ಬೆಂಗಳೂರು,ಮಾ.9-ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಅಗತ್ಯವಿರುವ ಜಮೀನು ಒದಗಿಸಿದರೆ ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಕ್ರೀಡಾಪಟುಗಳಿಗೆ ಅಗತ್ಯವಿರುವ ಸುಸಜ್ಜಿತ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡುವುದಾಗಿ ಯುವಜನ ಕ್ರೀಡಾ ಸಚಿವ ಕೆ.ಸಿ.ನಾರಾಯಣ ಗೌಡ ಅವರು ವಿಧಾನಸಭೆಗೆ ತಿಳಿಸಿದರು.
ಶಾಸಕ ದೇವಾನಂದ ಪೂಲ್‍ಸಿಂಗ್ ಚಹ್ವಾಣ್ ಪ್ರಶ್ನೆಗೆ ಉತ್ತರಿಸಿ, ಖೇಲೋ ಇಂಡಿಯಾ ಯೋಜನೆಯಡಿ ಕನಿಷ್ಠ ನಾಲ್ಕೂವರೆ ಜಮೀನಿನಲ್ಲಿ ಕ್ರೀಡಾಂಗಣ ನಿರ್ಮಿಸಿದರೆ ಕೇಂದ್ರ-ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ 6.5 ಕೋಟಿ ಅನುದಾನವನ್ನು ನೀಡಲಾಗುವುದು. ನಮಗೆ ಎಲ್ಲಿ ಅಗತ್ಯವಿರುತ್ತದೆಯೋ ಅಂತಹ ಕಡೆ ಅನುದಾನದ ಲಭ್ಯತೆ ನೋಡಿಕೊಂಡು ಹಂತ ಹಂತವಾಗಿ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.
25 ಎಕರೆ ಜಮೀನಿನಲ್ಲಿ ಕ್ರೀಡಾಂಗಣ ನಿರ್ಮಿಸಿದರೆ 65 ಕೋಟಿ ಅನುದಾನ ಸಿಗಲಿದೆ. ಈಗಾಗಲೇ ಶಿವಮೊಗ್ಗದಲ್ಲಿ 25 ಎಕರೆ ಜಮೀನು ಲಭ್ಯವಿದ್ದುದ್ದರಿಂದ 65 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ 25 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಮಂಡ್ಯದಲ್ಲೂ ಕೂಡ 25 ಎಕರೆ ಭೂಮಿಯಲ್ಲಿ ಕ್ರೀಡಾಂಗಣ ನಿರ್ಮಿಸುತ್ತಿದ್ದೇವೆ. ಇಲ್ಲಿ ಅಗತ್ಯವಾದ ಜಮೀನು ಲಭ್ಯವಾಗಿರುವುದರಿಂದ ಅನುದಾನ ಬಿಡುಗಡೆಯಾಗುತ್ತದೆ. ಇದೇ ರೀತಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ನಿವೇಶನ ಸಿಕ್ಕರೆ ಸುಸಜ್ಜಿತವಾದ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಲು ನಮ್ಮ ಸರ್ಕಾರ ಬದ್ದವಿದೆ ಎಂದು ಭರವಸೆ ನೀಡಿದರು.
ಅನೇಕ ಕಡೆ ಕ್ರೀಡಾಂಗಣಗಳನ್ನು ನಿರ್ಮಿಸಲು ಜಾಗದ ಕೊರತೆಯಿದೆ. ಶಾಸಕರು ಸಂಬಂಧಪಟ್ಟ ಅಕಾರಿಗಳ ಜೊತೆ ಚರ್ಚಿಸಿ ನಮಗೆ ನಿವೇಶನ ಹಸ್ತಾಂತರಿಸಿದರೆ ಕ್ರೀಡಾಂಗಣ ನಿರ್ಮಿಸಿಕೊಡಲು ಸಿದ್ದ ಎಂದು ನಾರಾಯಣಗೌಡ ಹೇಳಿದರು.
ಶಾಸಕ ಈಶ್ವರ್ ಖಂಡ್ರೆ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ನಾರಾಯಣಗೌಡರು, ಬೀದರ್ ಜಿಲ್ಲೆ ಬಾಲ್ಕಿ ತಾಲ್ಲೂಕು ಕೇಂದ್ರದಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗವನ್ನು ನಿರ್ಮಾಣ ಮಾಡಲು ಹಂತ ಹಂತ ವಾಗಿ ಅನುದಾನ ಬಿಡುಗಡೆ ಮಾಡುವುದಾಗಿ ಆಶ್ವಾಸನೆ ಕೊಟ್ಟರು.
ಬಾಲ್ಕಿಯಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡಾಂಗವನ್ನು ನಿರ್ಮಾಣ ಮಾಡಲು ನಿವೇಶನ ಲಭ್ಯವಿರುವುದಿಲ್ಲ. ಸೂಕ್ತ ಜಮೀನು ಗುರುತಿಸಿ ನಮ್ಮ ಇಲಾಖೆಗೆ ಹಸ್ತಾಂತರ ಮಾಡಬೇಕೆಂದು ಕೋರಲಾಗಿದೆ. ಒಂದು ವೇಳೆ ಜಿಲ್ಲಾಡಳಿತ ತಕ್ಷಣವೇ ನಮಗೆ ಹಸ್ತಾಂತರ ಮಾಡಿದರೆ ಅನುದಾನದ ಲಭ್ಯತೆ ಅನುಸಾರ ಕ್ರೀಡಾಂಗಣ ನಿರ್ಮಿಸಿಕೊಡುವುದಾಗಿ ಹೇಳಿದರು.
