ಬೆಂಗಳೂರು,ಆ.27- ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂನಬಿ ಅಜಾದ್ ಬಿಜೆಪಿ, ಆರ್‍ಎಸ್‍ಎಸ್‍ಗೆ ಹೆದರಿ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಸರಿಯಲ್ಲ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್‍ನಲ್ಲಿ ಗುಲಾಂನಬಿ ಅಜಾದ್ 46 ವರ್ಷದಿಂದ ಕೆಲಸ ಮಾಡಿದ್ದಾರೆ. ಪಕ್ಷದಲ್ಲಿ ಎಲ್ಲ ರೀತಿಯ ಅಧಿಕಾರಗಳನ್ನು ಪಡೆದಿದ್ದಾರೆ. 6 ಬಾರಿ ರಾಜ್ಯಸಭೆಯ ಸದಸ್ಯರಾಗಿದ್ದರು. 20ರಿಂದ 25 ವರ್ಷಗಳ ಕಾಲ ಸಚಿವರಾಗಿದ್ದರು. ಪಕ್ಷದ ಮಟ್ಟದಲ್ಲೂ ಅತ್ಯುತ್ತಮ ಸ್ಥಾನ ಪಡೆದಿದ್ದರು ಎಂದು ಹೇಳಿದರು.
ಪ್ರಸ್ತುತ ಪಕ್ಷಕ್ಕೆ ಒಳ್ಳೆಯ ಪರಿಸ್ಥಿತಿ ಇಲ್ಲ. ಹಲವು ವರ್ಷಗಳ ಕಾಲ ಅಧಿಕಾರ ಅನುಭವಿಸಿ ಈಗ ಹೊರ ಹೋಗಿರುವುದು ಅದರಲ್ಲೂ ಆಪಾದನೆ ಮಾಡುತ್ತಿರುವುದು ಸಮರ್ಥನೀಯವಲ್ಲ ಎಂದರು.
ಸಂಕಷ್ಟದ ಸಮಯದಲ್ಲಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವ ರಾಜೀನಾಮೆ ಮತ್ತು ಆರೋಪಗಳು ಎಲ್ಲ ರೀತಿಯ ಅಧಿಕಾರ ಅನುಭವಿಸಿದಂತಹ ಗುಲಾಂನಬಿ ಅಜಾದ್ ಅವರಿಗೆ ಸೂಕ್ತವೆನಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಐಸಿಸಿ ಅಧ್ಯಕ್ಷ ಸ್ಥಾನದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ, ದೆಹಲಿಗೆ ಹೋಗುತ್ತಿದ್ದೇನೆ. ಅಲ್ಲಿ ವರಿಷ್ಠರನ್ನು ಭೇಟಿ ನೀಡುತ್ತಿದ್ದೇನೆ. ಅವರು ಮಾಹಿತಿ ಕೊಟ್ಟರೆ ಬಂದು ನಿಮಗೆ ಹೇಳುತ್ತೇನೆ ಎಂದರು.