೇಶವಾಗಿರಬೇಕು. ನಾನು ಕೂಡ ಈ ಬಗ್ಗೆ ಗಂಭೀರವಾಗಿಯೇ ಯಾರಿಗೆ ಯಾವ ರೀತಿ ಉತ್ತರಿಸಬೇಕೋ ಅದೇ ದಾಟಿಯಲ್ಲಿ ಉತ್ತರ ಕೊಟ್ಟಿದ್ದೇನೆ ಎಂದು ಮುನಿಯಪ್ಪ ಹೇಳಿದ್ದಾರೆ.
ಬಿಜೆಪಿಗೆ ನೀವು ಬಂದರೆ ಕೋಲಾರ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ನೀಡುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ. ಸೂಕ್ತ ಸಂದರ್ಭದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳಿ ಬಿಜೆಪಿಗೆ ಬಂದರೆ ಖಂಡಿತವಾಗಿಯೂ ನನಗೆ ಸಿಕ್ಕ ಸ್ಥಾನಮಾನಕ್ಕಿಂತಲೂ ಹೆಚ್ಚಿನ ಸ್ಥಾನಮಾನ, ಗೌರವ ಸಿಗಲಿದೆ ಎಂದು ಸುಧಾಕರ್ ಹೇಳಿದ್ದಾರೆ.
ಇದೀಗ ಮುನಿಯಪ್ಪ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದರೆಯೇ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.