47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ

Spread the love

ಬೆಂಗಳೂರು, ಸೆ.2- ಸ್ಯಾಂಡಲ್‍ವುಡ್‍ನ ಖ್ಯಾತನಟ ಕಿಚ್ಚ ಸುದೀಪ್ ಅವರಿಗೆ ಇಂದು 47ನೆ ಹುಟ್ಟುಹಬ್ಬದ ಸಂಭ್ರಮ. ಚಿತ್ರ ಅಭಿಮಾನಿಗಳು, ಆಪ್ತರು, ಕುಟುಂಬ ವರ್ಗದವರು ಸುದೀಪ್‍ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಸ್ವತಃ ಸುದೀಪ್ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುವುದಾಗಿ ಹೇಳಿರುವುದರಿಂದ ಮನೆಯ ಮುಂದೆ ಯಾವುದೇ ಆಚರಣೆ ಬೇಡ. ಅದರ ಬದಲಿಗೆ ಕೊರೊನಾ ಹಿನ್ನೆಲೆಯಲ್ಲಿ ನಾಡಿನಾದ್ಯಂತ ಕಷ್ಟದಲ್ಲಿರುವವರಿಗೆ ನೆರವಾಗುವಂತೆ ಕರೆಕೊಟ್ಟಿರುವ ಹಿನ್ನೆಲೆಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಅಭಿಮಾನಿಗಳು ಆಯೋಜಿಸಿದ್ದಾರೆ.

ಸುದೀಪ್ ಅವರ ಬಯೋಗ್ರಫಿ ಇಂದು ಬಿಡುಗಡೆಯಾಗುತ್ತಿದ್ದು, ಪತ್ರಕರ್ತ ಶರಣ್ ಹುಲ್ಲೂರು ನಿರೂಪಣೆಯಲ್ಲಿ ಈ ಬಯೋಗ್ರಫಿ ಮೂಡಿಬಂದಿದೆ. ಕೋಟಿಗೊಬ್ಬ-3 ಚಿತ್ರದ ಜಾಲಿ ಟೀಸರ್ ಸಹ ಅವರ ಜನ್ಮದಿನದ ಸುಸಂದರ್ಭದಲ್ಲಿ ಬಿಡುಗಡೆಗೊಳ್ಳುತ್ತಿದೆ.

ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸುದೀಪ್ ಹೆಸರಿನಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದ್ದು, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿರುವ ಒಂದೊಂದು ಆಶ್ರಮಕ್ಕೆ ಒಂದು ತಿಂಗಳಿಗಾಗುವಷ್ಟು ದಿನಸಿ ವಿತರಣೆ, ಕೂಲಿ ಕಾರ್ಮಿಕರು, ಬಡವರು, ನಿರಾಶ್ರಿತರಿಗೆ ಮಾಸ್ಕ್ ವಿತರಣೆ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲೂ ಮಾಸ್ಕ್ ವಿತರಣೆ ಕಾರ್ಯಕ್ರಮವನ್ನು ಹುಟ್ಟುಹಬ್ಬದ ನಿಮಿತ್ತ ಆಯೋಜಿಸಲಾಗಿದೆ.

ವೃದ್ಧರಿಗಾಗಿ ಆರಂಭಿಸಲಾಗುತ್ತಿರುವ ಕಿಚ್ಚನ ಶಾಂತಿನಿವಾಸ ವೃದ್ಧಾಶ್ರಮಕ್ಕೆ ಕೊಡಿಗೇಹಳ್ಳಿಯ ನೈಸ್ ರಸ್ತೆಯಲ್ಲಿ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಶಂಕುಸ್ಥಾಪನೆ ನೆರವೇರಿಸಿದರು.  ಸಾವು-ಬದುಕಿನ ನಡುವೆ ಹೋರಾಡುತ್ತಿರುವ, ನಿರ್ಗತಿಕ ಹಿರಿಯ ಜೀವಿಗಳಿಗೆ ಬೆಳಕಾಗಿರುವ ಆಟೋ ರಾಜ ಜತೆ ಇದ್ದು, ಕಿಚ್ಚ ಸುದೀಪ್ ಸರಳವಾಗಿ ಹುಟ್ಟುಹಬ್ಬದ ಆಚರಿಸಿಕೊಳ್ಳಲಿದ್ದಾರೆ.

ಮಧ್ಯಾಹ್ನ ನಾಗಾವರದ ಆಟೋರಾಜ ಅವರ ಆಶ್ರಮದಲ್ಲಿ ಊಟ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಹುಟ್ಟುಹಬ್ಬ ನೆರವೇರಿಸಿಕೊಳ್ಳುವರು.  ಸುದೀಪ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲೇ ಅವರ ಸತ್ಕಾರ್ಯಗಳನ್ನು ಮೆಚ್ಚಿರುವ ಸಚಿವ ಸುಧಾಕರ್ ಟ್ವಿಟ್ ಮಾಡಿದ್ದು, ಅದು ವೈರಲ್ ಆಗಿದೆ. ವಾಸುಕಿ ವೈಭವ್ ಸಂಯೋಜನೆಯಲ್ಲಿ ರಚನೆಯಾಗಿರುವ ಮೊದಲು ಮಾನವನಾಗು ಎಂಬ ಹಾಡು ಸಹ ಇದೇ ವೇಳೆ ಬಿಡುಗಡೆಗೊಳ್ಳುತ್ತಿದೆ.

ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬದ ಅಂಗವಾಗಿ ಡಾ.ವಿಷ್ಣು ಸುದೀಪ್ ಸೇನೆ ವಿಶೇಷವಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡುತ್ತಿದೆ. ಮೋಷನ್ ಪೋಸ್ಟರ್‍ನಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಮತ್ತು ಸುದೀಪ್ ಅವರ ಕಟೌಟ್ ಒಳಗೊಂಡಿದ್ದು ಗಮನ ಸೆಳೆಯುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ನಟನಾಗಿ ಗುರುತಿಸಿಕೊಂಡಿರುವ ಸುದೀಪ್ ಹಿಂದಿ ಸೇರಿದಂತೆ ಪರಭಾಷೆ ಚಿತ್ರಗಳಲ್ಲಿ ಮಿಂಚಿದ್ದು, ಕನ್ನಡದಲ್ಲಿ ಸಾಕಷ್ಟು ಉತ್ತಮ ಚಿತ್ರಗಳನ್ನು ನೀಡಿರುವ ಪ್ರತಿಭಾವಂತ ನಟ.

Facebook Comments