ಬೆಂಗಳೂರು : ಯುವಕನನ್ನು ಅಪಹರಿಸಿ ಭೀಕರವಾಗಿ ಕೊಂದ ದುಷ್ಕರ್ಮಿಗಳು..!
ಬೆಂಗಳೂರು, ಮೇ 12- ಯುವಕನನ್ನು ಅಪಹರಿಸಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ 7 ಮಂದಿ ಆರೋಪಿಗಳನ್ನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೇಗೂರಿನ ಲಕ್ಷ್ಮಿಪುರದ ನಿವಾಸಿ ಸುಹಾಸ್ ಅಲಿಯಾಸ್ ಅಮೂಲ್ (20) ಕೊಲೆಯಾದ ದುರ್ದೈವಿ ಯುವಕ. ಆರ್ಟಿಒ ಬ್ರೋಕರ್ ಆಗಿರುವ ತಂದೆಯ ಕೆಲಸದಲ್ಲಿ ಸುಹಾಸ್ ನೆರವಾಗುತ್ತಿದ್ದನು.
ಯುಗಾದಿ ಹಬ್ಬದ ಹಿಂದಿನ ದಿನ ಆರೋಪಿಗಳು ಹಾಗೂ ಸುಹಾಸ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳು ಸುಹಾಸ್ ಮೇಲೆ ದ್ವೇಷ ಇಟ್ಟುಕೊಂಡಿದ್ದರು. ಮೇ 9 ರಂದು ರಾತ್ರಿ ಸುಹಾಸ್ ತನ್ನ ಸ್ನೇಹಿತನ ಜೊತೆ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಾರ್ವೆಬಾವಿಪಾಳ್ಯದ ಬಳಿ ವೈನ್ ತೆಗೆದುಕೊಳ್ಳಲು ಬಂದಿದ್ದಾಗ ಆರೋಪಿಗಳು ಹೊಂಚು ಹಾಕಿ ಆಟೋದಲ್ಲಿ ಸುಹಾಸ್ನನ್ನು ಅಪಹರಿಸಿಕೊಂಡು ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಬಸವನಪುರ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ.
ಆರೋಪಿಗಳು ಅಲ್ಲಿ ಸುಹಾಸ್ ಜೊತೆ ಜಗಳವಾಡಿ ಚಾಕುವಿನಿಂದ ಮನಬಂದಂತೆ ಮೂರ್ನಾಲ್ಕು ಕಡೆ ಇರಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದರು. ಇತ್ತ ಸ್ನೇಹಿತನ ಜೊತೆ ಹೋದ ಸುಹಾಸ್ ಮನೆಗೆ ಬಾರದ ಕಾರಣ ಆತನ ತಂದೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ತನ್ನ ಮಗನ ಅಪಹರಣವಾಗಿದೆ ಎಂದು ದೂರು ನೀಡಿದ್ದರು.
ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಮತ್ತು ಸುಹಾಸ್ಗಾಗಿ ಮೂರು ತಂಡಗಳನ್ನು ರಚಿಸಿದ್ದರು. ಈ ತಂಡಗಳು ಕಾರ್ಯಾಚರಣೆ ಕೈಗೊಂಡು ವಿವಿಧ ಆಯಾಮಗಳಲ್ಲಿ ಮಾಹಿತಿ ಸಂಗ್ರಹಿಸಿದಾಗ ಅಪಹರಣವಾಗಿರುವ ಯುವಕ ಕೊಲೆ ಆಗಿರುವುದು ಗೊತ್ತಾಗಿದೆ.
ತನಿಖೆ ಚುರುಕುಗೊಳಿಸಿರುವ ಪೊಲೀಸರು ಯುವಕನ ಶವ ಪತ್ತೆಗಾಗಿ ಹುಡುಕಾಟ ನಡೆಸಿದಾಗ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯ ಬಸವನಪುರ ಸಮೀಪದ ನಿರ್ಜನ ಪ್ರದೇಶದಲ್ಲಿ ದೊರೆತಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿಯನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಹಳೆಯ ದ್ವೇಷದಿಂದ ಕೊಲೆ ಮಾಡಿರುವುದು ಗೊತ್ತಾಗಿದ್ದು ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.