ನಾಲ್ವರು ಅಪಹರಣಕಾರರ ಸೆರೆ

Social Share

ಬೆಂಗಳೂರು, ಫೆ.23- ಆಸ್ತಿ ವ್ಯವಹಾರದಲ್ಲಿ ಮಧ್ಯ ಪ್ರವೇಶಿಸಿ ಪ್ರಾಪರ್ಟಿ ಕೈ ತಪ್ಪುವಂತೆ ಮಾಡಿದ್ದಾನೆಂಬ ದ್ವೇಷದಿಂದ ಇಂಟೀರಿಯರ್ ಡಿಸೈನ್ ವರ್ಕ್‍ಶಾಪ್ ಮಾಲೀಕ ಮತ್ತು ಆತನ ಸ್ನೇಹಿತನನ್ನು ಆಪಹರಣ ಮಾಡಿ ಜೀವ ಬೆದರಿಕೆ ಹಾಕಿದ್ದ ನಾಲ್ವರು ಅಪಹರಣಕಾರರನ್ನು ಕಾಡುಗೊಂಡನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆಜಿ ಹಳ್ಳಿಯ ಶೇಕ್ ಜಬೀವುಲ್ಲಾ (26), ಸಯ್ಯದ್ ಅಬ್ದುಲ್ ಅಜೀಂ (31), ಶಾಬಾಜ್ (27) ಮತ್ತು ರಿಯಾಜ್ (32) ಬಂಧಿತ ಅಪಹರಣಕಾರರು. ಸಯ್ಯದ್ ನಯಾಜ್ ಅಹಮ್ಮದ್ ಮತ್ತು ಸ್ನೇಹಿತ ನವೀನ್ ಖಾನ್ ಅಪಹರಣಕ್ಕೊಳಗಾಗಿದ್ದವರು.
# ಘಟನೆ ವಿವರ:
ಕುಶಾಲನಗರದ ರಾಮಟೆಂಟ್ ರಸ್ತೆಯ 3ನೆ ಕ್ರಾಸ್‍ನಲ್ಲಿರುವ ಇಂಟೀರಿಯರ್ ಡಿಸೈನ್ ವರ್ಕ್‍ಶಾಪ್ ಮುಂಭಾಗದಿಂದ ಫೆ.16ರಂದು ಸಂಜೆ 4 ಗಂಟೆ ಸಮಯದಲ್ಲಿ ಸಯ್ಯದ್ ನಯಾಜ್ ಅಹಮ್ಮದ್‍ನನ್ನು ನಾಲ್ವರು ಚಾಕು ತೋರಿಸಿ ಬೆದರಿಸಿ ಬಿಎಂಡಬ್ಲ್ಯೂ ಕಾರಿನಲ್ಲಿ ಅಪಹರಣ ಮಾಡಿಕೊಂಡು ಹೋಗಿದ್ದ ಬಗ್ಗೆ ಅವರ ಪತ್ನಿ ಸಯ್ಯದ್ ಆಯಿಷಾ ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಂದು ವರ್ಕ್‍ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ ತಬ್ರೇಜ್ ಮತ್ತು ಅಶ್ವಕ್ ಎಂಬುವವರು ನನಗೆ ಈ ವಿಷಯ ತಿಳಿಸಿದ್ದು, ನನ್ನ ಗಂಡನನ್ನು ಹುಡುಕಿಕೊಡಬೇಕೆಂದು ದೂರಿನಲ್ಲಿ ಸಯ್ಯದ್ ಆಯಿಷಾ ತಿಳಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಅಪಹರಣಕಾರರ ಪತ್ತೆಗೆ ತನಿಖೆ ಕೈಗೊಂಡಿದ್ದರು.
ಉಪ ಪೊಲೀಸ್ ಆಯುಕ್ತರಾದ ಡಾ.ಭೀಮಾಶಂಕರ ಗುಳೇದ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಆಯುಕ್ತ ಜಗದೀಶ್, ಇನ್ಸ್‍ಪೆಕ್ಟರ್ ಸಂತೋಷ್ ಕುಮಾರ್, ಸಬ್‍ಇನ್ಸ್‍ಪೆಕ್ಟರ್ ಅಕ್ತರ್ ಪಟೇಲ್, ಎಎಸ್‍ಐ ಶಾಜು ಅಂಥೋನಿ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡ ಅಪಹರಣಕ್ಕೆ ಒಳಗಾದ ಸೈಯದ್ ನಯಾಜ್ ಅಹಮ್ಮದ್ ಪತ್ತೆಗೆ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ಕೈಗೊಂಡಿತ್ತು. ಈ ನಡುವೆ ರಾತ್ರಿ ಸುಮಾರು 11.45ರ ಸುಮಾರಿನಲ್ಲಿ ಅಪಹರಣಕ್ಕೆ ಒಳಗಾಗಿದ್ದ ಸೈಯದ್ ನಯಾಜ್ ಅಹಮ್ಮದ್ ಠಾಣೆಗೆ ಹಾಜರಾಗಿ ನನ್ನನ್ನು ನಾಲ್ವರು ಚಾಕು ತೋರಿಸಿ ಬೆದರಿಸಿ ಕಾರಿನಲ್ಲಿ ಅಪಹರಿಸಿ ರಿಂಗ್ ರಸ್ತೆ, ಹೊರಮಾವು, ಕೆ.ಚನ್ನಸಂದ್ರ ಮಾರ್ಗದಲ್ಲಿ ಹೋಗುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದ ಸ್ನೇಹಿತ ನವೀದ್ ಖಾನ್‍ನಿಗೂ ಸಹ ಚಾಕು ತೋರಿಸಿ ಹೆದರಿಸಿ ಕಾರಿನಲ್ಲಿ ಅಪಹರಿಸಿದರು.
ಸ್ನೇಹಿತನ ಬೈಕ್‍ಅನ್ನು ಅಪಹರಣಕಾರರಲ್ಲಿ ಒಬ್ಬ ಓಡಿಸಿಕೊಂಡು ಬಂದಿದ್ದು, ನಮ್ಮಿಬ್ಬರ ಕಣ್ಣುಗಳಿಗೆ ಬಟ್ಟೆ ಕಟ್ಟಿ ಮೊಬೈಲ್ ಫೋನ್ನ್‍ಗಳನ್ನು ಕಿತ್ತುಕೊಂಡು ಸುಮಾರು ಒಂದು ಗಂಟೆ ಕಾಲ ಕಾರಿನಲ್ಲಿ ಸುತ್ತಾಡಿಸಿ ಯಾವುದೊ ಒಂದು ಮನೆಯಲ್ಲಿ ಕೂಡಿ ಹಾಕಿದ್ದರು.
ನಂತರ ನಮ್ಮನ್ನು ಪುನಃ ಕಾರಿನಲ್ಲಿ ಕೂರಿಸಿಕೊಂಡು ಹೊಸಕೋಟೆಯಿಂದ ಕೆಆರ್ ಪುರಂ ಕಡೆ ಬರುವ ಮಾರ್ಗ ಮಧ್ಯದ ವಿರ್ಗೋನಗರ ಶೆಲ್ ಪೆಟ್ರೋಲ್ ಬಂಕ್ ಮುಂದಿನ ಸರ್ವಿಸ್ ರಸ್ತೆ ಬಳಿ ಕಾರನ್ನು ನಿಲ್ಲಿಸಿ ನಿನ್ನ ಅಕೌಂಟ್‍ನಲ್ಲಿ ದುಡ್ಡು ಎಷ್ಟು ಇದೇ ನನಗೆ ಸೆಂಡ್ ಮಾಡು ಎಂದು ಕೇಳಿದನು. ನಾನು 5000ರೂ.
ಇದೆ ಎಂದು ತಿಳಿಸಿದಾಗ ಒಬ್ಬ ಅಪಹರಣಕಾರ ನನ್ನ ಮೊಬೈಲ್‍ನಲ್ಲಿದ್ದ ಫೋನ್ನ್ ಪೇ ಅಕೌಂಟ್‍ನಿಂದ ಆತನ ಮೊಬೈಲ್ ಕ್ಯೂ.ಆರ್. ಕೋಡ್‍ಗೆ ಸ್ಕ್ಯಾನ್ ಮಾಡಿ 5000ರೂ. ವರ್ಗಾವಣೆ ಮಾಡಿಕೊಂಡು ನಮ್ಮನ್ನು ಅದೇ ಸರ್ವಿಸ್ ರಸ್ತೆಯಲ್ಲಿ ಇಳಿಸಿ ನಾವು ಫೋನ್ನ್ ಮಾಡಿದಾಗ ಫೋನ್ ತೆಗೆಯಬೇಕು. ಇಲ್ಲವಾದಲ್ಲಿ ಕೊಲೆ ಮಾಡುತ್ತೇವೆಂದು ಜೀವ ಬೆದರಿಕೆ ಹಾಕಿ ಕಾರಿನಲ್ಲಿ ಅಲ್ಲಿಂದ ಪರಾರಿಯಾದರೆಂದು ಪೊಲೀಸರಿಗೆ ತಿಳಿಸಿದ್ದಾರೆ.
ಆನಂತರ ನನಗೆ ವಾಟ್ಸಾಪ್ ಕರೆ ಮಾಡಿದ ಅಪಹರಣಕಾರರು 3 ಲಕ್ಷ ಹಣ ನೀಡುವಂತೆ ಕೇಳಿದ್ದಾರೆ. ಹಣ ಕೊಡದಿದ್ದರೆ ಮತ್ತೆ ನಿನ್ನನ್ನು ಅಪಹರಿಸುತ್ತೇವೆಂದು ಬೆದರಿಕೆ ಹಾಕಿರುತ್ತಾರೆಂದು ಹೇಳಿಕೆ ನೀಡಿದ ಮೇರೆಗೆ ಪೊಲೀಸರು ಅಪಹರಣಕಾರರಿಗೆ ಬಲೆ ಬೀಸಿದ್ದಾರೆ.
ಅಪಹರಣಕಾರರ ಮೊಬೈಲ್ ಟವರ್ ಲೊಕೇಷನ್, ತಾಂತ್ರಿಕ ವಿಶ್ಲೇಷಣೆಯಿಂದ ಮಾಹಿತಿ ಸಂಗ್ರಹಿಸಿ ಆರೋಪಿ ಶೇಖ್ ಜಬೀವುಲ್ಲಾನಿಗೆ ಸೇರಿದ ಯಾಸೀನ್‍ನಗರದಲ್ಲಿರುವ ಮಿಸ್ಟರ್ ವಾಷ್ ಎಂಬ ಕಾರ್ ಸರ್ವೀಸ್ ಸೆಂಟರ್‍ನಿಂದ ನಾಲ್ವರು ಆರೋಪಿಗಳನ್ನು ಬಂಸಿದ್ದಾರೆ.
ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ, ಕಾಡುಗೊಂಡನಹಳ್ಳಿ ವ್ಯಾಪ್ತಿಯ ನಿವಾಸಿ ಅಸ್ಲಂ ಅಲಿಯಾಸ್ ಕಲಾಕಾರ್ ಎಂಬಾತ ಖರೀದಿಸಬೇಕೆಂದು ನಿರ್ಧರಿಸಿದ್ದ ಪ್ರಾಪರ್ಟಿಯೊಂದರ ವ್ಯವಹಾರದಲ್ಲಿ ಸಯ್ಯದ್ ನಯಾಜ್ ಅಹಮ್ಮದ್ ಮಧ್ಯಕ್ಕೆ ಬಂದು ಆ ಪ್ರಾಪರ್ಟಿ ಕೈ ತಪ್ಪುವಂತೆ ಮಾಡಿದ್ದರಿಂದ ದ್ವೇಷ ಇಟ್ಟುಕೊಂಡು ಇನ್ನು ಮುಂದೆ ತನ್ನ ವ್ಯವಹಾರದಲ್ಲಿ ತನ್ನ ತಂಟೆಗೆ ಬಾರದಂತೆ ಭಯ ಹುಟ್ಟಿಸಲು ತನ್ನ ಸಹಚರರೊಂದಿಗೆ ಸೇರಿ ಸಂಚು ರೂಪಿಸಿ ಅಪಹರಣ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.

Articles You Might Like

Share This Article